ರಂಗೋ.. ರಂಗು.. ಶಿವಮೊಗ್ಗ ನಗರವನ್ನೇ ವರ್ಣಮಯಗೊಳಿಸಿದ ಹೋಳಿ ಹಬ್ಬ….

ಶಿವಮೊಗ್ಗ : ಹೋಳಿ ಹಬ್ಬದ ಆಚರಣೆ ಬುಧವಾರ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಯುವಕ ಯುವತಿಯರು ಬಣ್ಣ ಬಳಿದುಕೊಂಡು, ಪರಸ್ಪರ ಎರಚಿಕೊಂಡು ರಂಗು ರಂಗಿನ ಹೋಳಿಯ ಸಂಭ್ರಮದಲ್ಲಿ ಮಿಂದೆದ್ದರು. ಗಾಂಧಿ ಬಜಾ‌ರ್, ಸಿಗೇಹಟ್ಟಿಯಲ್ಲಿ ಕಾಮನ ಪ್ರತಿಕೃತಿ ದಹನ ಮಾಡುವ ಮೂಲಕ ಹೋಳಿ ಹಬ್ಬದ ಐತಿಹ್ಯ ಮೆರೆದರು.

ಭ್ರಾತೃತ್ವದ ಕೊಂಡಿ ಬೆಸೆಯುವ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬ ನಗರದ ಜನತೆಯ ಮನಸ್ಸನ್ನು ಓಕುಳಿಯಲ್ಲಿ ತೇಲಿಸಿತು. ಹಿರಿಯರು ಕಿರಿಯರೆನ್ನದೆ, ಜಾತಿ ಭೇದ-ಭಾವ ಮರೆತು ಭಾವೈಕ್ಯದಿಂದ ಕೂಡಿ ಬಣ್ಣದ ಜಗತ್ತಿನಲ್ಲಿ ಮಿಂದೆದ್ದರು.

ಶಿವಮೊಗ್ಗ ನಗರದ ಗಾಂಧಿ ಬಜಾರ್, ದುರ್ಗಿಗುಡಿ, ವಿನೋಬನಗರ, ಕೋಟೆ ರಸ್ತೆ, ಶರಾವತಿ ನಗರ, ಹೊಸಮನೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿಯನ್ನು ಸಡಗರದಿಂದ ಆಚರಿಸಿದರು. ಗಾಂಧಿ ಬಜಾರ್, ರವಿವರ್ಮ ಬೀದಿ, ಕುಂಬಾರ ಬೀದಿ ಸೇರಿದಂತೆ ಹಲವೆಡೆ ಮನ್ಮಥನನ್ನು ಪ್ರತಿಷ್ಠಾಪಿಸಲಾಗಿತ್ತು. ಕಾಮ ದಹನ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.

ಪೊಲೀಸರ ಕಟ್ಟೆಚ್ಚರದ ನಡುವೆಯೂ ಯುವಕ, ಯುವತಿಯರು ಜೋರಾಗಿ ಕೂಗತ್ತಾ, ಬೈಕ್ ರೈಡ್ ನಡೆಸುತ್ತಾ ಸಾಗುತ್ತಿರುವುದು ಸಾಮಾನ್ಯವಾಗಿತ್ತು. ಕೆಲವು ಕಡೆ ಗುಂಪುಗುಂಪಾಗಿ ಮಡಕೆ ಒಡೆಯುವುದು, ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡುವುದು ಕಂಡುಬಂತು. ಪುಟ್ಟ ಮಕ್ಕಳು ಪರಸ್ಪರ ಬಣ್ಣದ ನೀರು ಎರಚಿ, ಬಣ್ಣದ ಹೋಳಿಯಲ್ಲಿ ಮಿಂದೆದ್ದರು.

ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ನಗರದ ಗೋಪಿ ವೃತ್ತದಲ್ಲಿ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದ ಯುವ ಸಮೂಹ ಡಿ.ಜೆ. ನೃತ್ಯ ಹಾಗೂ ರೈನ್ ಡಾನ್ಸ್ ನಲ್ಲಿ ಸಾವಿರಾರು ಯುವಕ-ಯುವತಿಯರು ಪಾಲ್ಗೊಂಡು ಹೋಳಿ ಆಚರಣೆ ರಂಗೇರುವಂತೆ ಮಾಡಿದರು. ರೈನ್ ಡಾನ್ಸ್ ಗೆ ಅಂತಲೇ ದೊಡ್ಡ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಳೆದ ವರ್ಷದಂತೆ ಈ ಬಾರಿಯೂ ಹೋಳಿ ಆಚರಣೆ ಗೋಪಿ ವೃತ್ತದಲ್ಲಿಯೇ ಕೇಂದ್ರಿಕೃತವಾಗಿ, ಇಡೀ ಹಬ್ಬವೇ ರಂಗೇರುವಂತೆ ಮಾಡಿತು. ಕೇಸರಿ ಅಲಂಕಾರ ಸಮಿತಿ ವತಿಯಿಂದ ಅದ್ದೂರಿಯಾಗಿ ರಂಗಿನ ಹಬ್ಬ ಆಚರಿಸಲು ಅವಕಾಶ ಕಲ್ಪಿಸಲಾಗಿತ್ತು. ನೃತ್ಯ, ಡಿಜೆ ಸೌಂಡ್, ಒಬ್ಬರಿಗೊಬ್ಬರು ನೀರೆರೆಚುವ ಮೂಲಕ ಸಾವಿರಾರು ಯುವಕ-ಯುವತಿಯರು ಖುಷಿಯ ಸಾಗರದಲ್ಲಿ ಕುಣಿದು ಕುಪ್ಪಳಿಸಿದರು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿತ್ತು. ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರನ್ನು ರಕ್ಷಣಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು.

ಹೋಳಿ ಆಚರಣೆ ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಎಂ.ಜಿ. ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಳಿಗೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತು ಜನರು ವೀಕ್ಷಿಸಿದರು. ಮೈತುಂಬ ಬಣ್ಣ ಹಚ್ಚಿಕೊಂಡ ಜನರು, ಸೆಲ್ಪಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು. ಹೋಳಿ ಹಬ್ಬದ ಸಂಭ್ರಮದ ನಡುವೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಬಸ್‌ ನಿಲ್ದಾಣ ಗಾಂಧಿ ಬಜಾರ್, ಕೋಟೆ ರಸ್ತೆ, ಪೊಲೀಸ್ ಚೌಕಿ, ವಿದ್ಯಾನಗರ, ಕಲ್ಲಳ್ಳಿ, ಡಿ.ವಿ.ಎಸ್. ಕಾಲೇಜು, ಇಂಜಿನಿಯರಿಂಗ್ ಕಾಲೇಜ್, ಸಾಗರ ರಸ್ತೆ, ಗೋಪಾಳ ಬಡಾವಣೆ ಮುಂತಾದ ಅನೇಕ ಕಡೆಗಳಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಕೂಡ ಹಬ್ಬದಲ್ಲಿ ಪಾಲ್ಗೊಂಡರು. ಯುವಕರು ಮತ್ತು ಯುವತಿಯರು ಕೂಡ ತಮ್ಮ ಬೈಕ್‌ಗಳಲ್ಲಿ ಸಂಚರಿಸುತ್ತ ಘೋಷಣೆ ಕೂಗುತ್ತ ಪರಸ್ಪರ ಬಣ್ಣ ಎರಚುತ್ತ ಹಬ್ಬ ಆಚರಿಸಿದರು.

ಶಿವಮೊಗ್ಗದ ಗೋಪಿ ವೃತ್ತದಲ್ಲಿ ಕೇಸರಿ ಹಿಂದೂ ಅಲಂಕಾರ ಸಮಿತಿಯು ಏರ್ಪಡಿಸಿದ್ದ ಹೋಳಿ ಹಬ್ಬದ ಆಚರಣೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಪಾಲ್ಗೊಂಡರು. ಅಲ್ಲಿ ನೆರೆದಿದ್ದ ಸಾರ್ವಜನಿಕರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಬೆರೆತು ಬಣ್ಣದ ಓಕುಳಿ ಯಲ್ಲಿ ಮಿಂದೆದ್ದರು. ಆ ಮೂಲಕ ಆಚರಣೆಗೆ ಮತ್ತಷ್ಟು ಮೆರಗು ಬರುವಂತೆ ಮಾಡಿದರು.

ಹೋಳಿ ಹಬ್ಬ ಸಾಮರಸ್ಯದ ಸಂಕೇತವಾಗಿದೆ. ಬಣ್ಣಗಳನ್ನು ಎಲ್ಲರೂ ಸೇರಿ ಎರಚುವುದು ಸಹಿಷ್ಣುತೆಯ ಸಂಕೇತವಾಗಿದೆ. ಈ ಬಾರಿ ಕರ್ಕಶ ಶಬ್ದಗಳನ್ನು ಹೊರಹಾಕುವ ಬೈಕ್‌ಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಹಲವು ಕಡೆ ಕಂಡುಬಂದಿತು. ಕೆಲವು ಕಡೆ ಸಾರ್ವಜನಿಕರಿಗೆ ಕಿರಿಕಿರಿಯೂ ಆಯಿತು. ಒಟ್ಟಾರೆ ಈ ಬಾರಿಯ ಹೋಳಿ ಹಬ್ಬ ಅತ್ಯಂತ ಸಂಭ್ರಮದಿಂದ ನಡೆಯಿತು.

ಸಂಚಾರ ಮಾರ್ಗ ಬದಲು :

ಗೋಪಿ ವೃತ್ತದಲ್ಲಿ ಹೋಳಿ ಆಚರಣೆ ಇದ್ದ ಕಾರಣಕ್ಕೆ ವಾಹನಗಳ ಸಂಚಾರ ಮಾರ್ಗ ಬದಲಿಸಲಾಗಿತ್ತು. ಬಾಲ ರಾಜ್ ಅರಸ್ ರಸ್ತೆ, ದುರ್ಗಿಗುಡಿ ರಸ್ತೆ, ಬಿ.ಹೆಚ್. ರಸ್ತೆಗಳಲ್ಲಿ ವಾಹನ ಸಂಚಲನವನ್ನು ನಿರ್ಬಂಧಿಸಿ, ಬೇರೆ ಕಡೆಗಳಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿತ್ತು. ಬಿ.ಹೆಚ್. ರಸ್ತೆಯ ಮಾರ್ಗವಾಗಿ ನೆಹರು ರಸ್ತೆ ಮೂಲಕ ವಾಹನಗಳಿಗೆ ಬಿ.ಹೆಚ್. ರಸ್ತೆಯಲ್ಲಿನ ಕರ್ನಾಟಕ ಸಂಘ ಪಕ್ಕದ ರಸ್ತೆಯಲ್ಲಿ ಮಹಾವೀರ ಸರ್ಕಲ್‌ಗೆ ಬಂದು ಸೇರಲು ವ್ಯವಸ್ಥೆ ಮಾಡಲಾಗಿತ್ತು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...