
ಶಿವಮೊಗ್ಗ : ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ನೌಕರರ ಸಂಘದಿಂದ ನಗರದ ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಮಹಾನಗರ ಪಾಲಿಕೆ ನೌಕರರ ಕ್ರಿಕೆಟ್ ಪಂದ್ಯಾವಳಿಗೆ ಇಂದು ಬೆಳಗ್ಗೆ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ವಿದ್ಯುಕ್ತ ಚಾಲನೆ ನೀಡಿದರು.
ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ಆಗಲೇ ಮೈದಾನಕ್ಕಿಳಿದಿದ್ದ ಪಾಲಿಕೆ ಸಿಬ್ಬಂದಿಯ ತಂಡಕ್ಕೆ ಸಾಥ್ ನೀಡಿದ ಶಾಸಕರು ಪಿಚ್ ಮೇಲೆ ಬ್ಯಾಟ್ ಹಿಡಿದು ನಿಂತರು. ಪಾಲಿಕೆ ಸಿಬ್ಬಂದಿ ಬೌಲಿಂಗ್ ಮಾಡಿದರು. ಎದುರು ಬಂದ ಚೆಂಡಿಗೆ ಶಾಸಕರು ಬ್ಯಾಟ್ ಬೀಸಿದರು. ಚೆಂಡು ಅಂಗಳಕ್ಕೆ ಓಡಿತು. ಅದೇ ರೀತಿ ಕೃಷಿ ವಿಶ್ವ ವಿದ್ಯಾನಿಲಯದ ಡೀನ್ ಡಾ. ತಿಪ್ಪೇಸ್ವಾಮಿ ಮತ್ತು ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೊವಿಂದ ಅವರು ಕೂಡ ಬ್ಯಾಟಿಂಗ್ ಮಾಡಿ ಪಂದ್ಯಾವಳಿಗೆ ಚಾಲನೆ ನೀಡಿದರು.
ನಂತರ ಮಾಧ್ಯಮದವರ ಜೊತೆ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, 14 ವರ್ಷಗಳಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದರ ನಿಮಿತ್ತ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ನೇತೃತ್ವದಲ್ಲಿ ವಿಶೇಷವಾದ ಕಾರ್ಯಕ್ರಮವನ್ನು ಯೋಚನೆ ಮಾಡಿ, ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
8 ತಂಡಗಳಲ್ಲಿ ಕ್ರಿಕೆಟ್ ಆಟ ಆಡುವುದರ ಮೂಲಕ ಕ್ರೀಡಾ ಮನೋಭಾವನ್ನು ಹೆಚ್ಚು ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಸಹಜವಾಗಿ ಇವೆಲ್ಲ ಮನುಷ್ಯನ ಬೆಳವಣಿಗೆಗೆ ಬೇಕಾದ ಸಂಗತಿಗಳು. ಮನೋಭಾವ ಹೆಚ್ಚಾದಷ್ಟು ಅವರ ವ್ಯಕ್ತಿಗತ ಜೀವನ ಕೂಡ ಚೆನ್ನಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ನೇತೃತ್ವದಲ್ಲಿ ಗೋವಿಂದಣ್ಣ ಅವರು ಈ ಕಾರ್ಯಕ್ರಮಾವನ್ನು ನಡೆಸಿಕೊಡುತ್ತಿದ್ದಾರೆ. 14 ನೇ ವರ್ಷದ ಪೌರಕಾರ್ಮಿಕರ ದಿನಾಚರಣೆಯ ಶುಭಾಶಯ ಕೋರುತ್ತಾ, ಎಲ್ಲರೂ ಒಟ್ಟಾಗಿ ಇರೋಣ, ಒಟ್ಟಾಗಿ ಈ ರಾಜ್ಯದ ಈ ದೇಶದ ಭವಿಷ್ಯವನ್ನು ನಿರ್ಮಾಣ ಮಾಡೋಣ ಎಂದು ಹೇಳಿದರು.

ಶಾಸಕರು ಬ್ಯಾಟಿಂಗ್, ಪಾಲಿಕೆ ಸಿಬ್ಬಂದಿ ಬೌಲಿಂಗ್
ಪೌರಕಾರ್ಮಿಕರು ಎಂದ ತಕ್ಷಣ, ಅವರು ಬೆಳಗ್ಗೆ ಎದ್ದ ಕೂಡಲೇ ಮೊದಲು ನೋಡುವುದೇ ಕಸ ಪೊರಕೆ ಮತ್ತು ಚರಂಡಿ. ದೇವರ ಮುಖವನ್ನು ನೋಡುವುದಿಲ್ಲ, ಅವರು ಮೊದಲು ನೋಡುವುದು ಪೊರಕೆಯನ್ನು. ಹಾಗಾಗಿ ದೇವರ ಕೆಲಸ, ಹರಿಯ ಕೆಲಸ ಮಾಡುತ್ತಿದ್ದಾರೆ, ಹಾಗಾಗಿ ಗಾಂಧೀಜಿಯವರು ಕೂಡ ಅಂದು ಹರಿಜನ ಎಂದು ಹೇಳಿರುತ್ತಾರೆ. ಇವರೆಲ್ಲ ದೇವತಾ ಪುರುಷರು. ಆ ಹಿನ್ನೆಲೆಯಲ್ಲಿ ಯೋಚನೆ ಮಾಡಿದಾಗ ಇಡೀ ಸಮಾಜ ಪೌರಕಾರ್ಮಿಕರ ವೃಂದಕ್ಕೆ ವಿಶೇಷವಾದ ಆಶೀರ್ವಾದ ಹಾರೈಕೆ ಮಾಡುತ್ತಾ, ಎಲ್ಲರ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರ ಆರೋಗ್ಯ ಚೆನ್ನಾಗಿರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ.
| ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕ
ಪೌರಕಾರ್ಮಿಕರು ಬೆಳಗ್ಗೆ ಎದ್ದ ತಕ್ಷಣ ಪೊರಕೆ ಹಿಡಿದು ಕಾರ್ಯನಿರ್ವಹಿಸುವ ಮೂಲಕ ಕೆಲಸ ಪ್ರಾರಂಭಿಸುತ್ತಾರೆ. ಆದರೆ ಈ ಒಂದು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ದಿನನಿತ್ಯದ ಎಲ್ಲಾ ಜಂಜಾಟವನ್ನು ಮರೆತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಒಗ್ಗೂಡುವಿಕೆ ಮುಖ್ಯ. ಈ ಕಾರ್ಯಕ್ರಮದಲ್ಲಿ ಬಹಳ ಸಕ್ರಿಯವಾಗಿ ತೊಡಗಿಕೊಂಡಿರುವ ಮಹಾನಗರ ಪಾಲಿಕೆಯ ಎಲ್ಲಾ ಪದಾಧಿಕಾರಿಗಳಿಗೆ, ನಿರ್ದೇಶಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ.
| ಎನ್.ಗೋವಿಂದ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರು

ಇದೇ ವೇಳೆ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎನ್.ಗೋವಿಂದ ಮಾತನಾಡಿ, 14ನೇ ವರ್ಷದ ಪೌರಕಾರ್ಮಿಕರ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಪೌರಕಾರ್ಮಿಕ ದಿನಾಚರಣೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಸೆ.23 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಅದರ ನಿಮಿತ್ತ ವಿವಿಧ ಕ್ರೀಡಾ ಚಟುವಟಿಕೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಇಂದು ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಳಿತ ವಿಭಾಗದ ತಂಡ, ರೆವೆನ್ಯೂ ತಂಡ, ನೀರು ಸರಬರಾಜು ತಂಡ, ಲೋಡರ್ಸ್ ತಂಡ, ಡೈವರ್ಸ್ ತಂಡ, ಪೌರಕಾರ್ಮಿಕರ ತಂಡ ಸೇರಿದಂತೆ ಎಲ್ಲಾ ವಿಭಾಗದಿಂದ ಸುಮಾರು 8 ತಂಡಗಳ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಸೆ.17 ರಂದು ಮಹಾನಗರ ಪಾಲಿಕೆ ಆವರಣದಲ್ಲಿ ಎಲ್ಲಾ ಪೌರಕಾರ್ಮಿಕರು ಮತ್ತು ನೌಕರರಿಗೆ ವಿವಿಧ ಕ್ರೀಡಾ ಚಟುವಟಿಕೆಯನ್ನು, ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೆ.23 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧುಬಂಗಾರಪ್ಪನವರು ನೆರವೇರಿಸಲಿದ್ದಾರೆ. ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಈ ಕ್ರೀಡಾ ಚಟುವಟಿಕೆಗೆ ಪೌರ ಕಾರ್ಮಿಕರ ದಿನಾಚರಣೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ಅವರು ನಮಗೆ ಶಕ್ತಿ ನೀಡುವ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಈ ಪೌರಕಾರ್ಮಿಕ ದಿನಾರ್ಚರಣೆಯನ್ನು ನಮಗಾಗಿ ಒಂದು ದಿನ ನಿಗದಿಪಡಿಸಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು ಎಂದರು.