
ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದ ಮೂಲಸೌಕರ್ಯ, ಆಡಳಿತಾತ್ಮಕ ಪಾರದರ್ಶಕತೆ ಮತ್ತು ಸೌಂದರ್ಯೀಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಖಡಕ್ ವಾರ್ನಿಂಗ್ ನೀಡಿದರು.
ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಮನ್ವಯ :
ಕಾಮಗಾರಿಗಳ ಗುಣಮಟ್ಟ ಮತ್ತು ಕಾಲಮಿತಿಯನ್ನು ಖಚಿತಪಡಿಸಲು ಅಧಿಕಾರಿಗಳು ಮತ್ತು ಟೆಂಡರ್ದಾರರ ನಡುವೆ ಸಮನ್ವಯತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಹಾಗೂ SFC ಮತ್ತು ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಗಳ (MGNVY Schemes Tenders) ಟೆಂಡರ್ಗಳಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಲು ಸೂಚಿಸಿದರು.
ವಿದ್ಯುತ್ ನಿಧಿ ಮತ್ತು ಬೀದಿ ದೀಪ ನಿರ್ವಹಣೆ :
ವಿದ್ಯುತ್ ನಿಧಿಯನ್ನು ಸಮರ್ಥವಾಗಿ ಬಳಸಿಕೊಂಡು, ನಗರದಾದ್ಯಂತ ಹಾಳಾಗಿರುವ ಬೀದಿ ದೀಪಗಳನ್ನು ತ್ವರಿತವಾಗಿ ಸರಿಪಡಿಸಲು ನಿರ್ದೇಶಿಸಲಾಯಿತು. ಪ್ರತಿದಿನ ಸಂಜೆ 6 ಗಂಟೆಯ ನಂತರ ವಿದ್ಯುತ್ ಅಧಿಕಾರಿಗಳು ಸ್ವತಃ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದರು.
ಅನುದಾನಿತ ಕಾಮಗಾರಿಗಳ ಪ್ರಗತಿ :
SFC ಹಾಗೂ MGNVY ಯೋಜನೆಗಳ ಅಡಿಯಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಅಥವಾ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ತುರ್ತಾಗಿ ಪರಿಶೀಲಿಸಿ, ಗಡುವಿನೊಳಗೆ ಪೂರ್ಣಗೊಳಿಸಲು ಆದೇಶಿಸಿದರು.
‘ಶೂನ್ಯ ಗುಂಡಿ’ ಅಭಿಯಾನ :
ಸಾರ್ವಜನಿಕರಿಗೆ ಮಾರಣಾಂತಿಕವಾಗಿ ಪರಿಣಮಿಸಿರುವ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಆದ್ಯತೆ ನೀಡಲಾಯಿತು. ಡಿಸೆಂಬರ್ ತಿಂಗಳಿನಲ್ಲಿ ‘ಶೂನ್ಯ ಗುಂಡಿ’ ಅಭಿಯಾನದ ಅಡಿಯಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲು ಗುರಿ ನಿಗದಿಪಡಿಸಲಾಯಿತು. ಪ್ರತೀ ಪಾಲಿಕೆ ಇಂಜಿನಿಯರ್ ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿಗಳ ಬಗ್ಗೆ ವರದಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದರು.
ರಸ್ತೆ ದುರಸ್ತಿ ಮತ್ತು ಸಂಚಾರ ನಿಯಂತ್ರಣ :
ಅಗತ್ಯವಿರುವ ಕಡೆಗಳಲ್ಲಿ ರಸ್ತೆ ದುರಸ್ತಿ ಮತ್ತು ವೈಜ್ಞಾನಿಕವಾಗಿ ಹಂಪ್ಸ್ಗಳನ್ನು ನಿರ್ಮಿಸುವ ಕುರಿತು ಹಾಗೂ ನಗರದ ಪ್ರಮುಖ ಜಂಕ್ಷನ್ಗಳಲ್ಲಿರುವ ಸಿಗ್ನಲ್ ಪಾಯಿಂಟ್ಗಳ (Signal Points Issues) ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನೆಹರು ರಸ್ತೆ ಅಭಿವೃದ್ಧಿ :
ನೆಹರು ರಸ್ತೆಯ ಕನ್ಸರ್ವೆನ್ಸಿ ರಸ್ತೆಗಳನ್ನು (Nehru Road Cunservency) ಅಭಿವೃದ್ಧಿಪಡಿಸಿ ದ್ವಿಚಕ್ರ ವಾಹನಗಳ ನಿಲುಗಡೆಗೆ (ಪಾರ್ಕಿಂಗ್) ಅವಕಾಶ ಮಾಡಿಕೊಡುವುದು ಮತ್ತು ಸಾರ್ವಜನಿಕ ಶೌಚಾಲಯಗಳ ಅಭಿವೃದ್ಧಿಗೆ ಒತ್ತು ನೀಡಿದರು.
ನಗರದ ಸೌಂದರ್ಯ ಮತ್ತು ಸ್ಮಾರಕಗಳ ರಕ್ಷಣೆ :
ನಗರದ ಹೆಮ್ಮೆಯ ಮಹಾತ್ಮ ಗಾಂಧಿ ಪಾರ್ಕ್ನ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಕುರಿತು ವರದಿ ಸಲ್ಲಿಸಲು ಸೂಚಿಸಲಾಯಿತು. ವಿಶೇಷವಾಗಿ, ಪಾರ್ಕ್ನಲ್ಲಿರುವ ರೈಲು ಕಾರ್ಯಾಚರಣೆಯ ಸಮಸ್ಯೆಗಳನ್ನು (Gandi Park Train Issues) ತ್ವರಿತವಾಗಿ ಬಗೆಹರಿಸಲು ನಿರ್ದೇಶಿಸಿದರು.
ಐತಿಹಾಸಿಕ ಸ್ಮಾರಕಗಳ ರಕ್ಷಣೆ :
ಶಿವಪ್ಪ ನಾಯಕ ವೃತ್ತದಲ್ಲಿರುವ ಪ್ರತಿಮೆಯ ಸುತ್ತಲಿನ ಶಿಥಿಲಗೊಂಡಿರುವ ಕಬ್ಬಿಣದ ಸರಳುಗಳನ್ನು ಕೂಡಲೇ ದುರಸ್ತಿಗೊಳಿಸಲು ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ಪಾಲಿಕೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ » ಶಿವಮೊಗ್ಗ ನಗರದ ಈ ಭಾಗಗಳಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧ, ಇಲ್ಲಿದೆ ಕಂಪ್ಲೀಟ್ ಲೀಸ್ಟ್