
ಶಿವಮೊಗ್ಗ : ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಆ ವೀಡಿಯೋದಲ್ಲಿರುವ ಧ್ವನಿಯನ್ನು ಕೃತಕ ಬುದ್ಧಿಮತ್ತೆಯಿಂದ ತಿರುಚಲಾಗಿದೆ. ಕೂಡಲೇ ಈ ಆಡಿಯೋವನ್ನು ಎಫ್ ಎಸ್ ಎಲ್ ತನಿಖೆಗೆ ಒಳಪಡಿಸಬೇಕು ಎಂದು ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.
ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ವಿಡಿಯೋದಲ್ಲಿರುವಂತೆ ಯಾವುದೇ ಹಣಕಾಸಿನ ವ್ಯವಹಾರ ಕುರಿತು ತಾನು ಚರ್ಚೆ ಮಾಡಿಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಹಲವಾರು ವರ್ಷಗಳಿಂದ ಇದ್ದೇನೆ. ನಮ್ಮದೇ ಸಮಾಜಕ್ಕೆ ಅನ್ಯಾಯ ಮಾಡುವಷ್ಟು ಕ್ರೂರಿ ನಾನಲ್ಲ. ವಿಡಿಯೋದಲ್ಲಿ ‘5 ಪರ್ಸೆಂಟ್ ಕಮಿಷನ್’ ಕೇಳಿದ ಬಗ್ಗೆ ಮಾತನಾಡಲಾಗಿದೆ. ಆದರೆ, ಅಲ್ಲಿ ನಾನು ಮಾತನಾಡಿದ ವಿಚಾರ ಫಲಾನುಭವಿಗಳ ಕೋಟಾದ ಶೇಕಡಾವಾರು ಬಗ್ಗೆ ಇತ್ತು. “ನನಗೆ ಇದ್ದಿದ್ದು 5 ಪರ್ಸೆಂಟ್ ಕೋಟಾ. ಆ ಪ್ರಕಾರ ನಾನು ಹಂಚಿಕೆ ಮಾಡುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿದ್ದೆ. ಅದನ್ನು ರೆಕಾರ್ಡ್ ಮಾಡಿ, ತಿರುಚುವ ಮೂಲಕ ಹಣ ಕೇಳಿದ್ದಾಗಿ ಬಿಂಬಿಸಲಾಗಿದೆ” ಎಂದು ಅವರು ವಿವರಿಸಿದ್ದಾರೆ.
ವಿಡಿಯೋದಲ್ಲಿ ಇರುವ ವ್ಯಕ್ತಿ ತಾನೇ ಆದರೆ, ಅಲ್ಲಿ ಮಾತನಾಡಿದ ಧ್ವನಿ ತನ್ನದಲ್ಲ. ಇಡೀ ಸಂಭಾಷಣೆಗೆ ಬೇರೆ ಧ್ವನಿ ನೀಡಲಾಗಿದೆ. ಅಂದರೆ, ಎಐ ಮೂಲಕ ಅದನ್ನು ತಿರುಚಲಾಗಿದೆ. ವಿಡಿಯೋದಲ್ಲಿನ ಧ್ವನಿಗೂ ನನ್ನ ಧ್ವನಿಗೂ ಯಾವುದೇ ಸಂಬಂಧವಿಲ್ಲ. ಬೇಕಾದರೆ ಇದನ್ನು ಯಾವುದೇ ತನಿಖೆಗೆ ಒಳಪಡಿಸಬಹುದು.
| ಎಸ್.ರವಿಕುಮಾರ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ
ಈ ಬಗ್ಗೆ ಎಫ್.ಎಸ್.ಎಲ್. ತನಿಖೆ ನಡೆಸುವಂತೆ ಸರ್ಕಾರಕ್ಕೆ ತಾನೇ ಒತ್ತಾಯ ಮಾಡುವುದಾಗಿ ಹೇಳಿದ ರವಿ ಕುಮಾರ್, ಈ ಪ್ರಕರಣದ ವಿರುದ್ಧ ದೂರು ದಾಖಲಿಸಲಿದ್ದೇನೆ. ವಿರೋಧ ಪಕ್ಷಗಳು ಇದನ್ನು ‘ಬೃಹತ್ ಭ್ರಷ್ಟಾಚಾರ’ ಎಂದು ಆರೋಪಿಸುತ್ತಿವೆ. ಆದರೆ, ತಾನು ಅಧ್ಯಕ್ಷನಾದ ನಂತರ ನಿಗಮದಲ್ಲಿ ದಲ್ಲಾಳಿಗಳ ವ್ಯವಹಾರ ನಿಂತಿದ್ದು, ಎಲ್ಲವೂ ಆನ್‌ಲೈನ್ ಮೂಲಕ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
“ಯೋಜನೆಗಳಿಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು, ಆಯ್ಕೆ ಕೂಡ ಆನ್‌ಲೈನ್ ಮೂಲಕವೇ ನಡೆಯುತ್ತದೆ. ಫಲಾನುಭವಿಗಳು ನಿಗಮಕ್ಕೆ ಬರುವ ಅವಶ್ಯಕತೆಯೇ ಇಲ್ಲ. ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಒಬ್ಬೇ ಒಬ್ಬ ಫಲಾನುಭವಿ ಕೂಡ ದೂರು ಕೊಟ್ಟಿಲ್ಲ” ಎಂದು ಅವರು ತಿಳಿಸಿದ್ದಾರೆ.
ರಾಜೀನಾಮೆ ನಿರ್ಧಾರ ಸಿಎಂಗೆ ಬಿಟ್ಟಿದ್ದು :
ರಾಜೀನಾಮೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರವಿಕುಮಾರ್, ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಟ್ಟಿದ್ದೇನೆ. ನಾಳೆ ಬೆಂಗಳೂರಿಗೆ ಹೋಗಿ ಸಿಎಂ ಅವರನ್ನು ಭೇಟಿಯಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸುವುದಾಗಿ ಮತ್ತು ಅವರ ಸೂಚನೆಯಂತೆ ಮುಂದಿನ ಹೆಜ್ಜೆ ಇಡುತ್ತೇನೆ. ಈ ವಿಚಾರದ ಕುರಿತಾದ ತನಿಖೆಗೆ ಸಿಎಂ ಸಹ ಸಮ್ಮತಿ ನೀಡಿದ್ದಾರೆ. ನನಗೆ ಅಧಿಕಾರ ಮುಖ್ಯವಲ್ಲ. ಪಕ್ಷ ಮತ್ತು ನಮ್ಮ ಸಮಾಜಕ್ಕೆ ಯಾವುದೇ ಮುಜುಗರವಾಗಬಾರದು. ನಾಯಕರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ” ಎಂದು ಅವರು ಹೇಳಿದರು.
ಇದನ್ನೂ ಓದಿ » ಸೆ.4 ರಂದು ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ?