
ಶಿವಮೊಗ್ಗ : ಅನ್ಯಾಯದ ವಿರುದ್ಧ ಧ್ವನಿಯಾಗಿ, ಸಮಾನತೆಗಾಗಿ ಹೋರಾಡಿದ ಯುಗಪುರುಷ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು.
ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ, ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ರವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯರಾದ ಇವರು ಅತ್ಯಂತ ಮೇಧಾವಿ. ಅಸಮಾನತೆ ವಿರುದ್ದ ಧ್ವನಿ ಎತ್ತಿ, ಮಹಿಳಾ ಹಕ್ಕುಗಳಿಗೆ ಹೋರಾಡಿ, ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಹಕ್ಕುಗಳನ್ನು ನೀಡಿದರು. ಇಂದಿನ ಯುವಜನತೆ ಅಂಬೇಡ್ಕರ್ ರವರ ಜೀವನ ಚರಿತ್ರೆ, ಅವರ ಸಾಹಿತ್ಯವನ್ನು ಓದಿ ತಿಳಿದರೆ ಸಾಕು, ಖಿನ್ನತೆಯಿಂದ ಹೊರ ಬರಬಹುದು ಎಂದ ಅವರು ಅಂಬೇಡ್ಕರ್ ರವರ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಭಾರತೀಯ ಸಂವಿಧಾನ ರಚನೆ ಮುನ್ನ ನಮ್ಮ ದೇಶದ ಪ್ರತಿ ಅಂಶಗಳನ್ನು ಅಧ್ಯಯನ ಮಾಡಿ, ಸರ್ವಧರ್ಮಗಳು ಸಮವೆಂದು ಸಾರುವ ಅಂಶಗಳ ಆಧಾರದ ಮೇಲೆ ಸಂವಿಧಾನ ರಚಿಸಿ ಪ್ರಾತಸ್ಮರಣೀಯರಾಗಿದ್ದಾರೆ. ದೇಶಕ್ಕಾಗಿ ಬದುಕಿದ ಅವರ ಕಾರ್ಯಗಳು ಎಂದಿಗೂ ಜೀವಂತ. ಪ್ರತಿಭಟನೆ ಮೂಲಕ ಅಸ್ಪೃಶ್ಯರಿಗೆ ಮಂದಿರಗಳಿಗೆ ಪ್ರವೇಶ ಕೊಡಿಸಿದರು. ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡಿದರು. ಅವರ ಜೀವನವೇ ಹೋರಾಟವಾಗಿದ್ದು, ಯಾರೇ ಆಗಲಿ ಯಾವುದೇ ಮಠ, ಮಂದಿರಕ್ಕೆ ಯಾವಾಗಲಾದರೂ ಹೋಗಬಹುದು, ಯಾವುದೇ ಕೇರಿಯಲ್ಲಿ ಬಾವಿ ನೀರು ಕುಡಿಯುವಂತೆ ಮಾಡುವ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿದರು. ಇಂತಹ ಭವ್ಯ ಭಾರತದ ಅಭಿವೃದ್ಧಿಯ ತೇರನ್ನು ನಾವೆಲ್ಲ ಸೇರಿ ಎಳೆಯಬೇಕಿದೆ ಎಂದರು.
ಅಂಬೇಡ್ಕರ್ ರವರ ತತ್ವಗಳು, ಆದರ್ಶಗಳು ಹಾಗೂ ಮೌಲ್ಯಗಳು ಉದಾತ್ತವಾಗಿದ್ದು, ನಾವೆಲ್ಲ ಅದೇ ಸಂಕಲ್ಪ ಮಾಡಿ ಅವನ್ನು ಮುನ್ನಡೆಸಿಕೊಂಡು ಹೋಗಬೇಕಿದೆ. ಅತ್ಯಂತ ಸುಶಿಕ್ಷಿತರಾಗಿದ್ದ ಅವರು ಶ್ರೇಷ್ಟ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿದ್ದಾರೆ.
– ಬಿ.ವೈ.ರಾಘವೇಂದ್ರ, ಸಂಸದರು
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೇಲವ ವ್ಯಕ್ತಿಯಲ್ಲ ಅವರೊಬ್ಬ ಶಕ್ತಿ. ಅಸ್ಪೃಶ್ಯತೆ ನಿವಾರಣೆ ಮಾಡಿ, ಸರ್ವಧರ್ಮಗಳು ಸಮ ಭಾವದಿಂದ ಬದುಕಬೇಕೆಂಬ ಸಂವಿಧಾನ ನೀಡಿದ ಮಹಾನ್ ಚೇತನ. ಬಿದ್ದವರನ್ನು ಮೇಲೆತ್ತಿ, ಅಸ್ಪೃಶ್ಯತೆ ವಿರುದ್ದ ಗಟ್ಟಿಯಾಗಿ ಧ್ವನಿ ಎತ್ತಿದ ಅಂಬೇಡ್ಕರ್ ರವರ ಮೊದಲ ಸೂತ್ರ ಶಿಕ್ಷಣವಾಗಿದ್ದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ಡಾ. ಬಿ.ಆರ್.ಅಂಬೇಡ್ಕರ್ ರವರು ದೈವದತ್ತ ಕೊಡುಗೆ. ನಮ್ಮ ಸಂವಿಧಾನಕ್ಕೆ ಮಹಾನ್ ಶಕ್ತಿ ಇದ್ದು, ಪರಿಣಾಮಕಾರಿಯಾಗಿ ನಾವೆಲ್ಲ ಅನುಷ್ಠಾನ ಮಾಡಿಕೊಂಡು ಹೋಗಬೇಕಿದೆ. ನಮ್ಮೆಲ್ಲರಿಗೆ ಧ್ವನಿ ನೀಡಿದ ಮಹಾನ್ ಚೇತನವು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು. ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಗಾಗಿ ವಿಶೇಷವಾಗಿ ಹೋರಾಡಿದ ಶಕ್ತಿ ಅವರು.
– ಶಾರದಾ ಪೂರ್ಯಾನಾಯ್ಕ್, ಶಿವಮೊಗ್ಗ ಗ್ರಾಮಾಂತರ ಶಾಸಕರು
ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ನಾಗೇಶ್ ಬಿದರಗೋಡು ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ರವರ ವಿಷಯದಲ್ಲಿ ವಿಜೃಂಭಣೆಗಿಂತ ವಿಚಾರ ಮುಖ್ಯ, ಆರಾಧನೆಗಿಂತ ಆಚರಣೆ ಮುಖ್ಯವಾಗಬೇಕು. ಅಂಬೇಡ್ಕರ್ ಪ್ರಜ್ಞೆಯಾಗಿ ನಮ್ಮೊಳಗೆ ಇರಬೇಕು. ಯಾವ ಮಾನದಂಡಗಳಲ್ಲೂ ಅವರನ್ನು ಅಳೆಯಲು ಸಾಧ್ಯವಿಲ್ಲ. ಅಗತ್ಯವಿರುವುದನ್ನು ಹುಟ್ಟುಹಾಕಿದರು.
ಸಂಘರ್ಷದ ಹಾದಿಗಿಂತ ಸಂವಾದದ ಹಾದಿ ಅವರದ್ದಾಗಿತ್ತು. ಮನುಷ್ಯರು ಮನುಷ್ಯರ ಮುಂದೆ ಸಮಾನವಾಗಿರಬೇಕು ಎಂಬುದು ಅವರ ನಡೆಯಾಗಿತ್ತು. ಶಿಕ್ಷಣ ಪಡಯಿರಿ, ಸಂಘಟಿತರಾಗಿ ಹೋರಾಡಿ ಎಂಬುದು ಅವರ ಮೂಲಮಂತ್ರವಾಗಿತ್ತು. ಮಹಿಳೆಯರನ್ನು ಈ ದೇಶದ ಪ್ರಗತಿಯ ಮಾನದಂಡವಾಗಿ ಎತ್ತಿ ಹಿಡಿದವರು ಅಂಬೇಡ್ಕರ್ ಎಂದರು.
ಈಗಲೂ ಅಸಮಾನತೆ ಇದೆ. ನಮ್ಮ ಎದೆಯೊಳಗೆ ಅಂಬೇಡ್ಕರ್ ಇಳಿಯದ ಹೊರತು, ಅವರನ್ನು ಅನುಸರಿಸದ ಹೊರತು ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ. ಮನುಷ್ಯರಾಗಲು ಹಿಂದೆ ಉಳಿದಿದ್ದು, ಆ ನಿಟ್ಟಿನಲ್ಲಿ ನಾವು ಮುಂದೆ ಸಾಗಬೇಕಿದೆ. ಅಂಬೇಡ್ಕರ್ ಕಂಡ ಕನಸಿನೆಡೆ ನಮ್ಮಹೆಜ್ಜೆ ಇರಿಸಬೇಕಿದೆ. ಕಿರಿಯ ತಲೆಮಾರು ಅವರ ದಾರಿಯಲ್ಲಿ ಸಾಗಬೇಕಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ(ವಿದ್ಯುತ್ ಮಗ್ಗಗಳು) ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿ ನಿಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ. ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ » ಮೆಗ್ಗಾನ್ ಆಸ್ಪತ್ರೆಗೆ ಶಿಕಾರಿಪುರ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ