
ಶಿವಮೊಗ್ಗ : ಗ್ರಾಹಕರಿಗೆ ಋತುಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ವಿವಿಧ ಬಗೆಯ ದೇಶಿ ಹಾಗೂ ವಿದೇಶಿ ಹಣ್ಣುಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ನೂತನ ಹಣ್ಣು ಮತ್ತು ಜ್ಯೂಸ್ ಮಾರಾಟ ಮಳಿಗೆ ಆರಂಭಿಸಲಾಗುತ್ತಿದೆ. ನಾಳೆ (ನ.06 ರಂದು) ಬೆಳಿಗ್ಗೆ 11.00 ಗಂಟೆಗೆ ಮಳಿಗೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಹಾಪ್ ಕಾಮ್ಸ್ ಅಧ್ಯಕ್ಷ ಆರ್. ವಿಜಯಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ಪಾರ್ಕ್ ಸಮೀಪದ ಬಾಲರಾಜ ಅರಸ್ ರಸ್ತೆಯಲ್ಲಿರುವ ಹಾಪ್ ಕಾಮ್ಸ್ ಪ್ರಧಾನ ಕಚೇರಿಯ ಕೆಳಭಾಗದಲ್ಲಿ ನೂತನ ಮಳಿಗೆ ಕಾರ್ಯಾರಂಭ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಆಯಾ ಋತುಮಾನಕ್ಕೆ ಅನುಗುಣವಾಗಿ ಲಭ್ಯವಾಗುವ ವಿವಿಧ ಬಗೆಯ ಹಣ್ಣುಗಳನ್ನು ಇಲ್ಲಿ ಮಾರಾಟಕ್ಕೆ ಇಡಲಾಗುವುದು. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ತಾಜಾ ಹಣ್ಣುಗಳನ್ನು ಒದಗಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಮಳಿಗೆಯಲ್ಲಿ ಲಿಚ್ಚಿ, ರಾಂಬುಟಾನ್, ಲಾಂಗನ್, ಆಸ್ಟ್ರೇಲಿಯನ್ ದ್ರಾಕ್ಷಿ, ಸ್ಟಾರ್ ಫ್ರೂಟ್, ಡ್ರ್ಯಾಗನ್ ಫ್ರೂಟ್, ಚೆರ್ರಿ, ಮ್ಯಾಂಡರಿನ್, ಕಿವಿ, ಬೀಜರಹಿತ ದ್ರಾಕ್ಷಿ, ನೇರಳೆ, ಬ್ಲೂಬೆರ್ರಿ ಹಾಗೂ ಸ್ಟ್ರಾಬೆರಿ ಸೇರಿದಂತೆ ಹಲವು ಬಗೆಯ ದೇಶಿ ಮತ್ತು ವಿದೇಶಿ ಹಣ್ಣುಗಳು ಲಭ್ಯವಿರಲಿವೆ. ಅಲ್ಲದೆ, ತಾಜಾ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ಗಳನ್ನೂ ಮಾರಾಟ ಮಾಡಲಾಗುವುದು. ಗ್ರಾಹಕರು ಗುಣಮಟ್ಟದ ವಿವಿಧ ಹಣ್ಣುಗಳನ್ನು ಒಂದೇ ಸ್ಥಳದಲ್ಲಿ ಖರೀದಿಸಲು ಈ ಮಳಿಗೆಯಿಂದ ಅನುಕೂಲವಾಗಲಿದೆ.
– ಆರ್. ವಿಜಯಕುಮಾರ್, ಹಾಪ್ ಕಾಮ್ಸ್ ಅಧ್ಯಕ್ಷರು
ಇತ್ತೀಚೆಗೆ ನವುಲೆ ಕೃಷಿ ಕಾಲೇಜು ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳದಲ್ಲಿ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಅವರ ತೋಟದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಸೀಬೆಹಣ್ಣುಗಳನ್ನು ಹಾಪ್ ಕಾಮ್ಸ್ ಮೂಲಕ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 10 ಕ್ವಿಂಟಲ್ ಸೀಬೆಹಣ್ಣುಗಳು ಮಾರಾಟವಾಗಿದ್ದು, ಇದು ಸಂಸ್ಥೆಗೆ ಮತ್ತಷ್ಟು ಉತ್ತೇಜನ ನೀಡಿದೆ ಎಂದು ವಿಜಯಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಅಕ್ಷಯ್, ನಿರ್ದೇಶಕರಾದ ಶರತ್ ಮರಿಯಪ್ಪ, ನಾಗೇಶ್ ನಾಯ್ಕ್, ಎಚ್.ಎನ್. ನಾಗರಾಜ್, ಕಾಂತರಾಜ್ ಅಗಸವಳ್ಳಿ, ಮೋಹನ್ ಗೌಡ ಹಾಗೂ ನೂತನ ಮಳಿಗೆಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಉಪಸ್ಥಿತರಿದ್ದರು.