ಕಾಂಗ್ರೆಸ್ ವಿರುದ್ಧ ಸಮರಕ್ಕೆ ಬಿಜೆಪಿ ಸಜ್ಜು, ನ.5 ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ: ಎಸ್.ಎನ್.ಚನ್ನಬಸಪ್ಪ

ಶಿವಮೊಗ್ಗ : ನವೆಂಬರ್ 05 ರಂದು ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಅಭಿಯಾನದಡಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಹತ್ತಾರು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಸೇರಿದಂತೆ 03 ಜಿಲ್ಲೆಗಳಲ್ಲಿ ಹತ್ತು ಕಡೆಗಳಲ್ಲಿ ಬೃಹತ್ ಹೋರಾಟ ನಡೆಸಲು ಬಿಜೆಪಿ ಯೋಜನೆ ರೂಪಿಸಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದು ಹಾಗೂ ಚುನಾವಣಾ ಆಯೋಗದ ಸಾಂವಿಧಾನಿಕ ಕಾರ್ಯಗಳಿಗೆ ಬೆಂಬಲ ನೀಡುವುದು ಪ್ರತಿಭಟನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಶಿವಮೊಗ್ಗ ನಗರ ಈ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಹತ್ತಾರು ಸಾವಿರ ಜನರನ್ನು ಸೇರಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವವನ್ನು ಜನರಿಗೆ ತಿಳಿಸಲಾಗುವುದು. ದೇಶದ ಪೂರಕ ವ್ಯವಸ್ಥೆಗೆ ಯಾವುದೇ ಅಡ್ಡಿಯಾಗಬಾರದು. ಚುನಾವಣಾ ಆಯೋಗದ ನಿರಂತರ ಕಾರ್ಯಗಳಿಗೆ ಶಕ್ತಿ ತುಂಬುವ ಕೆಲಸವನ್ನು ಬಿಜೆಪಿ ಮಾಡಲಿದೆ.

– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು


ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಕೊಂಡೊಯ್ಯುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಎನ್‌ಡಿಎ ಸರ್ಕಾರವೂ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಎರಡು ರಾಷ್ಟ್ರಗಳ ನಡುವಿನ ಯುದ್ಧದ ಸಂದರ್ಭದಲ್ಲಿ 18 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದಿರುವುದು ದೇಶದ ಮಹತ್ವದ ಸಾಧನೆಯಾಗಿದೆ. ಸರ್ಜಿಕಲ್ ಸ್ಟ್ರೈಕ್ ಮೂಲಕವೂ ಭಾರತ ತನ್ನ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗವನ್ನು ಪ್ರಶ್ನಿಸುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಪ್ರಜಾಪ್ರಭುತ್ವದ ಬಲಿಷ್ಠ ರಾಷ್ಟ್ರವಾಗಿರುವ ಭಾರತವನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಚುನಾವಣೆಗಳು ಸಂವಿಧಾನದ ಆಶಯದಂತೆ ನಡೆಯಬೇಕು. ಆದರೆ ಚುನಾವಣಾ ಆಯೋಗವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೂ ಅದರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಲವು ವ್ಯವಸ್ಥೆಗಳಿದ್ದು, ಚುನಾವಣಾ ಆಯೋಗ ಅದನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ. ಎಸ್‌ಐಆರ್ ಪ್ರಕ್ರಿಯೆ ಹೀಗೆ ನಡೆಯಲಿದೆ. ಆದರೆ ಸುಳ್ಳು ಆರೋಪಗಳ ಮೂಲಕ ಚುನಾವಣಾ ಆಯೋಗದ ಮೇಲೆ ಅಪವಾದ ಹೊರಿಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಜನರಿಗೆ ಸತ್ಯಾಂಶಗಳನ್ನು ತಿಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.

ಬ್ರಿಟಿಷರು ಮತ್ತು ಮೊಘಲರ ವಿರುದ್ಧ ಹೋರಾಡಿದ ಪರಿಸ್ಥಿತಿಗಿಂತಲೂ ಮಿಗಿಲಾಗಿ ಈಗ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಯುವಕರನ್ನು ದಿಕ್ಕು ತಪ್ಪಿಸುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಹಾಗೂ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇಂತಹ ಬೆಳವಣಿಗೆಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಬಿಜೆಪಿ ಜನಾಂದೋಲನ ರೂಪಿಸುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಡಿ. ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ದೀನದಯಾಳು, ನವುಲೆ ಮಂಜುನಾಥ್, ಮಾಜಿ ಪಾಲಿಕೆ ಸದಸ್ಯ ಪ್ರಭಾಕರ್, ನಗರ ಪದಾಧಿಕಾರಿಗಳಾದ ಪರಮೇಶ್ ನಾಯ್ಕ್, ಸೋಮೇಶ್ ಪಿ. ಶೇಟ್, ರಂಗೇಶ್, ಪನೀರ್ ಸೆಲ್ವಂ, ಮಹಾಲಕ್ಷ್ಮಿ, ಯಶೋದಾ, ಸುಧಾಮಣಿ, ಪ್ರಕಾಶ್ ಒಡಿನಕೊಪ್ಪ ಹಾಗೂ ಮಾಧ್ಯಮ ಸಂಚಾಲಕ ಶ್ರೀನಾಗ್ ಉಪಸ್ಥಿತರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...