
ಶಿವಮೊಗ್ಗ : ಕೇಂದ್ರ ಸರ್ಕಾರವು ಯುವಕರಲ್ಲಿ ಕ್ರೀಡೆ, ಸಾಂಸ್ಕೃತಿಕ ಮತ್ತು ನಾಯಕತ್ವವನ್ನು ಉತ್ತೇಜಿಸುವ ಸಲುವಾಗಿ ಹಾಗೂ ದೇಶದಾದ್ಯಂತ ಜನ ಸಾಮಾನ್ಯರಲ್ಲಿನ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲಿ ‘ಸಂಸದ್ ಖೇಲ್ ಮಹೋತ್ಸವ-2025’ ನ್ನು ಆಚರಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡೆ ಮತ್ತು ಫಿಟ್ ನೆಸ್ ಮೂಲಕ ಸಮುದಾಯವನ್ನು ಒಟ್ಟುಗೂಡಿಸುವ, ಫಿಟ್ ಇಂಡಿಯಾದ ಸಂದೇಶವನ್ನು ಪ್ರತಿ ಮನೆಗೂ ಹರಡುವ ನಿಟ್ಟಿನಲ್ಲಿ ಈ ಆಚರಣೆಯನ್ನು ಮೂರು ಹಂತಗಳಲ್ಲಿ ಮಾಡಲಾಗುತ್ತಿದೆ. ಆಗಸ್ಟ್ 29 ರಂದು ನೆಹರೂ ಕ್ರೀಡಾಂಗಣದಲ್ಲಿ ಪೋರ್ಟಲ್ ಅಧಿಕೃತವಾಗಿ ಲಾಂಚ್ ಮಾಡಲಾಗುವುದು ಎಂದರು.

2030 ಕ್ಕೆ ಕಾಮನ್ ವೆಲ್ತ್ ಕ್ರೀಡಾ ಸ್ಪರ್ಧೆ ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಯುವ ಕ್ರೀಡಾ ಪ್ರತಿಭೆಯನ್ನು ಹುಡುಕುವ ಪ್ರಯತ್ನ ಇದಾಗಿದೆ. ಸಂಸತ್ ಗೇಲ್ ಮಹೋತ್ಸವ್ – 2025 ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುವ ಅವಕಾಶಗಳು ಮತ್ತು ಸಮುದಾಯ ಅಭಿವೃದ್ಧಿ ಮತ್ತು ಕ್ರೀಡಾ ನಾಯಕತ್ವ ವಿಜೇತರನ್ನು ನಮೋ ಫಿಟ್ ಇಂಡಿಯಾ ನಾಯಕರನ್ನಾಗಿ ಮಾಡಲಾಗುವುದು.
– ಬಿ.ವೈ.ರಾಘವೇಂದ್ರ, ಸಂಸದರು
ನರೇಂದ್ರ ಮೋದಿಯವರ ನೇತೃತ್ವದಲ್ಲಿ 2014 ರ ನಂತರ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಆಗುತ್ತಾ ಇದೆ. ಜನರ ಕಲ್ಯಾಣಕ್ಕಾಗಿ ದೇಶದ ಅಭಿವೃದ್ಧಿಗಾಗಿ ಅನೇಕ ಸವಾಲುಗಳ ಮಧ್ಯೆಯೂ ಹಾಗೂ ಆರ್ಥಿಕವಾಗಿ ಭಾರತಕ್ಕೆ ಅನೇಕ ಆಪಾದನೆಗಳು ಬಂದರೂ ಕೂಡ ಆರ್ಥಿಕ ಪರಿಸ್ಥಿತಿ ಹದಗೆಡದ ರೀತಿಯಲ್ಲಿ ದೇಶವನ್ನು ಯಶಸ್ವಿಯತ್ತ ತೆಗೆದುಕೊಂಡು ಹೋಗಲಾಗುತ್ತಿದೆ ಎಂದರು.
ಆಗಸ್ಟ್ 29, 2019 ಫಿಟ್ ಇಂಡಿಯಾ ಚಳುವಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತವಾಗಿ ಚಾಲನೆ ಮಾಡಿದ ದಿನ. ಈ ದಿನವು ಹಾಕಿ ಕ್ರೀಡೆಯ ಧ್ಯಾನ ಚಂದ್ ಅವರ ಜನ್ಮ ದಿನವೂ ಆಗಿದೆ. ಈ ಚಳುವಳಿಯ ಆಶಯವೆಂದರೆ ಭಾರತದ ಪ್ರತಿಯೊಬ್ಬ ನಾಗರೀಕನು ದೈನಂದಿನ ಜೀವನದಲ್ಲಿ ಆರೋಗ್ಯವನ್ನು ಹೊಂದಬೇಕು ಎನ್ನುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಮೂರು ಹಂತದಲ್ಲಿ ಸ್ಪರ್ಧೆಗಳು :
ಕ್ರೀಡೆಗಳ ವಿವರ :
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಈ ಕೆಳಕಂಡಂತೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪಿಯುಸಿ ನಂತರದವರು ಈ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ.
ನೋಂದಣಿಗೆ ಕಡೆಯ ದಿನಾಂಕ :
ಕ್ರೀಡೆಯಲ್ಲಿ ಭಾಗವಹಿಸಲಿರುವ ಕ್ರೀಡಾಸಕ್ತರು ಆನ್ ಲೈನ್ ಪೋರ್ಟಲ್ ನಲ್ಲಿ ಆಗಸ್ಟ್ 29 ರಿಂದ ಸೆಪ್ಟೆಂಬರ್ 20 ರೊಳಗೆ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳತಕ್ಕದ್ದು. ಕ್ರೀಡಾ ಕೂಟ ನಡೆಯುವ ನಿರ್ದಿಷ್ಟ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.
ಗ್ರಾಮೀಣ ಮಟ್ಟ, ಬ್ಲಾಕ್/ವಾರ್ಡ್ ಮಟ್ಟ ಸಂಸದೀಯ ಕ್ಷೇತ್ರ ಮಟ್ಟದ ಎಲ್ಲಾ 3 ಹಂತದ ಆಟಗಳನ್ನು ಹಂತ ಹಂತವಾಗಿ ದಿನಾಂಕ: 21.09.2025 ರಿಂದ 25.12.2025 ರೊಳಗೆ ನಡೆಸಲಾಗುವುದು ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕ್ರೀಡಾಸಕ್ತರು ಆನ್ ಲೈನ್ ಪೋರ್ಟಲ್ ಮೂಲಕ ಅಥವಾ ಸಂಸದರ ಕಚೇರಿಯಲ್ಲಿ ಆಫ್ ಲೈನ್ ಮೂಲಕ ಆಗಸ್ಟ್ 29 ರಿಂದ ಸೆಪ್ಟೆಂಬರ್ 20 ರೊಳಗೆ ನೋಂದಣಿಯನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಲೋಕಸಭಾ ಸಂಸದರ ಕಚೇರಿಯ Registration Drive ಮುಖ್ಯಸ್ಥರಾದ ಶ್ರೀಧರ್.ಎಂ.ಬಿ ದೂರವಾಣಿ ಸಂಖ್ಯೆ : 9606025869 ನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಎನ್.ಕೆ.ಜಗದೀಶ್, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹರಿಕೃಷ್ಣ, ಮಾಲತೇಶ್, ಪ್ರಮುಖರಾದ ಪ್ರಶಾಂತ್, ಸುದರ್ಶನ್, ಚಂದ್ರಶೇಖರ್, ಅಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.