
ಶಿವಮೊಗ್ಗ : ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಜೋರಾಗಿದೆ. ದೀಪಾವಳಿ ಹಬ್ಬದ ಸಂಭ್ರಮದ ಆಚರಣೆಯಲ್ಲಿನ ಜನತೆಗೆ ಇಂದು ಬೆಳಗ್ಗೆಯೇ ವರುಣನ ದರ್ಶನವಾಗಿದ್ದು , ನಗರದ ಬಹುತೇಕ ಕಡೆ ತಂಡಿ ವಾತಾವರಣದ ಜೊತೆ ಗಾಳಿಯೊಂದಿಗೆ ತುಂತುರು ಮಳೆ ಸುರಿದಿದೆ.

ಚುಮುಚುಮು ಚಳಿ ಮಧ್ಯೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಸದ್ಯ ಕೊಂಚ ವಿಶ್ರಾಂತಿ ಕಂಡು ಮೋಡ ಕವಿದ ವಾತಾವರಣವಿದೆ. ಮಳೆಯ ವಾತಾವರಣದ ನಡುವೆಯೂ ಹೂವು, ಹಣ್ಣು ಹಂಪಲು, ಮಾವಿನ ಸೊಪ್ಪು, ಬಾಳೆ ಕಂದು, ಅರಿಶಿಣ, ಕುಂಕುಮ ಸೇರಿದಂತೆ ಇತರೆ ಪೂಜಾ ವಸ್ತುಗಳ, ಅಲಂಕಾರಿಕ ವಸ್ತುಗಳ ಖರೀದಿ ಅತ್ಯಂತ ಭರದಲ್ಲಿ ಸಾಗಿದೆ.

ಮಳೆಯ ನಡುವೆಯೂ ಹಬ್ಬದ ಖರೀದಿ
ಪ್ರತಿ ಕೆ.ಜಿ. ಸೇಬು ಹಣ್ಣು ರೂ.100, ಸೀತಾಫಲ ರೂ.100, ದಾಳಿಂಬೆ ರೂ.160, ಸಪೋಟ ರೂ.120, ದ್ರಾಕ್ಷಿ ರೂ.150, ಸೇವಂತಿಗೆ ರೂ.120, ಮಲ್ಲಿಗೆ ರೂ.100 ನಂತೆ ಮಾರಾಟವಾಗುತ್ತಿದೆ.
ದೀಪಾವಳಿ ಹಬ್ಬದ ಆಚರಣೆಯಲ್ಲಿರುವವರಿಗೆ ಮಳೆಯು ತಂಪೆರಿದಿದ್ದು, ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಪ್ರಕಟಿಸಿದೆ. ಈ ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ.

ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತಳ್ಳುವ ಗಾಡಿಗಳಲ್ಲಿ ಹೂವು, ಹಣ್ಣು, ಬಾಳೆ ಕಂದು, ಮಾವಿನಸೊಪ್ಪು, ನಿಂಬೆ ಹಣ್ಣುಗಳ ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು. ವಾಹನಗಳನ್ನು, ಅಂಗಡಿಗಳನ್ನು ಅಲಂಕರಿಸಲು ಬಳಸುವ ಕೃತಕ ಹಾರಗಳು ಇತರೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರ ಸಂಖ್ಯೆಯು ಹೆಚ್ಚಿದೆ.
