
ಶಿವಮೊಗ್ಗ : ಸಿಗಂದೂರು ಸೇತುವೆ ಸಾರ್ವಜನಿಕ ಸದ್ಬಳಕೆಗೆ ಅನುಕೂಲ ಮಾಡಿಕೊಡುವ ನಿಮಿತ್ತ ಸೇತುವೆ ಲೋಕಾರ್ಪಣೆಗೆ ದಿನಾಂಕ ನಿಗದಿ ಪಡಿಸುವಂತೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಇಂದು ದೆಹಲಿಯಲ್ಲಿ ಸಂಸದರಾದ ಬಿ.ವೈ.ರಾಘವೇಂದ್ರ ಭೇಟಿ ಮಾಡಿ ಮನವಿ ಮಾಡಿದ್ದು, ಇನ್ನೊಂದು ವಾರದಲ್ಲಿ ಉದ್ಘಾಟನಾ ದಿನಾಂಕ ನಿಗದಿಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ.

ಮಲೆನಾಡ ಹಚ್ಚ ಹಸಿರಿನ ರಾಜಧಾನಿ ಶಿವಮೊಗ್ಗ ಜಿಲ್ಲೆ ಹಲವಾರು ವಿಶೇಷತೆಗಳಿಂದ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವೆ ಸಾಗುವ ಹಾದಿಗೆ ನಿರ್ಮಾಣ ಮಾಡಿರುವ ಸಿಗಂದೂರು ಸೇತುವೆ ಒಂದು ಹೊಸ ಮೈಲಿಗಲ್ಲು.
ನವನವೀನ ತಂತ್ರಜ್ಞಾನ ಹಾಗೂ ಆಧುನಿಕ ತಾಂತ್ರಿಕ ವ್ಯವಸ್ಥೆಯಿಂದ ಅತ್ಯಂತ ಅಚ್ಚುಕಟ್ಟಾಗಿ ಸುಮಾರು 430.00 ಕೋಟಿ ಅನುದಾನದಲ್ಲಿ ರಾಜ್ಯದ ಅತಿ ಉದ್ದದ 2.25 ಕಿ.ಮೀ ಕೇಬಲ್ ಆಧಾರಿತ ಸೇತುವೆ ಕಾಮಗಾರಿ ಸಾರ್ವಜನಿಕ ಸೇವೆಗೆ ಅಡಿ ಇಡಲು ಸಜ್ಜಾಗಿದೆ.
ಈ ಐತಿಹಾಸಿಕ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದವರಲ್ಲಿ ಮೊದಲಿಗರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸುತ್ತಾ, ಇದೇ ಸಂದರ್ಭದಲ್ಲಿ ಈ ಯೋಜನೆಗೆ ಸೂಕ್ತ ಅನುದಾನ ನೀಡಿದ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಹಾಗೂ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅನಂತ ಅನಂತ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ಈ ಒಂದು ಇತಿಹಾಸ ಪುಟಗಳಲ್ಲಿ ದಾಖಲಾಗುವಂತ ಐತಿಹಾಸಿಕ ಸೇತುವೆ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಮೆರುಗು ದೊರೆಯುತ್ತದೆ. ಜೊತೆಗೆ ವ್ಯಾವಹಾರಿಕವಾಗಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ. ಈ ಮೂಲಕ ಹೊಸ ರೀತಿಯ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುತ್ತದೆ ಎಂಬ ವಿಶ್ವಾಸ ಬಲವಾಗಿದೆ ಎಂದು ಸಂಸದರು ತಿಳಿಸಿದ್ದಾರೆ.