
ಶಿವಮೊಗ್ಗ : ಮುಂಗಾರು ಬೆಳೆಗೆ ಬಲದಂಡೆ ನಾಲೆಗೆ ಜು.22 ರಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು. ಹಾಗೂ ಎಡದಂಡೆ ನಾಲೆಗೆ ಶೀಘ್ರದಲ್ಲೇ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26 ನೇ ಸಾಲಿನ ಮುಂಗಾರು ಬೆಳೆಗೆ ನೀರು ಹರಿಸುವ ಕುರಿತು ಸೋಮವಾರ ಮಲವಗೊಪ್ಪದ ಭದ್ರ ಕಾಡಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ, ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಡಾ ವ್ಯಾಪ್ತಿಯಲ್ಲಿ 537 ನೀರು ಬಳಕೆದಾರರ ಸಂಘಗಳಿದ್ದು, ಇವುಗಳಿಗೆ ನೀರು ಬಳಕೆ, ಇತರೆ ರೈತ ಚಟುವಟಿಕೆ ಕುರಿತು ಕಾರ್ಯಾಗಾರ ಮಾಡಿದರೆ ಒಳಿತು ಎಂದು ಸಲಹೆ ನೀಡಿದರು.
ಜು.22 ರಿಂದ ಬಲದಂಡೆ ನಾಲೆಗೆ 120 ದಿನಗಳ ಕಾಲ ನೀರು ಹರಿಸಲು ಸಭೆ ನಿರ್ಧರಿಸಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡು ನೀರು ಬಿಡಬೇಕು. ಎಡದಂಡ ನಾಲೆಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದು, ಶೀಘ್ರದಲ್ಲೇ ಎಡದಂಡ ನಾಲೆಗೆ ನೀರು ಹರಿಸಲು ದಿನಾಂಕ ನಿಗದಿಗೊಳಿಸಲಾಗುವುದು. ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ನೀರು ಹಂಚಿಕೆ ಕುರಿತು ನೀರಾವರಿ ಸಚಿವರೊಂದಿಗೆ ಸಭೆ ನಿಗದಿಪಡಿಸಿ ಮಾತನಾಡಬೇಕು.
– ಎಸ್.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು
ಸಭೆಯಲ್ಲಿ ವಿಧಾನ ಸಭೆ ಶಾಸಕ ಎಸ್.ಎನ್.ಚನ್ನಬಸಪ್ಪ, ಹರಿಹರ ಶಾಸಕ ಬಿ.ಪಿ.ಹರೀಶ್, ಹೊನ್ನಾಳಿ ಶಾಸಕ ಶಾಂತನಗೌಡ, ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್, ಭದ್ರಾ ಕಾಡಾ ಅಧ್ಯಕ್ಷರಾದ ಡಾ. ಅಂಶುಮಂತ್, ಬಸವರಾಜಪ್ಪ, ಮಾತನಾಡಿದರು. ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು , ಸಲಹಾ ಸಮಿತಿ ಸದಸ್ಯರು, ರೈತ ಮುಖಂಡರು, ಆಡಳಿತಾಧಿಕಾರಿ, ಮುಖ್ಯ ಇಂಜಿನಿಯರ್ , ಇತರೆ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ ⇒ ಹಕ್ಕಿಪಿಕ್ಕಿ ಸಮುದಾಯ, ಅಲೆಮಾರಿ ಕುಟುಂಬಗಳಿಗೆ ತಾಡಪಾಲು ನೀಡಿ ಅಗತ್ಯ ನೀಗಿಸುವ ಮಹತ್ಕಾರ್ಯ