
ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ದಸರಾ ಅಂಗವಾಗಿ ನಡೆಯವ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಕ್ರೇಬೈಲು ಆನೆ ಬಿಡಾರದ ಆನೆಗಳು ಶಿವಮೊಗ್ಗ ನಗರಕ್ಕೆ ಆಗಮಿಸಿವೆ. ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿರುವ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಅದ್ದೂರಿ ಅಂಬಾರಿ ಉತ್ಸವಕ್ಕೆ ಗಜಪಡೆಗಳ ಆಗಮನವು ನಗರವಾಸಿಗಳಲ್ಲಿ ಹಬ್ಬದ ಹರ್ಷೋಲ್ಲಾಸವನ್ನು ಹೆಚ್ಚಿಸಿದೆ.
ಇಂದು ಸಂಜೆ ಸಕ್ರೆಬೈಲು ಆನೆ ಬಿಡಾರದಿಂದ, ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ವತಿಯಿಂದ ಶಿವಮೊಗ್ಗ ದಸರಾ ಅಂಬಾರಿ ಉತ್ಸವದಲ್ಲಿ ಪಾಲ್ಗೊಳ್ಳುವ ಸಾಗರ್, ಬಹದ್ದೂರ್ ಮತ್ತು ಬಾಲಣ್ಣ ಆನೆಗಳಿಗೆ ಪೂಜೆ ಸಲ್ಲಿಸಿ, ಮಂಗಳವಾದ್ಯ ಸಹಿತ ಆನೆಗಳನ್ನು ನಗರಕ್ಕೆ ಸ್ವಾಗತಿಸಲಾಯಿತು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇಗುಲದಿಂದ ಹಾಗೂ ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ರವರು ಪೂಜೆ ಸಲ್ಲಿಸಿದರು.

ಶಿವಮೊಗ್ಗ ದಸರಾ ಅಂಬಾರಿ ಉತ್ಸವದಲ್ಲಿ ಸಾಗರ್ ಆನೆ ಅಂಬಾರಿ ಹೊರಲಿದ್ದು, ಇದರ ಜೊತೆಗೆ ಬಹದ್ದೂರ್ ಮತ್ತು ಬಾಲಣ್ಣ ಆನೆಗಳು ಸಾಥ್ ನೀಡಲಿವೆ.
ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳು ತಂಗಲು ವ್ಯವಸ್ಥೆ ಮಾಡಲಾಗಿದ್ದು, ಆನೆಗಳ ಜೊತೆಗೆ ಬಿಡಾರದಿಂದ ಮಾವುತರು, ಕಾವಾಡಿಗಳು ಆಗಮಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಪ್ರಭಾಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.