ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ ಸಾಧ್ಯ: ಆರ್.ಗಣೇಶ್

ಶಿವಮೊಗ್ಗ : ಜವಳಿ ಉದ್ಯಮದ ಬೆಳವಣಿಗೆಯಿಂದ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ ಹೇಳಿದರು.

ನಗರದ ಶಿವಪ್ಪನಾಯಕ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್, ಶಿವಮೊಗ್ಗ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ರಫ್ತು ಪ್ರೋತ್ಸಾಹನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಿರುವ ಕೈಗಾರಿಕೆಗಳ ವಿಸ್ತರಣೆ ಹಾಗೂ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರದ ಕೈಗಾರಿಕಾ ನೀತಿ ಹಾಗೂ ಜವಳಿ ನೀತಿಯ ಮೂಲಕ ಉತ್ತೇಜನ ನೀಡಲಾಗುತ್ತಿದ್ದು, ಉದ್ಯಮಿಗಳ ಪ್ರಗತಿಗೆ ಅಗತ್ಯ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಜವಳಿ ಉದ್ಯಮವು ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾದಂತೆ ಉದ್ಯೋಗಾವಕಾಶಗಳೂ ಹೆಚ್ಚಾಗಲಿವೆ. ಕೈಗಾರಿಕೆಗಳ ವಿಸ್ತರಣೆ ಹಾಗೂ ಹೊಸ ಉದ್ಯಮಗಳ ಸ್ಥಾಪನೆಗೆ ಪೂರಕವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಕೈಗಾರಿಕಾ ನೀತಿಯನ್ನು ರೂಪಿಸಲಾಗುತ್ತದೆ. ಉದ್ಯಮಿಗಳು ಈ ಅವಕಾಶಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು.

– ಆರ್. ಗಣೇಶ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು


ಭಾರತ ಸರ್ಕಾರದ ಜವಳಿ ಸಚಿವಾಲಯವು 2030ರ ವೇಳೆಗೆ ಜವಳಿ ಮತ್ತು ಸಿದ್ಧ ಉಡುಪುಗಳ ರಫ್ತನ್ನು 100 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಿದೆ. ಪ್ರಸ್ತುತ ಸುಮಾರು 35 ಬಿಲಿಯನ್ ಡಾಲರ್ ಮಟ್ಟದಲ್ಲಿರುವ ಭಾರತದ ಜವಳಿ ರಫ್ತನ್ನು ನಿಗದಿತ ಗುರಿಗೆ ತಲುಪಿಸಲು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ರಫ್ತು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ. ಈ ಉದ್ದೇಶದಿಂದ ಉದ್ಯಮಿಗಳಿಗೆ ರಫ್ತು ಅವಕಾಶಗಳು, ನೋಂದಣಿ ಪ್ರಕ್ರಿಯೆಗಳು ಹಾಗೂ ರಫ್ತು ವಹಿವಾಟಿನ ಕುರಿತು ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗಿದೆ.

– ಸುಮಲತಾ ಡಿ., ಕೈಮಗ್ಗ ಮತ್ತು ಜವಳಿ ಇಲಾಖೆ, ಪೂರ್ವ ವಲಯ, ತುಮಕೂರು


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಪೂರ್ವ ವಲಯ, ತುಮಕೂರಿನ ಜಂಟಿ ನಿರ್ದೇಶಕಿ ಸುಮಲತಾ ಡಿ. ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಜವಳಿ ಉತ್ಪನ್ನಗಳಿದ್ದರೂ, ರಫ್ತು ಪ್ರಕ್ರಿಯೆಗಳ ಕುರಿತು ಅರಿವಿನ ಕೊರತೆಯಿಂದ ಉದ್ಯಮಿಗಳು ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಹಿಂದೆ ಉಳಿದಿದ್ದಾರೆ. ಉತ್ಪನ್ನಗಳ ಗುಣಮಟ್ಟದ ಜೊತೆಗೆ ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್‌ಗೂ ಆದ್ಯತೆ ನೀಡಬೇಕು. ರಫ್ತು ವಹಿವಾಟು ಆರಂಭಿಸಲು ಅಗತ್ಯವಿರುವ ಆಮದು-ರಫ್ತು ಕೋಡ್ (ಐಇಸಿ) ಪಡೆಯುವ ವಿಧಾನ ಹಾಗೂ ಅದಕ್ಕೆ ಬೇಕಾದ ದಾಖಲೆಗಳ ಕುರಿತು ಉದ್ಯಮಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉತ್ಪನ್ನಗಳನ್ನು ಹಡಗು, ವಿಮಾನ ಸರಕು ಸಾಗಣೆ ಹಾಗೂ ಅಂಚೆ ಇಲಾಖೆಯ ಮೂಲಕ ವಿದೇಶಗಳಿಗೆ ಕಳುಹಿಸಬಹುದು. ರಫ್ತು ವಹಿವಾಟಿನಲ್ಲಿನ ಪಾವತಿ ಅಪಾಯಗಳಿಂದ ರಕ್ಷಣೆ ಪಡೆಯಲು ಭಾರತ ಸರ್ಕಾರದ ಅಂಗಸಂಸ್ಥೆಯಾದ ರಫ್ತು ಸಾಲ ಖಾತರಿ ನಿಗಮದ (ಇಸಿಜಿಸಿ) ಸೇವೆಗಳನ್ನು ಬಳಸಿಕೊಳ್ಳಬಹುದು. ಸರಕುಗಳಿಗೆ ವಿಮೆ ಮಾಡಿಸುವ ಮಹತ್ವ ಹಾಗೂ ಸಣ್ಣ ಉದ್ಯಮಿಗಳು ಅಂಚೆ ಇಲಾಖೆಯ ಮೂಲಕ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಿದರು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ವಿಟಿಪಿಸಿ ಅರವಿಂದ್ ಭಟ್, ಬೆಂಗಳೂರು ವಿಜ್ಞಾನಿ-ಬಿ ಕೇಂದ್ರೀಯ ರೇಷ್ಮೆ ಮಂಡಳಿಯ ಸಂಕೇತ್ ಕೂಗೆ, ಎಕ್ಸ್ ಪೋರ್ಟ್ ಕ್ರೆಡಿಟ್ ಗ್ಯಾರೆಂಟಿ ಕಾರ್ಪೊರೇಷನ್ ವಿಕಾಸ್ ಪ್ರಸಾದ್, ಶಿವಮೊಗ್ಗ ಪ್ರಧಾನ ಅಂಚೆ ಕಚೇರಿಯ ಸಾರ್ವಜನಿಕ ಸಂಪರ್ಕ ನಿರೀಕ್ಷಕರಾದ ಸುಂದರೇಶ್ ಬಿ.ಜೆ., ಶಿವಮೊಗ್ಗ ಉಪ ವಿಭಾಗ ಅಂಚೆ ಕಚೇರಿಯ ಮಾರುಕಟ್ಟೆ ಕಾರ್ಯನಿರ್ವಾಹಕರಾದ ಸುರೇಶ್ ಎ. ಹಾಗೂ ಆಶಾ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ್ ಹೆಚ್. ಅಮ್ರದ್ ಉಪಸ್ಥಿತರಿದ್ದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...