
ಶಿವಮೊಗ್ಗ : ಮಹಾ ಶಿವರಾತ್ರಿ ಆಚರಣೆಯ ಅಂಗವಾಗಿ ಇಂದು (ಫೆ.15 ರ ಭಾನುವಾರ) ಶಿವಮೊಗ್ಗ ನಗರದ ವಿವಿಧ ಶಿವನ ದೇವಾಲಯಗಳು ವಿಶೇಷ ಅಲಂಕಾರ ಮತ್ತು ಪೂಜೆಯೊಂದಿಗೆ ಭಕ್ತರನ್ನು ಸೆಳೆದವು.

ಹೊಳೆಹೊನ್ನೂರು ರಸ್ತೆಯ ಶ್ರೀ ಅರಕೇಶ್ವರ ದೇವಸ್ಥಾನದಲ್ಲಿ ಮುಂಜಾನೆ ಶಿವನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಗಳ ವೈಭವ ನಡೆಯಿತು. ವಿಶೇಷ ಪೂಜೆ, ಪುನಸ್ಕಾರ ಮತ್ತು ಬಿಲ್ವ ಪತ್ರೆ, ತುಂಬೆ ಅರ್ಪಣೆ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಬ್ಬದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಸೇರುತ್ತಾರೆ.
ಶ್ರೀ ಅರಕೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ 6.00 ಗಂಟೆಯಿಂದ 8.00 ಗಂಟೆಯವರೆಗೆ ಶ್ರೀ ನಟರಾಜ ನೃತ್ಯ ಕಲಾ ನಿಕೇತನದ ಉದಯಕುಮಾರಿ ವೆಂಕಟರಾಮ ಹಾಗೂ ಅಪರ್ಣ ಕಾರ್ತಿಕ್ ತಂಡದವರಿಂದ ಭರತ ನಾಟ್ಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಷ್ಟೋತ್ತರ (108), ಶಿವಲಿಂಗ ದರ್ಶನ, ರುದ್ರ ಹೋಮ, ಮಹಾ ರುದ್ರಭಿಷೇಕ ಹಾಗೂ ರಾತ್ರಿ ಪೂರ್ತಿ ಜಾವದ ಪೂಜೆಗಳು ಹಾಗೂ ವಿಶೇಷ ಶಿವ ಪಾರ್ವತಿ ದರ್ಶನ ಇರುತ್ತದೆ.
ನಗರದ ಎಲ್ಲ ದೇವಾಲಯಗಳಲ್ಲಿ ಭಕ್ತರ ಜಂಗುಳಿ ಕಂಡುಬಂದಿತು. ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಶಿವನ ದೇಗುಲಗಳಲ್ಲದೆ ಎಲ್ಲ ದೇವಾಲಯಗಳಲ್ಲಿ ಬೆಳೆಗಿನಿಂದಲೇ ವಿಶೇಷ ಪೂಜೆ ಅಭಿಷೇಕ ನಡೆಯಿತು. ಭಕ್ತರಿಗೆ ಪಾನಕ ಮತ್ತು ಕೋಸಂಬರಿ ಹಂಚಲಾಯಿತು.
ಇದನ್ನೂ ಓದಿ » ಶ್ರೀ ಅರಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ನಾದಮಯ ಕಾರ್ಯಕ್ರಮ