
ಶಿವಮೊಗ್ಗ : ಶಿವಮೊಗ್ಗ ನಗರದ ಹಳೇ ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರಿಗಳಿಗೆ ಹೊಸ ಕಟ್ಟಡದಲ್ಲಿ ಸಿಗುವ ಜಾಗದ ಕನಸು ಈಗ ನನಸಾಗಿದೆ. ಮಹಾನಗರ ಪಾಲಿಕೆಯ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಹೂವಿನ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವುದರ ಮೂಲಕ ನೆನೆಗುದಿಗೆ ಬಿದ್ದಿದ್ದ ಹೂವಿನ ವ್ಯಾಪಾರಿಗಳ ಬಹು ವರ್ಷಗಳ ಕನಸನ್ನು ಜಿಲ್ಲಾಡಳಿತ ಕೊನೆಗೂ ನನಸಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ 17 ವರ್ಷಗಳ ಹಿಂದೆ ಶಿವಪ್ಪನಾಯಕ ಮಾರುಕಟ್ಟೆಯ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ 117 ಹೂವಿನ ವ್ಯಾಪಾರಿಗಳು ಹಾಗೂ ಕೆಲವು ಗ್ರಂಥಿಕೆ ವ್ಯಾಪಾರಿಗಳನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಈಗ ಅವರಿಗೆ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಕಟ್ಟಡದಲ್ಲಿ ಅವಕಾಶ ಕಲ್ಪಿಸುವ ಸಂಬಂಧ ಡಿ.31 ರಂದು ಬುಧವಾರ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ತಿಳಿಸಿದರು.
ಹಳೇ ಶಿವಪ್ಪನಾಯಕ ಮಾರುಕಟ್ಟೆಯಲ್ಲಿದ್ದ 117 ಹೂವಿನ ವ್ಯಾಪಾರಿಗಳಿಗೆ 17 ವರ್ಷದ ಒಡಂಬಡಿಕೆಯೊಂದಿಗೆ ಹೊಸ ಕಟ್ಟಡದಲ್ಲಿ ಮಳಿಗೆ ನೀಡಲಾಗುತ್ತದೆ ಮಾಸಿಕ ರೂ.5,357/-ಗಳ ಬಾಡಿಗೆ ಹಾಗೂ ರೂ.1,15,150/-ಗಳ ಠೇವಣಿ ಪಡೆದುಕೊಂಡು ಮಳಿಗೆ ನೀಡಲಾಗುವುದು 12 ವರ್ಷಗಳ ನಂತರ ಅವರು ಅಂದಿನ ನಿಯಮದ ಪ್ರಕಾರ ಬಾಡಿಗೆ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ.
– ಎಸ್.ಎನ್.ಚನ್ನಬಸಪ್ಪ, ಶಾಸಕರು

ಹೂವಿನ ವ್ಯಾಪಾರಿಗಳಿಗೆ ಪುನರ್‌ವಸತಿ ಕಲ್ಪಿಸುವ ದೃಷ್ಟಿಯಿಂದ ಅಂದಿನ ನಗರಸಭೆ, ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರ ಹಾಗೂ ಅಂದಿನ ಶಾಸಕರೆಲ್ಲರೂ ಸೇರಿ ಒಂದು ಹೊಸ ರೂಪಕೊಡುವ ಕೆಲಸ ಮಾಡಲಾಗಿತ್ತು. ಅವರಿಗೆ ಬದಲಿ ವ್ಯವಸ್ಥೆ ಕೊಡುವ ನಿರ್ಧಾರವನ್ನು ಜಿಲ್ಲಾಧಿಕಾರಿಗಳು ಬಾಡಿಗೆ ನಿಗಧಿಮಾಡಿ, ಆದೇಶ ಮಾಡುವುದರ ಮೂಲಕ (2025 ರ ಡಿ.30 ರಂದು) ಸಾಕಾರಗೊಂಡಿದೆ. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪಂಕಜ್ ಕುಮಾರ್ ಪಾಂಡೆ ಅವರ ಅವಧಿಯಲ್ಲಿ ಈ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ಕಾರ್ಯ ಆರಂಭವಾಗಿತ್ತು. ಹಳೇ ಕಟ್ಟಡದಲ್ಲಿ ಹೂವಿನ ವ್ಯಾಪಾರಿಗಳಲ್ಲದೆ, ಬೇರೆ ಬೇರೆ ಬ್ಯಾಂಕುಗಳು, ರಾಜಕೀಯ ಪಕ್ಷ ಹಾಗೂ ಇನ್ನಿತರ ಸರ್ಕಾರಿ ಕಚೇರಿಗಳೂ ಇದ್ದವು. ಇವರಿಗೆ ಗಾರ್ಡನ್ ಏರಿಯಾದ ಪಾಲಿಕೆಯ ಹೊಸ ವಾಣಿಜ್ಯ ಸಂಕಿರ್ಣದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು.
ಶಿವಪ್ಪನಾಯಕ-ಅಮೀರ್ ಅಹ್ಮದ್ ವೃತ್ತದಲ್ಲಿರುವ ಅಂಡರ್‌ಪಾಸ್ ಬಳಕೆಗೆ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು, ಹರಾಜಿನ ಮೂಲಕ ಮಹಿಳಾ ಬಜಾರ್ ಆರಂಭಿಸುವ ಬಗ್ಗೆಯೂ ವಿಚಾರ ವಿನಿಮಯ ನಡೆಯುತ್ತಿದ್ದು, ಕೆಆರ್‌ಪುರಂನಲ್ಲಿ ಕನ್ಸರ್‌ವೆನ್ಸಿ ಅಭಿವೃದ್ಧಿಪಡಿಸಿ ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ ಅವರು, ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದ ಹೂವಿನ ವ್ಯಾಪಾರಿಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶ್ರಮಿಸಿದ ಪಾಲಿಕೆ ಆಯುಕ್ತ ಮತ್ತು ಜಿಲ್ಲಾಧಿಕಾರಿಗಳನ್ನು ಶಾಸಕರು ಅಭಿನಂದಿಸಿದರು.
ಪಾಲಿಕೆಯ ನಿರ್ಮಿತ ಗಾಂಧಿನಗರದ ವಾಣಿಜ್ಯ ಸಂಕಿರ್ಣ ಮತ್ತು ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕಿರ್ಣದ ಹರಾಜು ಪ್ರಕ್ರಿಯೆ ಚಾಲನೆಯಲ್ಲಿದೆ ಎಂದ ಶಾಸಕರು, ಗೌರವ ಲಾಡ್ಜ್ ಬಳಿ ಇರುವ ಪಾಲಿಕೆ ಕಟ್ಟಡದಲ್ಲಿ ಹಿಂದಿನ ಮಾರುಕಟ್ಟೆ ಕೆಡವಿದಾಗ ಅಲ್ಲಿದ್ದ ಸಂಘ-ಸಂಸ್ಥೆಗಳ ಕಚೇರಿಗಳಿಗೆ ಈ ಕಟ್ಟಡದಲ್ಲಿ ಅವಕಾಶ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ್‌ರೆಡ್ಡಿ, ಪ್ರಮುಖರಾದ ಜ್ಞಾನೇಶ್ವರ, ದೀನ್ ದಯಾಳ್, ಶ್ರೀನಾಗ್, ಮುರಳಿ, ವಿಶ್ವನಾಥ್, ಎನ್.ಜಿ.ನಾಗರಾಜ್ ಇದ್ದರು.
