
ಶಿವಮೊಗ್ಗ : ವಿಜಯದಶಮಿಯ ಪ್ರಮುಖ ಆಕರ್ಷಣೆಯ ಜಂಬೂಸವಾರಿಯು ಶಿವಮೊಗ್ಗದಲ್ಲಿ ಅತ್ಯಂತ ಅದ್ಧೂರಿಯಾಗಿ ವೈಭವದಿಂದ ನಡೆದಿದೆ. 450 ಕೆ.ಜಿ. ತೂಕದ ನಾಡ ದೇವಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿಯನ್ನು ಹೊತ್ತ ಸಾಗರ ಆನೆಯ ಗಾಂಭೀರ್ಯ ನಡೆ ಜನರ ಕಣ್ಮನ ಸೆಳೆಯಿತು.
ಸಾಗರ ಆನೆಗೆ ಜೊತೆಯಾಗಿ ಬಹದ್ದೂರ್ ಹಾಗೂ ಬಾಲಣ್ಣ ಆನೆಗಳು ಜೊತೆಗೆ ಹೆಜ್ಜೆ ಹಾಕಿದವು. ಜಂಬೂಸವಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಚಾಲನೆ ನೀಡಿದರು.

ಇಲ್ಲಿನ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಮುಂಭಾಗ ನಂದಿ ಪೂಜೆಯ ನಂತರ ಮೆರವಣಿಗೆ ಆರಂಭವಾಯಿತು. ಇದೇ ವೇಳೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಹೇಮಂತ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಚಾಮುಂಡೇಶ್ವರಿ ತಾಯಿಗೆ ಹೂವು ಸಮರ್ಪಿಸಿದರು.
ಮೆರವಣಿಗೆಯಲ್ಲಿ 200 ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಶಿವಮೊಗ್ಗದ ವಿವಿಧ ದೇವಸ್ಥಾನಗಳಿಂದ ಹೊರಡಿಸಲಾದ ಉತ್ಸವ ಮೂರ್ತಿಗಳು ಸಾಗಿ ಬಂದವು.

ಕೋಟು-ಪಂಚೆ ಧರಿಸಿ ಮಲೆನಾಡಿನ ಸಾಂಪ್ರದಾಯಿಕ ದಿರಿಸಿನಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ತಹಶೀಲ್ದಾರ್ ರಾಜೀವ್ ಸಂಪ್ರದಾಯದಂತೆ ಅಲ್ಲಮಪ್ರಭು ಮೈದಾನದಲ್ಲಿ ಸಂಜೆ ಅಂಬು ಛೇದನ ಮಾಡಿದರು.
ಸಾಂಸ್ಕೃತಿಕ ಕಲಾ ತಂಡಗಳ ಮೆರಗು :
ಮೆರವಣಿಗೆಯಲ್ಲಿ ನಂದಿ ಕುಣಿತ, ವೀರಗಾಸೆ, ಕೀಲು ಕುದುರೆ, ಡೊಳ್ಳು ಕುಣಿತ, ಹುಲಿ ವೇಷಧಾರಿಗಳು, ಗೊಂಬೆ ಕುಣಿತ, ತಟ್ಟಿರಾಯ ಕಲಾ ತಂಡಗಳು ಭಾಗಿಯಾಗಿದ್ದು, ವಿಶೇಷ ಕಳೆ ತಂದವು.

