
ಹುಲಿಗಳು ಸೃಷ್ಟಿಯ ಅದ್ಭುತ ಚಮತ್ಕಾರ. ಹುಲಿಗಳ ಸಂಚಾರವಿರುವ ಅಭಯಾರಣ್ಯಕ್ಕೆ ಇರುವ ಗತ್ತು, ಗಾಂಭೀರ್ಯ ಹುಲಿಗಳಿಲ್ಲದ ಅರಣ್ಯಕ್ಕಿರುವುದಿಲ್ಲ. ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಆಕರ್ಷಣೀಯವಾದ ವನ್ಯಜೀವಿ ಪಟ್ಟಿಯಲ್ಲಿ ವ್ಯಾಘ್ರರಾಜನಿಗೆ ಮೊದಲ ಸ್ಥಾನ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಯೋಜನೆ 1973 ರಲ್ಲಿ ಆರಂಭವಾಯಿತು. ಹುಲಿ ಸಂರಕ್ಷಣೆಗಾಗಿ 2010ರ ಜುಲೈ 29 ರಂದು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಜಾಗತಿಕ ಸಮಾವೇಶ ನಡೆದ ದಿನದಂದು ಹುಲಿ ದಿನ ಆಚರಿಸುವ ಬಗ್ಗೆ ಘೋಷಣೆಯು ಪ್ರಾರಂಭವಾಯಿತು. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತರರಾಷ್ಟ್ರೀಯ ಹುಲಿ ದಿನ ಅಥವಾ ಜಾಗತಿಕ ಹುಲಿ ದಿನವನ್ನು ಆಚರಿಸುತ್ತಾರೆ. ಇದು ಹದಿನೈದನೇ ವರ್ಷದ ಹುಲಿ ದಿನ ಆಚರಣೆಯಾಗಿದೆ.
ಹುಲಿ ಸೌಂದರ್ಯ, ಧೈರ್ಯ, ಶೌರ್ಯ, ಶಕ್ತಿ, ಸಾಮರ್ಥ್ಯ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿದೆ. ಒಟ್ಟಿನಲ್ಲಿ ಕಾಡಿದ್ದರೆ ನಾಡು, ಹುಲಿ ಇದ್ದರೆ ಕಾಡು ಎಂಬ ಸಮತೋಲನ ಪರಿಸರಕ್ಕೆ ಹುಲಿ ಕಳಶಪ್ರಾಯವಾಗಿದೆ. ಹುಲಿಗಳು ನಮ್ಮ ಜಗತ್ತಿನಲ್ಲಿ ಪ್ರಕೃತಿಯ ಅತ್ಯಂತ ಭವ್ಯವಾದ ಸೃಷ್ಟಿಗಳಲ್ಲಿ ಒಂದಾಗಿ, ವಿಶೇಷ ಸ್ಥಾನವನ್ನು ಪಡೆದಿದೆ.
ಕರ್ನಾಟಕ ರಾಜ್ಯದಲ್ಲಿ 2022ರ ಹುಲಿ ಗಣತಿಯ ಪ್ರಕಾರ 563 ಹುಲಿಗಳು ಪತ್ತೆಯಾಗಿವೆ. ಒಟ್ಟಾರೆ ಭಾರತದಲ್ಲಿ ಹುಲಿಗಳ ಸಂಖ್ಯೆ 3,682 ಇದ್ದು, ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ಮಾಡಲಾಗುವುದು.ಶಿವಮೊಗ್ಗ ಹುಲಿ ಮತ್ತು ಸಿಂಹ ಧಾಮದಲ್ಲಿ ಒಟ್ಟು 4 ಹುಲಿಗಳು ಇವೆ. 2025 ರ ಅಂತಾರಾಷ್ಟ್ರೀಯ ಹುಲಿ ದಿನದ ಘೋಷ ವಾಕ್ಯ ‘ಹುಲಿಗಳಿಗಾಗಿ ಘರ್ಜನೆ’ ‘ಹುಲಿಗಳನ್ನು ಉಳಿಸಿ, ಕಾಡುಗಳನ್ನು ಉಳಿಸಿ, ಜೀವಗಳನ್ನು ಉಳಿಸಿ’ ಎಂಬುದಾಗಿದೆ.
ರಾಜ್ಯದಲ್ಲಿ 5 ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿದ್ದು, ಮೈಸೂರು ಜಿಲ್ಲೆಯ ನಾಗರಹೊಳೆ ನ್ಯಾಷನಲ್ ಪಾರ್ಕ್ ಹಾಗೂ ಹುಲಿ ಸಂರಕ್ಷಣಾ ಅಭಯಾರಣ್ಯ, ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ಅರಣ್ಯ ಸಂರಕ್ಷಣಾ ಪ್ರದೇಶ ಮತ್ತು ಬಂಡೀಪುರ ಅರಣ್ಯ, ಚಿಕ್ಕಮಗಳೂರಿನ ಭದ್ರಾ ಪ್ರಾಜೆಕ್ಟ್, ಉತ್ತರ ಕನ್ನಡ ಭಾಗದ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳು ಇವೆ. ಆರನೇ ಹುಲಿ ಸಂರಕ್ಷಣಾ ಪ್ರದೇಶವಾಗಿ ಚಾಮರಾಜನಗರ ಜಿಲ್ಲೆಯ ಮಲೈ ಮಹಾದೇಶ್ವರ ಬೆಟ್ಟವನ್ನು ಘೋಷಿಸಬೇಕೆಂದು ವನ್ಯಜೀವಿ ಪ್ರೇಮಿಗಳ ಅಭಿಲಾಷೆಯಾಗಿದೆ. ದೇಶದಲ್ಲಿನ ಸುಮಾರು 50ಕ್ಕೂ ಹೆಚ್ಚು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವು ಕೇಂದ್ರ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಅಥಾರಿಟಿಯ ಆಡಳಿತದಲ್ಲಿದೆ. ವಿಶ್ವದಲ್ಲಿನ ಶೇ.75 ರಷ್ಟು ಹುಲಿಯು ಭಾರತದ ಅರಣ್ಯ ಪ್ರದೇಶಗಳಲ್ಲಿ ಇರುವುದಾಗಿ ಅಂದಾಜಿಸಲಾಗಿದೆ.

ಹುಲಿಗಳ ಮಾಂಸ, ಎಲುಬು, ಉಗುರು, ಚರ್ಮ ಇನ್ನಿತರ ವಸ್ತುಗಳಿಗೆ ವಿವಿಧ ದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಹುಲಿಯ ಜೀವಿತಾವಧಿ ಸುಮಾರು 20-25 ವರ್ಷಗಳ ಕಾಲ ಎಂದು ಅಂದಾಜಿಸಲಾಗಿದೆ. ಭಾರತ ಸರ್ಕಾರವು 1972 ರಲ್ಲಿ ವನ್ಯಜೀವಿ ರಕ್ಷಣಾ ಕಾಯಿದೆಯನ್ನು ದೇಶದಾದ್ಯಂತ ಜಾರಿಗೆ ತಂದು ವನ್ಯಜೀವಿಗಳ ಹತ್ಯೆಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗಿದೆ.
ಹುಲಿ ಸೌಂದರ್ಯ, ಧೈರ್ಯ, ಶೌರ್ಯ, ಶಕ್ತಿ, ಸಾಮರ್ಥ್ಯ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿದೆ. ಒಟ್ಟಿನಲ್ಲಿ ಕಾಡಿದ್ದರೆ ನಾಡು, ಹುಲಿ ಇದ್ದರೆ ಕಾಡು ಎಂಬ ಸಮತೋಲನ ಪರಿಸರಕ್ಕೆ ಹುಲಿ ಕಳಶಪ್ರಾಯವಾಗಿದೆ. ಹುಲಿಗಳು ನಮ್ಮ ಜಗತ್ತಿನಲ್ಲಿ ಪ್ರಕೃತಿಯ ಅತ್ಯಂತ ಭವ್ಯವಾದ ಸೃಷ್ಟಿಗಳಲ್ಲಿ ಒಂದಾಗಿ, ವಿಶೇಷ ಸ್ಥಾನವನ್ನು ಪಡೆದಿದೆ. ಅವುಗಳ ಅವನತಿಯ ಮೂಲ ಕಾರಣಗಳನ್ನು ತಿಳಿಸುವ ಮೂಲಕ ಸಂರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸಿ, ಅವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಿ ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ.
| ಅಮೃತ ಕೆ., ಶಿವಮೊಗ್ಗ
ಇದನ್ನೂ ಓದಿ ⇒ ಸರಳ ಸಜ್ಜನಿಕೆಯ ಶಾಸಕ ‘ಚೆನ್ನಿ’ ಹುಟ್ಟುಹಬ್ಬ: ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಶುಭ ಹಾರೈಕೆ