
ಶಿವಮೊಗ್ಗ : ಶಿವಮೊಗ್ಗ ನಗರದ ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಮೇ 17 ರಂದು ನಗರದಲ್ಲಿ ಆಯೋಜಿಸಿರುವ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೃತಜ್ಞತಾ ಸಮಾರಂಭಕ್ಕೆ ಸಕಲ ಸಿದ್ಧತೆ ನಡೆದಿದ್ದು, ಜಿಲ್ಲೆಯ ವಿವಿಧೆಡೆಗಳಿಂದ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಡ್ಡ ಪಲ್ಲಕ್ಕಿ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಆಯನೂರು ಮಂಜುನಾಥ್ ತಿಳಿಸಿದ್ದಾರೆ.
ಮೇ.17ರ ಮ.3 ಕ್ಕೆ ಗಾಂಧಿ ಬಜಾರ್‌ನಿಂದ ಅಡ್ಡಪಲ್ಲಕ್ಕಿ ಉತ್ಸವ ಶುರುವಾಗಲಿದೆ. ಪೂರ್ಣಕುಂಬದೊಂದಿಗೆ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಹತ್ತಕ್ಕೂ ಹೆಚ್ಚು ಕಲಾ ತಂಡಗಳು ಇರಲಿವೆ. ಈ ಉತ್ಸವಕ್ಕಾಗಿ ಇಡೀ ನಗರವನ್ನು ಶೃಂಗರಿಸುವ ಕೆಲಸ ನಡೆದಿದೆ.
– ಆಯನೂರು ಮಂಜುನಾಥ್, ಕಾರ್ಯಾಧ್ಯಕ್ಷರು, ಅಡ್ಡ ಪಲ್ಲಕ್ಕಿ ಮಹೋತ್ಸವ ಸಮಿತಿ
ಸಮಾರಂಭದಲ್ಲಿ 48 ಮಠಾದೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. 34 ವರ್ಷಗಳ ನಂತರ ಮಹೋತ್ಸವ ನಡೆಯುತ್ತಿರುವುದರಿಂದ ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಇದೆ. ಕೃತಜ್ಞತಾ ಸಮಾರಂಭಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಲಕ್ಷ್ಮಿ ಟಾಕೀಸ್ ಬಳಿಯಿಂದ ತೆರೆದ ಜೀಪ್‌ನಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆದೊಯ್ಯಲಾಗುವುದು.
– ಎಸ್.ಎಸ್.ಜ್ಯೋತಿಪ್ರಕಾಶ್, ಅಧ್ಯಕ್ಷರು, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವವು ಶಿವಮೊಗ್ಗ ನಗರದಲ್ಲಿ 34 ವರ್ಷಗಳ ಬಳಿಕ ನಡೆಯುತ್ತಿದೆ. ಅದರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೃತಜ್ಞತಾ ಸಮಾರಂಭ ಕೂಡ ಆಯೋಜನೆ ಗೊಂಡಿರುವುದು ವಿಶೇಷವಾಗಿದೆ. ಹಾಗಾಗಿ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಸುಮಾರು 20 ರಿಂದ 25 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೃತಜ್ಞತೆ ಸಲ್ಲಿಸಿ ಗೌರವಿಸಲಾಗುವುದು. ಆನಂತರ ಸಮಾರಂಭದಲ್ಲಿ ಪಂಚಪೀಠಾಧೀಶ್ವರರು ಆಶೀರ್ವಚನ ನೀಡುವರು.
ಅಂದು ಮಧ್ಯಾಹ್ನ 3.00 ಗಂಟೆಗೆ ಗಾಂಧಿಬಜಾರ್‌ನ ಬಸವೇಶ್ವರ ದೇವಸ್ಥಾನದಿಂದ ಕಲಾತಂಡಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಅಡ್ಡಪಲ್ಲಕ್ಕಿ ಉತ್ಸವ ಹೊರಟು ಶಿವಪ್ಪನಾಯಕ ವೃತ್ತ, ನೆಹರು ರಸ್ತೆ, ದುರ್ಗಿಗುಡಿ, ದೈವಜ್ಞ ವೃತ್ತ, ಲಕ್ಷ್ಮೀ ಚಿತ್ರಮಂದಿರದ ರಸ್ತೆ ಮೂಲಕ ಅಲ್ಲಮಪ್ರಭು ಮೈದಾನದವರೆಗೆ ತಲುಪಲಿದೆ. ನಂತರ ಸಂಜೆ 4.30 ರಿಂದ 6.00 ಗಂಟೆಯವರೆಗೆ ಶಿವಮೊಗ್ಗದ ಮಹಿಳಾ ಬಳಗದಿಂದ ಭಕ್ತಿಗಾಯನ ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣ ನಡೆಯಲಿದೆ ಎಂದರು.
ಸಂಜೆ 6.00 ಗಂಟೆಗೆ ಅಲ್ಲಮಪ್ರಭು ಮೈದಾನದಲ್ಲಿ ಧರ್ಮ ಜಾಗೃತಿ ಸಭೆ ಹಾಗೂ ಕೃತಜ್ಞತಾ ಸಮರ್ಪಣಾ ಸಮಾರಂಭ ಜರುಗುವುದು. ಪಂಚಪೀಠದ ಪಂಚಪೀಠಾಧೀಶ್ವರರಾದ ಬಾಳೆಹೊನ್ನೂರು ಪೀಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯರು, ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶೀ ಕೇಂದ್ರ ಶಿವಾಚಾರ್ಯರು, ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು, ಶ್ರೀಶೈಲ ಮಠದ ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಕಾಶೀಪೀಠದ ಜಗದ್ಗುರು ಶ್ರೀ ವಿದ್ಯಾವಾಚಸ್ಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಭಾಗವತ್ಪಾದರು ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸಂಸದರು, ಮಹೋತ್ಸವ ಸಮಿತಿ ಅಧ್ಯಕ್ಷರೂ ಆದ ಬಿ.ವೈ.ರಾಘವೇಂದ್ರ, ಕೆಆರ್‌ಐಡಿಎಲ್ ಅಧ್ಯಕ್ಷ ಬಿ.ಕೆ.ಸಂಗಮೇಶ್, ಮಹೋತ್ಸವ ಸಮಿತಿ ಕಾರ್ಯಧ್ಯಕ್ಷ ಆಯನೂರು ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಷಡಾಕ್ಷರಿ, ಬಳ್ಳೇಕೆರೆ ಸಂತೋಷ್, ಪ್ರಮುಖರಾದ ಎಸ್.ರುದ್ರೇಗೌಡ, ಡಾ. ಧನಂಜಯ ಸರ್ಜಿ, ಎಂ.ಆರ್.ಪ್ರಕಾಶ್, ಅನಿತಾ ರವಿಶಂಕರ್, ಹೆಚ್.ವಿ.ಮಹೇಶ್ವರಪ್ಪ, ಜಗದೀಶ್, ಮರುಳೇಶ್, ರೇಣುಕಾರಾಧ್ಯ, ವಿರುಪಾಕ್ಷಪ್ಪ, ಪ್ರದೀಪ್ ಎಲಿ ಮತ್ತಿತರರು ಉಪಸ್ಥಿತರಿದ್ದರು.