
ಶಿವಮೊಗ್ಗ : ಇ-ಸ್ವತ್ತು ಮಾಡಿಕೊಡಲು ರೂ.3,000/-ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿವಮೊಗ್ಗ ತಾಲ್ಲೂಕು, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕುಮಾರ್ ನಾಯ್ಕ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಸಂಬಂದ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು, ಟ್ರ್ಯಾಪ್ ಮಾಡಿ ಅಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ. ಪ್ರಕರಣದ ಕುರಿತಾಗಿ ಲೋಕಾಯುಕ್ತದಿಂದ ಪ್ರಕಟಣೆಯನ್ನು ನೀಡಲಾಗಿದೆ.

ರಾಮಪುರ ಗ್ರಾಮದ ವಿನೋದ್ ಬಿ. ಎಂಬುವವರು ಅಧಿಕಾರಿಯು ಲಂಚ ಕೇಳುತ್ತಿರುವ ಬಗ್ಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ತಮ್ಮ ದೂರಿನಲ್ಲಿ, ಅವರ ತಾಯಿ ಹೆಸರಿನಲ್ಲಿರುವ 30×50 ಅಡಿ ಅಳತೆಯ ಸೈಟಿನಲ್ಲಿ ನಿರ್ಮಿಸಿರುವ 23×38 ಅಡಿ ಮನೆಯ ಇ-ಸ್ವತ್ತು ಮಾಡಿಸಲು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕಾರ್ಯದರ್ಶಿ ಕುಮಾರ್ ನಾಯ್ಕ್ ಅವರನ್ನು ಹಲವು ಬಾರಿ ಸಂಪರ್ಕಿಸಿದಾಗ, ಅವರು ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಕೊನೆಯಲ್ಲಿ ಕುಮಾರ್ ನಾಯ್ಕ್ ಈ ವಿಚಾರದಲ್ಲಿ ರೂ.3,000/ಗಳ ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದು, ಹಣ ಕೇಳಿದ್ದರ ವಾಯ್ಸ್ ರೆಕಾರ್ಡ್ ನ್ನು ಲೋಕಾಯುಕ್ತ ಅಧಿಕಾರಿಗಳಿಗೆ ನೀಡಿ ದೂರು ದಾಖಲಿಸಿದ್ದರು. ಇವರ ದೂರನ್ನು ಆಧರಿಸಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ಕಲಂ 7(3) ಕೇಸ್ ದಾಖಲಿಸಿದ್ದ ಅಧಿಕಾರಿಗಳು ಇಂದು ಆರೋಪಿತ ಅಧಿಕಾರಿಯನ್ನು ಟ್ರ್ಯಾಪ್ ಮಾಡಿದೆ.
ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೊಠಡಿಯಲ್ಲಿ ಕುಮಾರ್ ನಾಯ್ಕ್ ರೂ.3,000/-ಗಳ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ರೆಡ್ ಹ್ಯಾಂಡ್ ಆಗಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ್ ಚೌದರಿ ಎಂ.ಎಚ್ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧ್ಯಕ್ಷಕ ಬಿ.ಪಿ.ಚಂದ್ರಶೇಖರ್, ಪೊಲೀಸ್ ನಿರೀಕ್ಷಕ ಪಿಐ ಗುರುರಾಜ್ ಎನ್. ಮೈಲಾರ ಈ ಪ್ರಕರಣ ತನಿಖೆ ನಡೆಸುತ್ತಿದ್ದು, ದಾಳಿಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರುದ್ರೇಶ್ ಕೆ.ಪಿ., ಹಾಗೂ ಪೊಲೀಸ್ ಸಿಬ್ಬಂದಿಗಳಾದ ಯೋಗೇಶ್ ಸಿ.ಹೆಚ್.ಸಿ., ಟೀಕಪ್ಪ ಸಿ.ಹೆಚ್.ಸಿ., ಸುರೇಂದ್ರ ಸಿ.ಹೆಚ್.ಸಿ., ಮಂಜುನಾಥ್ ಸಿ.ಹೆಚ್.ಸಿ., ಬಿ.ಟಿ. ಚನ್ನೇಶ್ ಸಿ.ಪಿ.ಸಿ., ದೇವರಾಜ್ ಸಿ.ಪಿ.ಸಿ., ಪ್ರಕಾಶ್ ಬಾರಿದಮರ ಸಿ.ಪಿ.ಸಿ., ಅರುಣ್ ಕುಮಾರ್ ಯು.ಬಿ ಸಿ.ಪಿ.ಬಿ, ಮತಿ ಅಂಜಲಿ ಮ.ಪಿ.ಸಿ., ಮತಿ ಚಂದ್ರಿಬಾಯಿ ಮ.ಪಿ.ಸಿ., ಗೋಪಿ ಎ.ಪಿ.ಸಿ., ಪ್ರದೀಪ್ ಎ.ಹೆಚ್.ಸಿ., ಜಯಂತ್ ಎ.ಪಿ.ಸಿ. ಪಾಲ್ಗೊಂಡಿದ್ದರು.
ಇದನ್ನೂ ಓದಿ ⇒ ಯುವನಿಧಿ ಯೋಜನೆಯ ನೋಂದಣಿ ಅಭಿಯಾನ ಆರಂಭ, ಕೊನೆಯ ದಿನಾಂಕ ಯಾವಾಗ?