
ಶಿವಮೊಗ್ಗ : ಕೇಂದ್ರ ಸರ್ಕಾರ ಜಿಲ್ಲೆಯ ಸಾಗರ ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ (Nuclear Power Plant) ನಿರ್ಮಿಸಲು ಮುಂದಾಗಿದ್ದು, ಈಗಾಗಲೆ ನಿರಾಪೇಕ್ಷಣಾ ಪತ್ರ ಕೋರಿ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಪತ್ರ ಬರೆದಿದ್ದು, ಈ ವಿಚಾರ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಲಿಂಗನಮಕ್ಕಿ, ಚಕ್ರಾ-ಸಾವೆಹಕ್ಲು, ಮಾಣಿ ಇತರೆ ಆಣೆಕಟ್ಟುಗಳ ನಿರ್ಮಾಣದಿಂದಾಗಿ ನೂರಾರು ಹಳ್ಳಿಗಳು ಮುಳುಗಡೆಯಾಗಿವೆ. ಈ ಯೋಜನೆಗಳಿಂದಾಗಿ ತಲೆಮಾರುಗಳಿಂದ ವಾಸಿಸುತ್ತಿದ್ದ ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿ ಪುರ್ನವಸತಿ ಸಿಗದೆ ಅತಂತ್ರರಾಗಿದ್ದಾರೆ. ಇಂದಿಗೂ ತಮ್ಮ ಕಳೆದುಹೋದ ಬದುಕಿನ ಸಂಕಟವನ್ನು ಅನುಭವಿಸುತ್ತಿದ್ದಾರೆ. ಇತಂಹ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಶರಾವತಿ ಹಿನ್ನೀರು ಪ್ರದೇಶದ ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಪ್ರಸ್ತಾವನೆ ಸ್ಥಳೀಯ ಜನರ ನಿದ್ದೆಗೆಡಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ಸಾಗರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ವಿಮಾನವೊಂದು ಕೆಳ ಮಟ್ಟದಲ್ಲಿ ಹಾರಾಟ ನಡೆಸಿತ್ತು. ಚಿನ್ನದ ಗಣಿ ಇರುವ ಜಾಗ ಗುರುತಿಸಲು ವಿಮಾನ ಹಾರಾಟ ನಡೆಸುತ್ತಿದೆ ಎಂದು ಕೆಲವರು ತಿಳಿದುಕೊಂಡಿದ್ದರೆ, ಇನ್ನು ಕೆಲವರು ಪೆಟ್ರೋಲ್ ನಿಕ್ಷೇಪಕ್ಕಾಗಿ ಶೋಧ ನಡೆದಿದೆ ಎಂದು ಹುಯಿಲೆಬ್ಬೆಸಿದ್ದರು. ಆದರೆ ವಾಸ್ತವವಾಗಿ ವಿಮಾನ ಹಾರಾಟ ನಡೆಸಿದ್ದ ಏಕೆ ಎನ್ನುವ ಸತ್ಯವೀಗ ಹೊರಗೆ ಬಿದ್ದಿದೆ.
ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರ ನಿರ್ಮಿಸಲು ಸೂಕ್ತ ಜಾಗಕ್ಕಾಗಿ ಶರಾವತಿ ಹಿನ್ನೀರು ಪ್ರದೇಶದ ಕೆಲವು ಪ್ರದೇಶಗಳ ಮೇಲೆ ಅತಿ ಕೆಳಗೆ ವಿಮಾನ ಹಾರಾಟ ನಡೆಸಿ ಸಮೀಕ್ಷೆ ನಡೆಸಿದೆ.ಅಂತಿಮವಾಗಿ ಕೋಳೋರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಿಸಲು ಸೂಕ್ತ ಸ್ಥಳ ಎಂದು ವಿಮಾನ ಗುರುತು ಮಾಡಿದೆ.
ಹಲವು ಜಿಲ್ಲೆಗಳಲ್ಲಿ ಸ್ಥಳ ಪರಿಶೀಲನೆ :
ಕೇಂದ್ರ ಸರ್ಕಾರ ಅಧೀನದ ಎನ್.ಟಿ.ಪಿ.ಸಿ ಸಂಸ್ಥೆಯಿಂದ ರಾಜ್ಯದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ವಿಜಯಪುರ, ಕೊಪ್ಪಳ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ರಾಯಚೂರು ಜಿಲ್ಲೆಗಳನ್ನು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಸೂಕ್ತ ಸ್ಥಳಗಳ ಆಯ್ಕೆಗಾಗಿ ಪ್ರಾಥಮಿಕ ಅಧ್ಯಯನಗಳು ಹಾಗೂ ಭೂ-ವೈಜ್ಞಾನಿಕ ಪರಿಶೀಲನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ.ಈ ಹಿನ್ನಲೆಯಲ್ಲಿ ಸ್ಥಳ ಗುರುತಿಸುವ ಕಾರ್ಯ ನಡೆಸಲಾಗಿದೆ.
ಎರಡು ಗ್ರಾಮ ಆಯ್ಕೆ :
ರಾಜ್ಯದ ಬಳ್ಳಾರಿ, ಸಂಡೂರು ಮತ್ತು ಸಾಗರ ತಾಲ್ಲೂಕಿನ ಗ್ರಾಮವನ್ನು ಬೇಸೂರು ಅಯ್ಕೆ ಮಾಡಿಕೊಳ್ಳಲಾಗಿದೆ. ಬೇಸೂರು ಗ್ರಾಮದ ಶರಾವತಿ ಹಿನ್ನೀರಿನ ಪ್ರದೇಶದ ಸರ್ವೆ ನಂಬರ್ 104, 94, 80, 82 ಸೇರಿ ಹತ್ತಾರು ಸರ್ವೇ ನಂ. ಗುರುತಿಸಲಾಗಿದೆ. ನದಿ ಹಿನ್ನೀರಿನ ಪ್ರದೇಶವಾಗಿರುವು ದರಿಂದ ಈ ಪ್ರದೇಶ ಅತ್ಯಂತ ತಂಪಾಗಿರುತ್ತದೆ ಎಂಬ ಹಿನ್ನಲೆಯಲ್ಲಿ ಈ ಜಾಗ ಸೂಕ್ತ ಎಂಬ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿದೆ ಎನ್ನಲಾಗುತ್ತಿದೆ.
ಈ ಸರ್ವೇ ನಂ. ವ್ಯಾಪ್ತಿಯಲ್ಲಿ ಸುಮಾರು 485 ಎಕರೆ ಗೋಮಾಳ, ಸುಮಾರು 900 ಎಕರೆ ಅರಣ್ಯ ಮತ್ತು ಕಂದಾಯ ಭೂಮಿ ಇದ್ದು, ದಟ್ಟವಾದ ಅರಣ್ಯ ಇದೆ.ಈ ಜಾಗ ಅಣುವಿದ್ಯುತ್ ಸ್ಥಾವರ ಮಾಡಲು ಅತ್ಯಂತ ಸೂಕ್ತ ಸ್ಥಳ ಎಂದು ಗುರುತಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಈಚೆಗೆ ಕೇಂದ್ರ ಸರ್ಕಾರದ ಎನ್.ಟಿ.ಪಿ.ಸಿ ಇಲಾಖೆಯಿಂದ ಕೋಳೂರು ಗ್ರಾಮ ಪಂಚಾಯ್ತಿಗೆ ಪತ್ರ ಬರೆದಿದ್ದು, ಬೇಸೂರು ಗ್ರಾಮದ ಸುಮಾರು 1200 ಎಕರೆ ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರ ನಡೆಸಲು ನಿರಾಪೇಕ್ಷಣಾ ಪತ್ರ ಕೊಡಿ ಎಂದು ಮನವಿ ಸಲ್ಲಿಸಲಾಗಿದೆ.
ಸ್ಥಳೀಯರ ವಿರೋಧ-ಜನಾಂದೋಲನದ ಎಚ್ಚರಿಕೆ :
ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಈಗಾಗಲೇ ಆಗಿರುವಂತಹ ಅನಾಹುತವನ್ನು ಮನಗಂಡಿರುವ ಸ್ಥಳೀಯರು ಯಾವುದೇ ಕಾರಣಕ್ಕೂ ನಮ್ಮ ಭಾಗಕ್ಕೆ ಈ ಯೋಜನೆ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಿಸುವುದರ ವಿರುದ್ಧ ಜನಾಂದೋಲನ ರೂಪಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಅಣು ವಿದ್ಯುತ್ ಸ್ಥಾವರದ ಸುಮಾರು ಹತ್ತಾರು ಕಿಮೀ ವ್ಯಾಪ್ತಿಯಲ್ಲಿ ವಿಕಿರಣವಿದ್ದು ಕ್ಯಾನ್ಸರ್, ದೈಹಿಕ ಅಂಗವಿಕಲತೆ ಸೇರಿ ಬೇರೆಬೇರೆ ಮಾರಕ ರೋಗಗಳು ಬರುವ ಸಾಧ್ಯತೆ ಇದೆ.ಅಲ್ಲದೇ ಅಣು ಸ್ಥಾವರದಿಂದ ಹೊರ ಹಾಕಲಾಗುವ ತಾಜ್ಯಕ್ಕೆ ಸುರಕ್ಷಿತ ಸ್ಥಳವಿಲ್ಲದೆ ಅದನ್ನು ಹೂಳಲಾಗುತ್ತದೆ. ಆದರೆ ಆ ತ್ಯಾಜ್ಯ ಮುಂದಿನ ಹಲವು ವರ್ಷಗಳವರೆಗೆ ಮನುಷ್ಯನ ಜೀವನದ ಮೇಲೆ, ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಇಂತಹ ಯೋಜನೆಗಳು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಮಾಡುವುದು ಸೂಕ್ತ, ಅದರೆ ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ಮಾಡಿದರೆ ಸಾಗರ ತಾಲ್ಲೂಕಿನಾದ್ಯಂತ ಜನರು ಆತಂಕದಲ್ಲಿಯೆ ಇರಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಪ್ರಸ್ತಾವನೆ ಕೈಬಿಡುವಂತೆ ವರದಿ :
ಸಾಗರ ತಾಲ್ಲೂಕು ಅವಿನಹಳ್ಳಿ ಹೋಬಳಿ ಬೇಸೂರು ಗ್ರಾಮದ ಬೌಗೋಳಿಕ ವಿಸ್ತೀರ್ಣ 3190-39 ಎಕರೆ, ಖುಷಿ ಜಮೀನು 68-12 ಎಕರೆ, ತರಿ ಜಮೀನು 311-35 ಎಕರೆ, ಭಾಗಾಯ್ತು ಜಮೀನು 16-10 ಎಕರೆ, ಅರಣ್ಯ ಜಮೀನು 499-20 ಎಕರೆ. ಕೆ.ಪಿ.ಸಿ ಭೂ ಸ್ವಾಧಿನವಾದ ವಿಸ್ತೀರ್ಣ 238-31 ಎಕರೆ ಮನೆಗಳ ಸಂಖ್ಯೆ 173 ಜಾನುವಾರುಗಳ ಸಂಖ್ಯೆ 1003 ಕೆ.ಪಿ.ಸಿ ಸ್ವಾಧೀನದ ಹಿನ್ನಿರಿನ ವಿಸ್ತೀರ್ಣ ದೂರ 300 ಮೀಟರ್, ಖಾತೆದಾರರ ಸಂಖ್ಯೆ 156, ಜನ ಸಂಖ್ಯೆ 670 ಮತ್ತು ಸ್ಮಶಾನದ ವಿಸ್ತೀರ್ಣ 4-00 ಎಕರೆ ಇರುತ್ತದೆ ಎಂದು ಆವಿನಹಳ್ಳಿ ಹೋಬಳಿಯ ರಾಜಸ್ವ ನಿರೀಕ್ಷಕರು ಸಾಗರ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿದ್ದಾರೆ.
ಆದ್ದರಿಂದ ಸಾಗರ ತಾಲ್ಲೂಕು ಅವಿನಹಳ್ಳಿ ಹೋಬಳಿ ಬೇಸೂರು ಗ್ರಾಮದಲ್ಲಿ ಅರಣ್ಯ ಜಮೀನು 499-20 ಎಕರೆ ಇದ್ದು. ಶರಾವತಿ ಹಿನ್ನೀರಿನ ಬಗ್ಗೆ ಕೆ.ಪಿ.ಸಿ ಯವರಿಗೆ 238-31 ಎಕರೆ ಜಮೀನು ಭೂ ಸ್ವಾಧೀನವಾಗಿರುತ್ತದೆ ಅಲ್ಲದೆ ಸದರಿ ಗ್ರಾಮದ ಪಕ್ಕದ ಗ್ರಾಮದಲ್ಲಿ ಈ ಹಿಂದೆ ಹಿರೇಭಾಸ್ಕರ ಮಡೇನೂರು ಡ್ಯಾಂ ನಿರ್ಮಾಣವಾಗಿದ್ದು, ಹಾಲಿ ಸದರಿ ಗ್ರಾಮದಲ್ಲಿ ಒಟ್ಟು 173 ಮನೆಗಳು ಮತ್ತು 670 ಜನಸಂಖ್ಯೆ ಇರುತ್ತದೆ ಆದ್ದರಿಂದ ಈ ಅಂಶಗಳ ಹಿನ್ನಲೆಯಲ್ಲಿ ಬೇಸೂರು ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಕುರಿತಾದ ಪ್ರಸ್ತಾವನೆಯನ್ನು ಕೈಬಿಡುವಂತೆ ಸಾಗರ ತಹಶಿಲ್ದಾರ್ ಅವರು ವರದಿ ಸಲ್ಲಿಸಿದ್ದಾರೆ.
ಯೋಜನೆಗೆ ಸ್ಪಷ್ಟ ವಿರೋಧವಿದೆ : ಬಿ.ವೈ.ರಾಘವೇಂದ್ರ
ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಬಗ್ಗೆ ಸ್ಥಳೀಯ ಜನರು ಆತಂಕ ಪಡುವುದು ಬೇಡ. ಈ ಬಗ್ಗೆ ಕೇಂದ್ರ ಸಚಿವರಿಗೆ ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿದಂತೆ ಪ್ರಸ್ತಾವನೆಯನ್ನು ಕೈಬಿಡಲು ಮನವರಿಕೆ ಮಾಡಿಕೊಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶರಾವತಿ ಸಂತ್ರಸ್ತರಿಗೆ ಇಂದಿಗೂ ಸಮರ್ಪಕ ಭೂಪರಿಹಾರ ಒದಗಿಸಲಾಗಿಲ್ಲ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪರಿಸರ ಆಸಕ್ತರು ಮತ್ತು ಬುದ್ಧಿ ಜೀವಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಈ ಪ್ರಸ್ತಾವಿತ ಯೋಜನೆ ಕೈಬಿಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಸಾರ್ವಜನಿಕರು ಅನಾವಶ್ಯಕವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಪರಿಸರ ಹಾನಿ ಉಂಟಾಗುವ ಯಾವುದೇ ಯೋಜನೆಗೂ ತಮ್ಮ ಸ್ಪಷ್ಟ ವಿರೋಧವಿದ್ದು, ಜನರ ಹಿತಾಸಕ್ತಿ ಕಾಪಾಡಲು ಬದ್ಧರಾಗಿರುವುದಾಗಿ ಸಂಸದರು ತಿಳಿಸಿದ್ದಾರೆ.
ಭೂಮಿ ಲಭ್ಯತೆ ಇಲ್ಲ : ಡಿಸಿ ವರದಿ ಸಲ್ಲಿಕೆ
ಶಿವಮೊಗ್ಗ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಲಾಗಿಲ್ಲ.ಕೇಂದ್ರ ಸರ್ಕಾರ ಅಧೀನದ ಎನ್.ಟಿ.ಪಿ.ಸಿ (National Thermal Power Corporation) ಸಂಸ್ಥೆಯಿಂದ ರಾಜ್ಯದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಭೂಮಿ ಲಭ್ಯತೆ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಆ ಪ್ರಮಾಣದ ಭೂಮಿ ಲಭ್ಯವಿಲ್ಲ ಎಂದು ಜಿಲ್ಲಾಡಳಿತದಿಂದ ಸ್ಪಷ್ಟವಾಗಿ ಹೇಳಿದ್ದೇವೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಮಾಜಿ ಸೈನಿಕರು ಸಲ್ಲಿಸಿದ ಭೂ ಮಂಜೂರಾತಿ ಅರ್ಜಿಗಳನ್ನು ಪರಿಹರಿಸಲು ಸಹ ಆಡಳಿತವು ಭೂಮಿಯ ಕೊರತೆಯನ್ನು ಎದುರಿಸುತ್ತಿದೆ. ಅಲ್ಲದೇ ವಿವಿಧ ಸರ್ಕಾರಿ ಕಛೇರಿ, ಆಸ್ಪತ್ರೆ ಸೇರಿದಂತೆ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಭೂಮಿ ಲಭ್ಯವಿಲ್ಲ ಎಂದು ಜಿಲ್ಲಾಡಳಿತದಿಂದ ವರದಿ ನೀಡಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ » ಬಿಸಿಲಿಗೆ ಒಣಗಲು ಹಾಕಿದ್ದ ಅಡಿಕೆ ಕಳ್ಳತನ, ಇಬ್ಬರು ಆರೋಪಿಗಳ ಸೆರೆ, ನಾಲ್ಕು ಕ್ವಿಂಟಾಲ್ ಅಡಿಕೆ, ಒಂದು ಮಾರುತಿ ಕಾರು ವಶ