
ಶಿವಮೊಗ್ಗ : ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಹಾಗೂ ಸುಬ್ಬಯ್ಯ ಆಸ್ಪತ್ರೆ, ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ ಸೆ.19 ರಂದು ಬೆಳಿಗ್ಗೆ 10.00 ಗಂಟೆಗೆ ಮೇಲಿನ ಹನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಗಾ ಪ್ರೌಢಶಾಲೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ದಂತ ಪರೀಕ್ಷೆ ಹಾಗೂ ಮಧುಮೇಹ ಪರೀಕ್ಷೆ ನಡೆಸಲಾಗುವುದು. ಮಹಿಳೆಯರಿಗೆ ಉಚಿತ ಸ್ತನ ಕ್ಯಾನ್ಸರ್ ತಪಾಸಣೆಯನ್ನೂ ಹಮ್ಮಿಕೊಳ್ಳಲಾಗಿದೆ. ಹಾಗೂ ರಕ್ತದಾನ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷೆ ವಿನುತ ಅಶ್ವಿನ್ ಹಾಗೂ ಕಾರ್ಯದರ್ಶಿ ಜ್ಯೋತಿ ಶ್ರೀರಾಮ ಸೇರಿದಂತೆ ರೋಟರಿ ಕ್ಲಬ್‌ನ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ವೈದ್ಯರಾದ ಡಾ. ಸುರೇಶ್ ಹಾಗೂ ಡಾ. ಗುಡದಪ್ಪ ಕಸಬಿ ಸೇರಿದಂತೆ ತಜ್ಞ ವೈದ್ಯರು ಶಿಬಿರದಲ್ಲಿ ಸೇವೆ ಸಲ್ಲಿಸಲಿದ್ದಾರೆ. ತುಂಗಾ ಪ್ರೌಢಶಾಲೆಯ ಅಧ್ಯಕ್ಷ ರಮೇಶ್ ಹಂಪಣ್ಣ, ಮುಖ್ಯೋಪಾಧ್ಯಾಯ ಜೆ.ಡಿ. ಬಸವರಾಜ್ ಹಾಗೂ ಶಾಲಾ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.