
ಶಿವಮೊಗ್ಗ : ಶ್ರಾವಣ ಮಾಸದಲ್ಲಿ ಅತ್ಯಂತ ವಿಜೃಂಭಣೆ ವೈಭವದಿಂದ ನಡೆಯುವ ನಗರದ ಪ್ರಸಿದ್ಧ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವು ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಅತ್ಯಂತ ವೈಭವದಲ್ಲಿ ನಡೆಯಲಿದ್ದು, ಇಂದು ಮಳೆಯ ನಡುವೆಯೂ ಭಕ್ತರು ಕಾವಡಿಯನ್ನು ಹೊತ್ತು ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದಾರೆ.
ಎಂದಿನಂತೆ ಇಂದು ಬೆಳಗ್ಗೆ ಮಳೆ ಬಂದರೂ ಸಹ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದ ಸಮಯದಲ್ಲಿ ಸ್ವಲ್ಪ ವಿರಾಮ ನೀಡಿ, ಸ್ವಾಮಿ ದರ್ಶನಕ್ಕೆ ಅನುಕೂಲವಾಗುವಂತೆ ಮಾಡಿತ್ತು. ಯುವಕರು, ಮಕ್ಕಳು ಬಹಳ ಸಡಗರದಿಂದ ಜಾತ್ರೆಯಲ್ಲಿ ಸಂಭ್ರಮಿಸಿದರು.
ಹರಕೆ ತೀರಿಸಲು ಬರುವ ಭಕ್ತರು, ದೇವರ ದರ್ಶನಕ್ಕೆ ಬಂದ ಭಕ್ತರ ಹಾಗೂ ಸಾರ್ವಜನಿಕರಿಗೆ ದೇವಸ್ಥಾನದ ಸಮಿತಿ ವತಿಯಿಂದಲೇ ಅನ್ನಸಂತಾರ್ಪಣೆ ಹಾಗೂ ಪ್ರಸಾದ ವಿತರಣೆ ಆಯೋಜಿಸಲಾಗಿತ್ತು. ಸ್ವಾಮಿಯ ದರ್ಶನ ಪಡೆದ ನಂತರ ಸಹಸ್ರಾರು ಭಕ್ತರು ದೇವರ ಪ್ರಸಾದ ಸ್ವೀಕರಿಸಿ ಸಂತೃಪ್ತರಾದರು.
ಮಡಿ ವಸ್ತ್ರದೊಂದಿಗೆ ಬಂದು ಹರಕೆ ತೀರಿಸಿದ ಭಕ್ತರು :
ಬಾಲಸುಬ್ರಮಣ್ಯ ಸ್ವಾಮಿಗೆ ಹರಕೆ ಮಾಡಿಕೊಂಡ ಭಕ್ತರು ಕಾವಡಿಗಳನ್ನು ಹೆಗಲ ಮೇಲೆ ಹೊತ್ತು ಬರುವುದು ಹರೋಹರ ಜಾತ್ರೆಯ ವಿಶೇಷಣೆ, ಅಲಂಕೃತಗೊಂಡ ತೇರು ಎಳೆಯುವುದು, ಕನ್ನೆ ಮತ್ತು ನಾಲಿಗೆಗೆ ತ್ರಿಶೂಲಗಳನ್ನು ಚುಚ್ಚಿಕೊಂಡು ದೇಹವನ್ನು ಮಂಡನೆಗೆ ಒಳಪಡಿಸಿ, ದೂರದ ಊರುಗಳಿಂದ ಪಾದಯಾತ್ರೆಯಲ್ಲಿ ಹರೋಹರ ನಾಮಸ್ಮರಣೆ ಮಾಡುತ್ತಾ, ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಆಗಮಿಸಿದ್ದರು.
ವಿಶೇಷವಾಗಿ ಹರಿಶಿಣದ ಮಡಿ ವಸ್ತ್ರ ಧರಿಸಿದ್ದ ಮಹಿಳೆಯರು, ಪುರುಷರು, ಮಕ್ಕಳು ಹಾಗೂ ಯುವಕರು ನಾನಾ ರೀತಿಯಲ್ಲಿ ಅಲಂಕೃತಗೊಂಡಿದ್ದ ಕಾಪಡಿಯನ್ನು ಮತ್ತು ವಿಶೇಷ ವಾದ್ಯಗಳೊಂದಿಗೆ ದರ್ಶನಕ್ಕೆ ಬರುವುದು ಕಂಡು ಬಂದಿತು.

ಮಕ್ಕಳನ್ನು ಸೆಳೆದ ಆಟಿಕೆಗಳು :
ಜಾತ್ರೆಯಲ್ಲಿ ಮಕ್ಕಳ ಆಟಿಕೆಗಳು ಹೆಚ್ಚಾಗಿ ರಂಜಿಸುತ್ತಿದ್ದವು. ಮಕ್ಕಳು ಯುವಕರು ಜಾತ್ರೆಯಲ್ಲಿ ಆಟಿಕೆಗಳನ್ನು ಆಡುವುದರ ಮೂಲಕ ಸಂತಸಪಟ್ಟರು.
ಈ ವೇಳೆ ವಿವಿಧೆಡೆಯಿಂದ ಬಂದ ಭಕ್ತರು ದೇವರ ದರ್ಶನದ ನಂತರ ತುಂಬಿದ ಗಂಗೆಯ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಂಡರು.
