
ಶಿವಮೊಗ್ಗ : ಸರ್ಕಾರದಿಂದಲೇ ಮಂಜೂರಾತಿ ಆದೇಶ ಪತ್ರ ಪಡೆದು, ಖಾತೆ, ಪಹಣಿಯೊಂದಿಗೆ ಭೂಮಿ ಸಾಗುವಳಿ ಮಾಡುತ್ತಿರುವ ರೈತರ ದಾಖಲೆಗಳನ್ನು ವಜಾಗೊಳಿಸುವುದಾಗಿ ಉಪವಿಭಾಗಾಧಿಕಾರಿಗಳು ನೊಟೀಸ್ ನೀಡಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ಉಪವಿಭಾಗ ವ್ಯಾಪ್ತಿಯ ಸುಮಾರು ನಾಲ್ಕು ಸಾವಿರ ರೈತರಿಗೆ ನೋಟೀಸ್ ನೀಡಲಾಗಿದೆ. ಶಿಕಾರಿಪುರ ತಾಲೂಕಿನ ಅಂಜನಾಪುರ ಹೋಬಳಿಯ ಕಲ್ಮನೆ, ಚೌಡಿಹಳ್ಳಿ, ದೇವರಹಳ್ಳಿ, ಕೊಪ್ಪದಕೆರೆ ಗ್ರಾಮದ 63 ರೈತರಿಗೆ ಈಗ ನೋಟೀಸ್ ನೀಡಲಾಗಿದೆ. ಇವರೆಲ್ಲೂ ಸಾಗುವಳಿ ಭೂಮಿಗೆ ಖಾತೆ ಪಡೆದಿದ್ದಾರೆ. ಆದರೂ ಈಗ ದಾಖಲೆಗಳನ್ನು ವಜಾ ಮಾಡಲು ಮುಂದಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ರೈತರಿಗೆ ನೋಟೀಸ್ ನೀಡಿ ದಾಖಲೆಗಳನ್ನು ವಜಾಗೊಳಿಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಮುಂದಾಗಿದೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷರು ವಿಧಾನ ಸಭೆಯಲ್ಲಿ ಧ್ವನಿ ಎತ್ತುತ್ತಿಲ್ಲ. ಸಂಸದ ರಾಘವೇಂದ್ರ ಕೂಡ ಮೌನಕ್ಕೆ ಜಾರಿದ್ದಾರೆ.
| ತೀ.ನಾ.ಶ್ರೀನಿವಾಸ್, ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ
ಮಹಾರಾಜರು, ಬ್ರಿಟೀಷರ ಕಾಲದಲ್ಲಿ ಅರಣ್ಯವೆಂದು ನೋಟಿಫಿಕೇಶನ್ ಆಗಿದೆ. ಅದನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸುಮಾರು 135 ವರ್ಷಗಳ ಹಿಂದಿನ ಆದೇಶವನ್ನು ಈಗ ಜಾರಿಗೊಳಿಸಲು ಈಗಿನ ಅಧಿಕಾರಿಗಳು ಮುಂದಾಗಿದ್ದಾರೆ. ಅವರೇನು ಬ್ರಿಟೀಷರ ಸಂತಾನವೇ ಎಂದು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ನೋಟೀಸ್ ನೀಡುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ರೈತರನ್ನು ಒಕ್ಕಲೆಬ್ಬಿಸಲು ನ್ಯಾಯಾಲಯದ ಆದೇಶ ಎನ್ನುತ್ತಾರೆ. ರಾಜಕಾರಣಿಗಳು, ಅಧಿಕಾರಿಗಳಿಗೆ ಬೇಕಾಗಿದ್ದಾಗಿದ್ದರೆ ಸುಪ್ರೀಂ ಕೋರ್ಟ್ ಆದೇಶವನ್ನೇ ಧಿಕ್ಕರಿಸುತ್ತಾರೆ. ಎಲ್ಲದಕ್ಕೂ ಸುಪ್ರೀಂ ಕೋರ್ಟ್ ಕಡೆ ತೋರಿಸುವುದಾದರೆ ಪಾರ್ಲಿಮೆಂಟ್ ಏಕೆ ಬೇಕೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ವಿಧಾನ ಸಭೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತ್ರ ಧ್ವನಿ ಎತ್ತಿದ್ದಾರೆ. ಆದರೆ ಉಳಿದ ಶಾಸಕರು ಯಾರು ಉಸಿರು ಬಿಟ್ಟಿಲ್ಲ, ನಿಜವಾಗಿಯೂ ಸಮಸ್ಯೆ ಇರುವುದು ಸಾಗರ, ತೀರ್ಥಹಳ್ಳಿ, ಸೊರಬ, ಭದ್ರಾವತಿ, ಶಿಕಾರಿಪುರದಲ್ಲಿ, ಆದರೂ ಆ ಕ್ಷೇತ್ರದ ಶಾಸಕರು ಬಾಯಿ ಮುಚ್ಚಿಕೊಂಡಿದ್ದಾರೆ. ಈ ಬಾರಿ ಅಧಿವೇಶನದಲ್ಲಿ ಇವರು ಧ್ವನಿ ಎತ್ತಿಲ್ಲವೆಂದರೆ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲಿ ಕಲ್ಮನೆ ಗ್ರಾಮದ ಕೊಟ್ರೇಶ್, ಶ್ರೀನಿವಾಸ್, ನೀಲಕಂಠ, ವೀರಪ್ಪ ಶಿವಮಾದಯ್ಯ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ ⇒ ಸರಳ ಸಜ್ಜನಿಕೆಯ ಶಾಸಕ ‘ಚೆನ್ನಿ’ ಹುಟ್ಟುಹಬ್ಬ: ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಶುಭ ಹಾರೈಕೆ