
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ, ಬ್ಯಾಂಕಿನ 68ನೇ ವಾರ್ಷಿಕ ಮಹಾಸಭೆಯನ್ನು ಸೆ.10 ರಂದು ಬೆಳಗ್ಗೆ 11.00 ಗಂಟೆಗೆ ನಗರದ ಬಂಜಾರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಅಥವಾ ಕೇಂದ್ರ ಸರ್ಕಾರದ ಷೇರುಧನ ಇಲ್ಲದೆ ಸ್ವಂತ ನಡೆಯುತ್ತಿರುವ ಬ್ಯಾಂಕ್ ಗಳಲ್ಲಿ ಡಿಸಿಸಿ ಬ್ಯಾಂಕ್ ಕೂಡ ಒಂದು. ಸರ್ಕಾರದ ಯಾವುದೇ ನೆರವಿನ ಅವಶ್ಯಕತೆ ಇಲ್ಲ. ಸರ್ಕಾರದ ಹಸ್ತಕ್ಷೇಪ ಇರಬಾರದೆಂದು ಸರ್ಕಾರದ ಷೇರುಧನವನ್ನು ಹಿಂದಿರುಗಿಸಿದ್ದೇವೆ. ಪ್ರಸ್ತುತ ಬ್ಯಾಂಕ್ ರೂ.1,700 ಕೋಟಿ ಠೇವಣಿ ಮತ್ತು ರೂ.2,600 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಕಳೆದ ವರ್ಷ ಬ್ಯಾಂಕಿನ ಒಟ್ಟು ವಹಿವಾಟು ರೂ.3,600 ಕೋಟಿ ಆಗಿತ್ತು. ನೌಕರರಿಗೆ ಸರ್ಕಾರದ ಏಳನೇ ವೇತನ ಆಯೋಗದ ಶಿಫಾರಸ್ಸುಗಳಂತೆ ವೇತನ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಸ್ಥಾಪನೆಗೊಂಡು 72 ವರ್ಷಗಳು ಕಳೆದು 73ನೇ ವರ್ಷಕ್ಕೆ ಕಾಲಿಟ್ಟಿದ್ದು, 2024-25ನೇ ಸಾಲಿನಲ್ಲಿ ಬ್ಯಾಂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತಿ ಹೆಚ್ಚು ಲಾಭ ಪಡೆದಿದ್ದು, ರೂ.36.75 ಕೋಟಿ ಗಳಿಸಿದೆ. 2025-26ನೇ ಸಾಲಿಗೆ ಒಟ್ಟು ರೂ.45.00 ಕೋಟಿ ಲಾಭ ಮಾಡುವ ಯೋಜನೆಯನ್ನು ಹೊಂದಲಾಗಿದೆ.
| ಡಾ. ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕಿನ ಅಧ್ಯಕ್ಷ
ಕೃಷಿ ಹಾಗೂ ಕೃಷಿಯೇತರ ಸಾಲಗಳ ಭದ್ರತೆಗಾಗಿ ಸಾಲಗಾರರಿಗೆ ಅವರು ಪಡೆದ ಸಾಲದ ಮೊತ್ತಕ್ಕೆ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಒಂದು ಲಕ್ಷ ರೂ. ಸಾಲ ತೆಗೆದುಕೊಂಡ ರೈತರು 720 ರೂ. ವಿಮೆ ಪಾವತಿಸಿದರೆ, ಅಕಾಲಿಕ ಮರಣ ಸಂಭವಿಸಿದಾಗ ವಿಮಾ ಕಂಪನಿಯೇ ಸಂಪೂರ್ಣ ಸಾಲದ ಮೊತ್ತ ಬಡ್ಡಿಯೊಂದಿಗೆ ಮರುಪಾವತಿ ಮಾಡುತ್ತದೆ. ಇದರ ಜೊತೆಗೆ, ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ರೂ. 80,000 ಗಳವರೆಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಮಧ್ಯಮಾವಧಿ ಪಶು ಸಂಗೋಪನೆ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಈಗಾಗಲೇ ಮೊಬೈಲ್ ವ್ಯಾನ್ ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲೂ ಸಂಚರಿಸುತ್ತಿದ್ದು, ಗ್ರಾಹಕರ ಬೇಡಿಕೆಯಂತೆ ಇನ್ನೊಂದು ಮೊಬೈಲ್ ವ್ಯಾನ್ ಅನ್ನು ಖರೀದಿಸಲಾಗುವುದು. ಜೊತೆಗೆ ಬ್ಯಾಂಕಿನ ಮೊಬೈಲ್ ಆಪ್‌ನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ಇಂಟರ್ ಬ್ರಾಂಚ್ ವ್ಯವಹಾರ ಹಾಗೂ ಇತರೇ ಬ್ಯಾಂಕಿಗೆ ನೆಫ್ಟ್/ಆರ್‌ಟಿಜಿಎಸ್ ವ್ಯವಹಾರವನ್ನು ಮಾಡಬಹುದಾಗಿದ್ದು, ಸದ್ಯದಲ್ಲಿಯೇ ಐ.ಎಂ.ಪಿ.ಎಸ್ ಮತ್ತು ಯು.ಪಿ.ಐ ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದರು.
ಬ್ಯಾಂಕ್ 2028 ಕ್ಕೆ 75 ವರ್ಷ ಪೂರೈಸಿ ಅಮೃತ ವರ್ಷದ ಸುಸಂದರ್ಭದಲ್ಲಿ 50 ಶಾಖೆಗಳನ್ನು ಹೊಂದುವ ಗುರಿ ಹಾಕಿ ಕೊಂಡಿದ್ದು, ಇದರ ಜೊತೆಗೆ, ಅಮೃತ ಮಹೋತ್ಸವ ನೆನಪಿನ ಕಟ್ಟಡ ನಿರ್ಮಾಣ ಮಾಡಲಿದ್ದೇವೆ. ಇದರ ಶಂಕುಸ್ಥಾಪನೆ ಶೀಘ್ರದಲ್ಲಿಯೇ ನಡೆಯಲಿದೆ ಎಂದ ಅವರು, ಈಗಾಗಲೇ 31 ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಬರುವ ದಸರಾದಲ್ಲಿ ಭದ್ರಾವತಿ ತಾಲ್ಲೂಕಿನ ಭಾರಂದೂರು, ಹೊಸನಗರ ತಾಲ್ಲೂಕಿನ ನಗರದ ಚಿಕ್ಕಪೇಟೆ ಮತ್ತು ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ತಲಾ 1 ರಂತೆ ಒಟ್ಟು 3 ನೂತನ ಶಾಖೆಗಳನ್ನು ಪ್ರಾರಂಭಿಸಲಿದ್ದು, ಅಕ್ಟೋಬರ್ ಅಂತ್ಯದೊಳಗೆ ತೀರ್ಥಹಳ್ಳಿಯ ಎ.ಪಿ.ಎಂ.ಸಿ ಪ್ರಾಂಗಣ ಮತ್ತು ಶಿವಮೊಗ್ಗ ತಾಲ್ಲೂಕಿನ ಗಾಜನೂರಿನಲ್ಲಿ ಉಳಿದ 2 ಶಾಖೆಗಳನ್ನು ಪ್ರಾರಂಭಿಸಿ, ಶಾಖೆಗಳ ಸಂಖ್ಯೆಯನ್ನು 36 ಕ್ಕೆ ಹೆಚ್ಚಿಸಿಕೊಳ್ಳಲ್ಲಿದ್ದು. ಉಳಿದ 14 ಶಾಖೆಗಳನ್ನು ಹಂತ ಹಂತವಾಗಿ ಪ್ರಾರಂಭಿಸುವ ಗುರಿ ಹೊಂದಿದೆ ಎಂದರು.
ಉತ್ತಮ ಕಾರ್ಯನಿರ್ವಹಣೆಯ ಜಿಲ್ಲೆಯ ಸುಮಾರು 10 ಪ್ರಾಥಮಿಕ ಸಹಕಾರ ಸಂಘಗಳಿಗೆ ರೂ.10,000 ಪ್ರೋತ್ಸಾಹಧನ ನೀಡಿ, ವಾರ್ಷಿಕ ಸಭೆಯಲ್ಲಿ ಸನ್ಮಾನಿಸಲಾಗುವುದು ಎಂದರು.