
ಶಿವಮೊಗ್ಗ : ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಗಳು ವಿದ್ಯಾರ್ಥಿ ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯವನ್ನು ಹಾಗೂ ಉತ್ತಮ ಮೌಲ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಹೇಳಿದರು.
ಇಂದು ಜಯಪ್ರಕಾಶ್ ನಾರಾಯಣ್ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಭಾಗ) ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಶಿವಮೊಗ್ಗ, ಮಹಾನಗರ ಪಾಲಿಕೆ, ಸಮೂಹ ಸಂಪನ್ಮೂಲ ಕೇಂದ್ರ, ಕೆ.ಆರ್.ಪುರಂ, ಜಯಪ್ರಕಾಶ್ ನಾರಾಯಣ್ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಭಾಗ) ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕೆ.ಆರ್.ಪುರಂ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಗಳು ಸಾಂಸ್ಕೃತಿಕವಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ. ಈ ಕಾರ್ಯಕ್ರಮದಲ್ಲಿ ಒಟ್ಟು 27 ಶಾಲೆಗಳು ಭಾಗವಹಿಸಿವೆ. ಈ ವಿದ್ಯಾರ್ಥಿ ಸಮೂಹದಲ್ಲಿ ವಿದ್ಯಾರ್ಥಿಗಳು ವಿವಿಧ ಶಾಲೆಗಳಿಂದ ಬಂದಿರುವ ವಿದ್ಯಾರ್ಥಿಗಳ ಕಲೆ ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮ ಉತ್ತಮ ಸಂಬಂಧವನ್ನು ಬೆಸೆಯುವಲ್ಲಿ ಸಹಕಾರ ಆಗುತ್ತದೆ. ಜೊತೆಗೆ ಮಕ್ಕಳಿಗೆ ಉತ್ತಮ ಮೌಲ್ಯವನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ. ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಇಂತಹ ಪ್ರತಿಭಾ ಕಾರಂಜಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ.
– ನಾಗರಾಜ್, ರಾಷ್ಟೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಭರ್ಮಪ್ಪ ಪ್ರಸಾದ್ ಮಾತನಾಡಿ, ನಮ್ಮ ಶಾಲಾ ಶಿಕ್ಷಣ ಸಮಿತಿಯ ಪ್ರತಿಷ್ಠಿತ ಕಾರ್ಯಕ್ರಮ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ. ಈ ಕಾರ್ಯಕ್ರಮದಲ್ಲಿ ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಹಕಾರಿಯಾಗಿದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ದೊಡ್ಡಪೇಟೆ ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಮಾತನಾಡಿ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಒಂದು ಉತ್ತಮ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಕೆ.ಆರ್.ಪುರಂ. ಶಾಲೆಯ ವಲಯ ಮಟ್ಟದ ಸಂಪನ್ಮೂಲ ಸಮನ್ವಯಾಧಿಕಾರಿ ಫಯಾಜ್ ಖಾನ್, ಶಾಲಾ ಶಿಕ್ಷಕರ ವೃತ್ತಿಯಲ್ಲಿರುವ ನಾವುಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಸೋಲು ಗೆಲುವು ಸಹಜ. ಆದರೆ ಮಕ್ಕಳೆಲ್ಲರೂ ಉತ್ತಮ ಪ್ರದರ್ಶನ ನೀಡಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೆ ಕಳುಹಿಸುವ ಪ್ರಯತ್ನ ಮಾಡುತ್ತೇವೆ. ನಿಮ್ಮ ಶ್ರದ್ಧೆ ಹೆಚ್ಚು ಇರಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಣಕರಾದ ಇಮ್ತಿಯಾಜ್ ಅಹಮದ್ ಮಾತನಾಡಿ, ನಮ್ಮ ರಾಷ್ಟೀಯ ಶಿಕ್ಷಣ ಸಮಿತಿ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ರಾಷ್ಟೀಯ ಶಿಕ್ಷಣ ಸಮಿತಿಯು ಈ ಕಾರ್ಯಕ್ರಮಕ್ಕೆ ಪರೋಕ್ಷವಾಗಿ ಸಹಕಾರ ನೀಡಿದೆ. ಎಲ್ಲಾ ಮಕ್ಕಳು ತಮ್ಮ ಕಲೆಯನ್ನು ಉತ್ತಮ ರೀತಿಯಲ್ಲಿ ಅನಾವರಣಗೊಳಿಸಿಕೊಳ್ಳಲು ಇದೊಂದು ಅದ್ಭುತ ಅವಕಾಶವಾಗಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ನಿಮ್ಮ ಕಲೆ, ಜ್ಞಾನವನ್ನು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿ ಎಂದರು.
ಇದೇ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಶಿವಮೊಗ್ಗ ಇಲ್ಲಿ 2014-17 ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ವೇದಿಕೆಯ ಸ್ಕ್ರೀನ್ ನ್ನೂ ಕೊಡುಗೆಯಾಗಿ ನೀಡಿ ರಾಷ್ಟೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಅವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನಧಾರ ಶಾಲೆಯ ಸಂಸ್ಥಾಪಕರಾದ ರುದ್ರೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿಲೀಪ್ ಕುಮಾರ್ ಪಾಂಡೆ, ವಿವಿಧ ಶಾಲೆಯ ಶಿಕ್ಷಕರು ಹಾಗೂ ಜಯಪ್ರಕಾಶ್ ನಾರಾಯಣ್ ಪ್ರೌಢ ಶಾಲೆಯ ಶಿಕ್ಷಕರು, ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
