
ಶಿಕಾರಿಪುರ : ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾ ಲಯ, ಇರುವಕ್ಕಿ, ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಹಿತ್ತಲ ಗ್ರಾಮದ ರೈತರಿಗೆ ಮಣ್ಣು ಮಾದರಿ ತೆಗೆಯುವ ಪ್ರಾತ್ಯಕ್ಷಿಕೆಯನ್ನು ಪುಟ್ಟಪ್ಪನವರ ಜಮೀನಿನಲ್ಲಿ ಮಾಡಿ ತೋರಿಸಿಕೊಟ್ಟರು.
ಸಮೃದ್ಧ ಕೃಷಿಯ ಮೂಲ ಮಣ್ಣಿನಲ್ಲಿ ಅಡಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮಣ್ಣಿನ ನಿಜವಾದ ಸ್ಥಿತಿಯನ್ನು ಅರಿಯದೆ ರಸಗೊಬ್ಬರ ಹಾಗೂ ನೀರಿನ ಬಳಕೆ ಮಾಡುವ ರೈತರು ಇನ್ನೂ ಹಲವರು. ಈ ಹಿನ್ನೆಲೆಯಲ್ಲಿ ಮಣ್ಣಿನ ಮಾದರಿ ಸಂಗ್ರಹಣೆ ಮತ್ತು ಮಣ್ಣಿನ ಪರೀಕ್ಷೆ ಮಹತ್ವದ ಪಾತ್ರ ವಹಿಸುತ್ತವೆ. ಮಣ್ಣಿನ ಮಾದರಿ ಸಂಗ್ರಹಣೆಯ ಅಗತ್ಯತೆ, ಮಣ್ಣಿನ ಗುಣಮಟ್ಟವು ಪ್ರತಿಯೊಂದು ಬೆಳೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಣ್ಣಿನ ಪೋಷಕಾಂಶಗಳ ಪ್ರಮಾಣ, ಆಮ್ಲತೆ, ಉಪ್ಪಿನ ಪ್ರಮಾಣ ಹಾಗೂ ಜೀವಸತ್ವದ ಅಂಶಗಳ ಬಗ್ಗೆ ನಿಖರ ಮಾಹಿತಿ ಪಡೆಯಲು ಸರಿಯಾದ ರೀತಿಯಲ್ಲಿ ಮಾದರಿ ಸಂಗ್ರಹಿಸಬೇಕಾಗುತ್ತದೆ. ತಪ್ಪು ವಿಧಾನದಲ್ಲಿ ತೆಗೆದ ಮಾದರಿ ತಪ್ಪು ಫಲಿತಾಂಶ ನೀಡಬಹುದು ಎಂದು ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಮಣ್ಣಿನ ಮಾದರಿ ಒಂದು ಪ್ರದೇಶದ ಸಂಪೂರ್ಣ ಸ್ಥಿತಿಯನ್ನು ಪ್ರತಿನಿಧಿಸಬೇಕಾದ್ದ ರಿಂದ, ಸುಮಾರು ಒಂದು ಹೆಕ್ಟೇರ್ ಪ್ರದೇಶಕ್ಕೆ ಕನಿಷ್ಠ 5 ಸ್ಥಳಗಳಿಂದ ಮಣ್ಣು ಸಂಗ್ರಹಿಸುವುದು ಸೂಕ್ತ. ಪ್ರತಿಯೊಂದು ಸ್ಥಳದಲ್ಲಿ ”ಗಿ” ಆಕಾರದ ಗುಂಡಿ ತೋಳಿ, ಒಳಭಾಗದ ಮಣ್ಣಿನಿಂದ ಮಾದರಿ ಯನ್ನು ತೆಗೆದು ಎಲ್ಲ ಮಾದರಿಗಳನ್ನು ಒಟ್ಟಿಗೆ ಮಿಶ್ರಣ ಮಾಡಬೇಕು.
ನಂತರ ಸಂಗ್ರಹಿಸಿದ ಮಣ್ಣನ್ನು ಕ್ವಾಡ್ರಾಟಿಕ್ ವಿಧಾನದಿಂದ ಮಾದರಿಯ ಗಾತ್ರವನ್ನು ಸುಮಾರು ಅರ್ಧ ಕಿಲೋ ಮಣ್ಣನ್ನು ಸ್ವಚ್ಛವಾದ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು, ರೈತನ ಹೆಸರು, ತೋಟದ ವಿವರ, ಬೆಳೆ ಪ್ರಕಾರ ಮತ್ತು ದಿನಾಂಕವನ್ನು ಲೇಬಲ್ನಲ್ಲಿ ದಾಖಲಿಸಬೇಕು ಎಂದು ರೈತರಿಗೆ ತಿಳಿಸಿಕೊಟ್ಟರು.