
ಶಿವಮೊಗ್ಗ : ಇತ್ತೀಚೆಗೆ ಪ್ಲಾಸ್ಟಿಕ್ ಸಮಸ್ಯೆ ಸರ್ವವ್ಯಾಪಿಯಾಗಿದ್ದು, ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ಪ್ಲಾಸ್ಟಿಕ್ ಜಾನುವಾರುಗಳಿಗಂತೂ ಶಾಪವಾಗಿದೆ. ಇಂದಿಗೂ ಎಷ್ಟೋ ಜಾನುವಾರುಗಳ ಪ್ರಾಣಕಂಟಕಕ್ಕೆ ಪ್ಲಾಸ್ಟಿಕ್ ಕಾರಣವಾಗುತ್ತಿದ್ದು, ಮೇವಿಗೆಂದು ಬಿಟ್ಟ ಸಮಯದಲ್ಲಿ ಹಸುಗಳು ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೇವಿಸುವುದು ಹೆಚ್ಚುತ್ತಲೇ ಇದೆ.

ಏಪ್ರಿಲ್ – 2025 ರಿಂದ ಇಲ್ಲಿಯವರೆಗೆ 21 ಜಾನುವಾರುಗಳು ಪ್ಲಾಸ್ಟಿಕ್ ಸೇವನೆಯಿಂದ ಸಾವನ್ನಪ್ಪಿವೆ. ಇಂತಹ ಪ್ರಕರಣಗಳು ಹಳ್ಳಿ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುತ್ತವೆ. ಆಹಾರಗಳಿರುವ ಪ್ಲಾಸ್ಟಿಕ್ ಚೀಲವನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿರುವ ಕಾರಣದಿಂದಾಗಿ ಜಾನುವಾರುಗಳು ಅದರಲ್ಲಿನ ಆಹಾರ ತಿನ್ನುವಾಗ ಪ್ಲಾಸ್ಟಿಕ್ ಸಮೇತ ತಿಂದುಬಿಡುತ್ತವೆ. ಇದು ಜಾನುವಾರುಗಳ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ನಗರ ಭಾಗಗಳಲ್ಲಿ ಪ್ಲಾಸ್ಟಿಕ್ ಗಳನ್ನೆಲ್ಲಾ ಒಂದೆಡೆ ಹಾಕುವುದರಿಂದ ಬೀಡಾಡಿ ದನಗಳು (ಸ್ಟ್ರೀಟ್ ಜಾನುವಾರು) ಈ ರೀತಿಯ ರಸ್ತೆ ಬದಿಯ ಆಹಾರ ಸೇವಿಸುವುದರ ಜೊತೆಗೆ ಪ್ಲಾಸ್ಟಿಕ್ ನ್ನೂ ತಿನ್ನುತ್ತವೆ. ಅವುಗಳ ಹೊಟ್ಟೆ ಭಾಗ ಸಾಧಾರಣವಾಗಿ ದಪ್ಪ ಆಗಿರುತ್ತದೆ. ನಂತರ ಅವು ಒಂದಲ್ಲ ಒಂದು ಸಮಯದಲ್ಲಿ ಸಾವನ್ನಪ್ಪುತ್ತವೆ. ಜಾನುವಾರು ಮಾಲೀಕರು ಆ ಏರಿಯಾದ ಡಾಕ್ಟರ್ ಗೆ ತಿಳಿಸಿದ ನಂತರ, ಡಾಕ್ಟರ್ ಪರೀಕ್ಷಿಸಿ ನೋಡಿ ಪ್ಲಾಸ್ಟಿಕ್ ನಿಂದ ಸಾವನ್ನಪ್ಪಿರುವುದಾಗಿ ಗುರುತಿಸುತ್ತಾರೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಡಾ. ಬಾಬು ರತ್ನ ಅವರು ಮಾಹಿತಿ ನೀಡಿದ್ದಾರೆ.

ಜಾನುವಾರುಗಳ ಆರೋಗ್ಯದ ಕುರಿತು ನಾವು ರೈತರಿಗೆ ಸಲಹೆ-ಸೂಚನೆಯನ್ನು ನೀಡುತ್ತೇವೆ. ನಗರದಲ್ಲಿ ಎಪ್ರಿಲ್ – 2025 ರಿಂದ ಇಲ್ಲಿಯವರೆಗೂ 21 ಜಾನುವಾರುಗಳು ಪ್ಲಾಸ್ಟಿಕ್ ಸೇವನೆಯಿಂದ ಮೃತಪಟ್ಟಿವೆ. ಈ ಸಂಬಂಧ ಗ್ರಾಮ ಪಂಚಾಯತ್ ಹಂತದಲ್ಲಿರುವ ಪಶು ಸಖಿ ಅವರಿಗೆ ಈ ಕುರಿತು ಮಾಹಿತಿ ಕೊಟ್ಟಿರುತ್ತೇವೆ.
– ಡಾ. ಬಾಬು ರತ್ನ, ಉಪ ನಿರ್ದೇಶಕರು (ಆಡಳಿತ) ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ
ಪ್ಲಾಸ್ಟಿಕ್ ನ್ನೂ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು. ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳಿಗೆ ಅನುಮತಿ ನೀಡಿದವರು ಯಾರು? ಪ್ಲಾಸ್ಟಿಕ್ ಉತ್ಪನ್ನ ಕಾರ್ಖಾನೆಗಳ ವಿರುದ್ಧ ದಾಳಿ ಮಾಡಿ ಸೀಜ್ ಮಾಡಿದರೆ, ಇದರಿಂದ ನಷ್ಟ ಅನುಭವಿಸುವ ಪ್ಲಾಸ್ಟಿಕ್ ಉತ್ಪನ್ನ ಕಾರ್ಖಾನೆಗಳು ಕಾಲ ಕ್ರಮೇಣ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಯಂತ್ರಿಸಬಹುದು. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಕಟ್ಟುನಿಟ್ಟಾಗಿ ಪಾಲಿಸಿದರೆ ಸಂಪೂರ್ಣ ಪ್ಲಾಸ್ಟಿಕ್ ನಿರ್ಮೂಲನೆ ಆಗಬಹುದು ಎಂಬುದು ನಮ್ಮ ಅಭಿಪ್ರಾಯ.
– ಪಿ.ಸಿ.ಮಲ್ಲಿಕಾರ್ಜುನ, ಶಿವಮೊಗ್ಗ ನಗರ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರು

ಸೂಕ್ತ ಸಮಯದ ಚಿಕಿತ್ಸೆ ಅಗತ್ಯ :
ಈ ಸಮಸ್ಯೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೇ ಹೋದರೆ ಅವುಗಳ ಪ್ರಾಣಕ್ಕೂ ಕುತ್ತು ತರಬಹುದು. ಜಾನುವಾರುಗಳು ನಿತ್ಯದಂತೆ ರಸ್ತೆ ಬದಿಗಳಲ್ಲಿ, ಮೈದಾನಗಳಲ್ಲಿ ಆಹಾರ ಮೇಯುವ ಸಮಯದಲ್ಲಿ ಅರಿವಿಗೆ ಬಾರದೆ ಪ್ಲಾಸ್ಟಿಕ್ ಚೀಲವನ್ನೂ ತಿನ್ನುವ ಜಾನುವಾರುಗಳು ಒಂದೆಡೆಯಾದರೆ, ಕೆಲವು ಜಾನುವಾರು ಪೌಷ್ಟಿಕಾಂಶಗಳ ಕೊರತೆಯಿಂದಲೂ ಪ್ಲಾಸ್ಟಿಕ್ ಹಾಗೂ ಬಟ್ಟೆ ತಿನ್ನುವ ಅಭ್ಯಾಸ ರೂಢಿಸಿಕೊಳ್ಳುತ್ತವೆ. ಒಮ್ಮೆ ತಿಂದ ಪ್ಲಾಸ್ಟಿಕ್ ವಸ್ತು ಯಾವುದೇ ಕಾರಣಕ್ಕೂ ಮೆಲುಕಿನಿಂದಾಗಲೀ ಅಥವಾ ಜೀರ್ಣಗೊಂಡು ವಿಸರ್ಜಿಸುವುದಿಲ್ಲ. ಬದಲಾಗಿ ಹೊಟ್ಟೆಯ ಬಹು ಭಾಗವನ್ನು ಕ್ರಮೇಣ ಆಕ್ರಮಿಸಿಕೊಳ್ಳುತ್ತಾ ಹೋಗುತ್ತವೆ. ಹೊಟ್ಟೆಯ ಸುಮಾರು ಮುಕ್ಕಾಲು ಭಾಗದಷ್ಟು ಪ್ಲಾಸ್ಟಿಕ್ ಆಕ್ರಮಿಸಿಕೊಂಡ ಮೇಲೆ ಪ್ಲಾಸ್ಟಿಕ್ ಸಮಸ್ಯೆಯು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಪ್ಲಾಸ್ಟಿಕ್, ಹೊಟ್ಟೆಯ ಮುಕ್ಕಾಲು ಭಾಗ ಆಕ್ರಮಿಸಿಕೊಂಡ ನಂತರ ಅದರ ಜೀರ್ಣ ಶಕ್ತಿ ಗಣನೀಯವಾಗಿ ಕಡಿಮೆಯಾಗುತ್ತದೆ. ಏಕೆಂದರೆ, ಹೊಟ್ಟೆಯಲ್ಲಿ ಆಹಾರ ಶೇಖರಿಸಲು ಜಾಗವಿಲ್ಲದ್ದರಿಂದ ಹಸಿವು ಕಡಿಮೆಯಾಗುತ್ತದೆ. ಆಗ ಆಹಾರದ ಸೇವನೆ ಕಡಿಮೆಯಾಗುವುದರಿಂದ ಪೌಷ್ಟಿಕಾಂಶಗಳ ಕೊರತೆಯಾಗಿ ಜಾನುವಾರು ನಿಶ್ಯಕ್ತಗೊಳ್ಳುತ್ತದೆ. ಅಲ್ಲದೇ ಪ್ಲಾಸ್ಟಿಕ್ನ ಕೆಲವು ವಿಷವಸ್ತುಗಳು ಶರೀರವನ್ನು ಸೇರಿ ವಿಷಬಾಧೆಯನ್ನುಂಟು ಮಾಡಬಹುದು. ಯಾವುದೇ ಕಾರಣಕ್ಕೂ ಜಾನುವಾರಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕರಗದೇ, ಜೀರ್ಣವಾಗದೇ ಇರುವುದರಿಂದ, ಕ್ರಮೇಣ ಜಾನುವಾರು ನಿಶ್ಯಕ್ತಗೊಂಡು ರಕ್ತ ಹೀನತೆಯಿಂದ ಬಳಲಿ ಸಾವನ್ನಪ್ಪಬಹುದು.
ಪ್ಲಾಸ್ಟಿಕ್, ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮ :
ಪ್ಲಾಸ್ಟಿಕ್ ಬಳಕೆ ಜಾನುವಾರುಗಳ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ. ಬದಲಾಗಿ ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರಕವಾಗಿ ಪರಿಣಮಿಸಲಿದೆ. ಸರ್ಕಾರ ಪ್ಲಾಸ್ಟಿಕ್ ನಿಷೇಧದ ಜತೆಗೆ, ಜನಸಾಮಾನ್ಯರು ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಪರಿಹಾರ ಕಂಡುಕೊಳ್ಳಬೇಕಿದೆ.

ಜನ, ಜಾನುವಾರು ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ :
ಒಟ್ಟಾರೆಯಾಗಿ ಪಾಸ್ಟಿಕ್ ಬಳಕೆ ಹೆಚ್ಚಳ ಜಾನುವಾರುಗಳ ಪಾಲಿಗೆ ಶಾಪವಾಗುತ್ತಿದ್ದು, ಅದನ್ನು ತಿಂದ ಹಸುಗಳು ಅನಾರೋಗ್ಯ ಸಮಸ್ಯೆಯಿಂದ ಬಳಲಿ ಮೃತಪಡುತ್ತಿವೆ. ರೈತರು ಮತ್ತು ಪಶು ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಹಾಗೂ ಜಾನುವಾರುಗಳ ಉಳಿವಿಗಾಗಿ ನಮ್ಮದೊಂದು ಪ್ರಯತ್ನ ಇರಲಿ.
ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅಪಾಯವನ್ನು ಮನಗಂಡಿರುವ ಸರ್ಕಾರವೇನೋ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಕೈ ತೊಳೆದುಕೊಂಡಿದೆ. ಆದರೆ ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ಬಳಕೆಗೆ ಒಗ್ಗಿಕೊಂಡಿರುವ ಜನಸಾಮಾನ್ಯರು ಮನಸ್ಸು ಮಾಡುತ್ತಿಲ್ಲ. ಜನರನ್ನು ಕೇಳಿದರೆ ವ್ಯಾಪಾರಿಗಳು ಕೊಡುವುದನ್ನು ನಿಲ್ಲಿಸಲಿ ಎನ್ನುತ್ತಾರೆ. ವ್ಯಾಪಾರಿಗಳು ಸರ್ಕಾರ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳನ್ನು ಮುಚ್ಚಿಸಲಿ ಎನ್ನುತ್ತಾರೆ. ಅಧಿಕಾರಿಗಳು ಇತ್ತ ಸರ್ಕಾರದತ್ತ ಬೊಟ್ಟು ಮಾಡಲಾಗದೆ ವ್ಯಾಪಾರಿಗಳಿಂದ ಜಪ್ತಿಮಾಡಿ ಅಲ್ಪ ಸ್ವಲ್ಪ ದಂಡ ವಿಧಿಸಿ ಕೈತೊಳೆದುಕೊಳ್ಳುವುದರಿಂದ ಪ್ಲಾಸ್ಟಿಕ್ ಬಳಕೆ ಸಮಸ್ಯೆ ಬಗೆಹರಿಯುತ್ತಿಲ್ಲ. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇನ್ನಾದರೂ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಜನ, ಜಾನುವಾರು ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಿ ಎಂಬುದು ಸಾರ್ವಜನಿಕರ ಆಶಯ.