
ಶಿವಮೊಗ್ಗ : ನಗರದ ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮೇ 17 ರಂದು ನಗರದಲ್ಲಿ ಆಯೋಜಿಸಿದ್ದ ಶ್ರೀ ಪಂಚ ಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವವೂ ಅದ್ದೂರಿಯಾಗಿ ಸಂಪನ್ನಗೊಂಡಿತು.
ಉತ್ಸವದ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಮಳೆಯ ನಡುವೆಯೂ ಜನ ಸಾಗರವೇ ಸೇರಿತ್ತು. ರಾತ್ರಿ 10.00 ಗಂಟೆಯವರೆಗೂ ನಡೆದ ಸಮಾರಂಭದಲ್ಲಿ ಜನರು ಮುಕ್ತಾಯದದರೆಗೂ ಇದ್ದು, ಶ್ರೀಗಳ ಮೇಲಿನ ಭಕ್ತಿಗೆ ಸಾಕ್ಷಿಯಾದರು.

ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಹೆಗಲು ಕೊಟ್ಟ ಬಿವೈಆರ್
ಶಿವಮೊಗ್ಗ ನಗರದಲ್ಲಿ 14 ವರ್ಷಗಳ ನಂತರ ನಡೆದ ಪಂಚ ಪೀಠಾಧೀಶ್ವರರ ಅಡ್ಡಪಲಕ್ಕಿ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿರುವುದರ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅವರ ಪರಿಶ್ರಮವೂ ಮುಖ್ಯ. ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅವರು, ಈ ಕಾರ್ಯಕ್ರಮದ ಚರ್ಚೆ ಶುರುವಾದ ದಿನಗಳಿಂದಲೂ ಅತ್ಯಂತ ಮುತುವರ್ಜಿ ವಹಿಸಿ, ಕಾರ್ಯಕ್ರಮ ರೂಪುರೇಷೆಗಳನ್ನು ನೋಡಿಕೊಂಡರು. ಅಂತೆಯೇ ಭಾನುವಾರ ನಡೆದ ಪಂಚ ಪೀಠಾಧೀಶ್ವರದ ಅಡ್ಡ ಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ವೇಳೆ, ಸಂಸದ ಬಿ.ವೈ.ರಾಘವೇಂದ್ರ ಅವರು, ಶ್ರೀಗಳ ಅಡ್ಡಪಲ್ಲಕ್ಕಿಗೆ ಹೆಗಲು ಕೊಟ್ಟು ಶ್ರೀಗಳ ಮೇಲಿನ ಭಕ್ತಿ, ಅಭಿಮಾನ ತೋರಿದರು.

ನಗರದ ಅಲ್ಲಮ ಪ್ರಭುಮೈದಾನದಲ್ಲಿ ಆಯೋ ಡೆಸಿದ್ದ ದೇವಿಕೆ ಕಾರ್ಯಕ್ರಮಕ್ಕೂ ಮುನ್ನ ಮಧ್ಯಾ ಹ 3.00 ಗಂಟೆಗೆ ಗಾಂಧಿಬಜಾರ್ ಬಸವೇಶ್ವರದೇವಸ್ತಾನ ದಿಂದ ಕಲಾತಂಡಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಅಡ್ಡಪಲ್ಲಕ್ಕಿ ಉತ್ಸವ ಆರಂಭವಾಯಿತು.
ನಂದಿಕೋಲು, ಡೊಳ್ಳು, ವೀರಗಾಸೆ, ಭಜನೆ ಮುಂತಾದ ಕಲಾ ತಂಡಗಳೊಂದಿಗೆ ಹೊರಟ ಶ್ರೀಗಳ ಆಡ್ಡಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಮಂದಿ ಹೆಜ್ಜೆ ಹಾಕಿದರು. ಗೋಪಿ ವೃತ್ತದಿಂದ ತೆರೆದ ವಾಹನದಲ್ಲಿ ಸಾಗಿ ಬಂದ ಮಾಜಿ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆರವಣಿಗೆಯನ್ನು ಮುನ್ನಡೆಸಿದರು.

ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಜ್ಜಿನಿ ಪೀಠದ ಸಿದ್ಧಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚೆನ್ನಸಿದ್ಧ ರಾಮ ಪಂಡಿತಾರಾಧ್ಯ ಶಿವಾಚಾರ್ಯರನ್ನು ಭಕ್ತರು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿಬಂದರು.
ಉತ್ಸವವೂ ಅಲ್ಲಮಪ್ರಭು ಮೈದಾನಕ್ಕೆ ತಲುಪುವ ಹೊತ್ತಿಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆ ಆರಂಭವಾಯಿತು. ಅದರ ನಡುವೆಯೇ ಭಕ್ತರು ಅಡ್ಡಪಲ್ಲಕ್ಕಿ ಹೊತ್ತು ಸಾಗಿದರು.
ಜಗತ್ಕಲ್ಯಾಣಕ್ಕೆ ಮಾನದ ಧರ್ಮ ಪರಿಪಾಲನೆ ಅವಶ್ಯಕ: ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು
ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮ ಮುಖ್ಯ. ತಾನು ಎಲ್ಲರಿಗಾಗಿ ಅನ್ನುವುದೇ ನಿಜವಾದ ಧರ್ಮ, ತತ್ವವನ್ನು ಅರಿತವನಿಗೆ ಸತ್ಯದ ಬೆಳಕು ಗೋಚರವಾಗುತ್ತದೆ. ಮಾನವ ಧರ್ಮ ಪರಿಪಾಲನೆಯಿಂದ ಎಲ್ಲ ಧರ್ಮಗಳು ಉಳಿದು ಬೆಳೆಯಲು ಸಾಧ್ಯ. ಜಗತ್ಕಲ್ಯಾಣಕ್ಕೆ ಮಾನದ ಧರ್ಮ ಪರಿಪಾಲನೆ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಬೃಹತ್ ಕಾರ್ಯಕ್ರಮಕ್ಕೆ ಜರ್ಮನ್ ಟೆಂಟ್ ಹಾಕಿದ್ದರ ಪರಿಣಾಮ, ವೇದಿಕೆ ಸಮಾರಂಭಕ್ಕೆ ಮಳೆ ಯಾವುದೇ ರೀತಿಯಲ್ಲೂ ಅಡ್ಡಿಯಾಗಲಿಲ್ಲ, ಸಿದ್ಧಾಂತ ಶಿಖಾಮಣಿ ಪಾರಾಯಣದ ಮೂಲಕ ಸಮಾರಂಭಕ್ಕೆ ಮಹಿಳೆಯರು ಚಾಲನೆ ನೀಡಿದರು.
ಶಿವಾಚಾರ್ಯ ಪರಂಪರೆಯ ಮಠಾಧೀಶರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು, ಹಾಗಾಗಿ ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮವೂ ನಿರಂತರವಾಗಿ ನಡೆದು, ಸಂಪನ್ನಗೊಂಡಿತು.
ಮೂಲ ನಂಬಿಕೆಗಳನ್ನು ಕೆಲವರು ಮೂಢ ನಂಬಿಕೆಗಳೆಂದು ಅಸತ್ಯದ ಮಾತು ಹೇಳುವವರನ್ನು ಕಾಣುತ್ತೇವೆ. ಸತ್ಯವೇ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚ. ಧರ್ಮದ ರಕ್ಷಾ ಕವಚ ಕಳಚಿದರೆ ಈ ನಾಡಿನಲ್ಲಿ ಏನೊಂದು ಉಳಿಯದು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲವನ್ನು ಮರೆಯಬಾರದು.
– ಡಾ. ಚನ್ನಸಿದ್ದರಾಮ ಪಂಡಿತಾ ರಾಧ್ಯ ಶ್ರೀಗಳು, ಶ್ರೀಶೈಲ ಪೀಠ
ಪರಿಪಕ್ಕ ಸಮಾಜ ನಿರ್ಮಾಣ ಕಾರ್ಯ ವೇ ನಿಜವಾದ ಧರ್ಮ. ಸತ್ಯ ಸೈದ್ಧಾಂತಿಕ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕಾಗಿದೆ. ಬಿಎಸ್‌ವೈ ಅವರ ರೈತ ಪರ ಹೋರಾಟ ಮತ್ತು ಸಾಮರಸ್ಯ ಜನರ ಬಗ್ಗೆ ಅವರಿಗಿರುವ ಕಳಕಳಿ ಎಲ್ಲ ರ ಮೆಚ್ಚುಗೆಗೆ ಪಾತ್ರವಾಗಿವೆ. ಅದ್ಭುತವಾದ ಧರ್ಮ ಸಮಾರಂಭ ಹಮ್ಮಿ ಕೊಂಡಿರುವುದು ತಮ್ಮೆಲ್ಲರ ಸ್ವಾಭಿಮಾನಕ್ಕೆ ಸಮಾರಂಭಸಾಕ್ಷಿಯಾಗಿದೆ.
– ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು
ಸರ್ವರಿಗೂ ಸಮ ಪಾಲು ಸರ್ವರಿಗೂ ಸಮಬಾಳು ಎಂಬ ಸಾಮಾಜಿಕ ಘೋಷ ವಾಕ್ಯವನ್ನು ಆಚರಣೆಯಲ್ಲಿ ತಂದು ಸರ್ವಧರ್ಮೀಯರನ್ನು ಸಮಾನವಾಗಿ ಕಂಡವರು ಬಿ ಎಸ್ ಯಡಿಯೂರಪ್ಪ ನವರು. ಪಂಚಪೀಠಗಳ ದಿವ್ಯ ಸಾನಿಧ್ಯದಲ್ಲಿ ಅವರು ಸಮಾಜದಿಂದ ಕೃತಜ್ಞತಾ ಗೌರವವನ್ನು ಪಡೆದುಕೊಳ್ಳುತ್ತಿರುವುದು ಸರ್ವರಿಗೂ ಸಂತೋಷವನ್ನುಂಟು ಮಾಡುತ್ತಿದೆ. ಇವರ ಈ ಸಮಾಜ ಸೇವೆಯು ಸರ್ವರಿಗೂ ಆದರ್ಶಪ್ರಾಯವಾಗಿದೆ.
– ಡಾ. ಚಂದ್ರಶೇಖರ ಜಗದ್ಗುರುಗಳು, ಕಾಶಿಪೀಠ
ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗ ಬೇಕಲ್ಲದೇ ಮಾರಕವಾಗ ಬಾರದು. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯುತ್ತಿಲ್ಲ. ಪೂರ್ವಜರ ಅನುಭವದ ನುಡಿಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣ. ಪುಟ ಪುಸ್ತಕ ಬದಲಿಸಬಹುದು. ಆದರೆ ಇತಿಹಾಸವನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗದು.
– ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯರು, ಶ್ರೀ ಕಾಶೀ ಪೀಠದ ನೂತನ ಜಗದ್ಗುರುಗಳು

ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಮಠಾಧೀಶರು ಭಾಗಿ :
ಎಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸಿಂದಗಿ ಪ್ರಭು ಸಾರಂಗದೇವ ಶಿವಾಚಾರ್ಯರು ಸೇರಿದಂತೆ ಹೊನ್ನಾಳಿ, ಬಿಳಕಿ, ಮಳಲಿ, ತೊಗರ್ಸಿ, ತಾವರೆಕೆರೆ, ಕಣಸೋಗಿ, ಶಿರಾಳಕೊಪ್ಪ, ವೀರಾಪುರ, ಹಿರೇಮಾಗಡಿ, ಕೆಳದಿ, ಸಾಲೂರು, ಜಡೆ, ತಾಳಗುಪ್ಪ, ದಿಂಡದಹಳ್ಳಿ, ಕವಲೇದುರ್ಗ, ಗೊಗ್ಗಿಹಳ್ಳಿ, ಮೂಡಿ, ಕೋಣಂದೂರು, ಹಾರನಹಳ್ಳಿ, ಕಡೇನಂದಿಹಳ್ಳಿ, ಶಾಂತಪುರ ಮಠ ಸೇರಿದಂತೆ ಜಿಲ್ಲೆ ಹೊರ ಜಿಲ್ಲೆಗಳ ಸುಮಾರು 70 ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಹಲವು ಗಣ್ಯರು :
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಶಾಸಕ ಬಿ.ಕೆ.ಸಂಗಮೇಶ, ಎಸ್.ರುದ್ರೇಗೌಡ, ಎಸ್.ಪಿ.ದಿನೇಶ್, ಟಿ.ವಿ.ಶ್ರೀನಿವಾಸ, ತೇಜೋಮೂರ್ತಿ ಸಿ.ಎಸ್.ದೇವರಾಜ, ಎಸ್.ಎಸ್.ಜ್ಯೋತಿಪ್ರಕಾಶ, ಬಳ್ಳೇಕೆರೆ ಸಂತೋಷ, ಮಾಜಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರುದ್ರಮುನಿ ಸಜ್ಜನ್, ಹೆಚ್.ಎಂ.ಚಂದ್ರಶೇಖರಪ್ಪ, ಎಸ್.ಕೆ.ಮರಿಯಪ್ಪ, ವೈ.ಹೆಚ್.ನಾಗರಾಜ್, ಹಾಲಪ್ಪ ಹರತಾಳ, ವಿರೂಪಾಕ್ಷಪ್ಪ ಜವಳಿ, ಹೆಚ್.ವಿ.ಮಹೇಶ್ವರಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಶಾಸಕ ಎಸ್.ಎನ್.ಚನ್ನಬಸಪ್ಪ ಸರ್ವರನ್ನೂ ಸ್ವಾಗತಿಸಿದರು. ಸಿ.ಎಸ್.ಷಡಕ್ಷರಿ ನಿರೂಪಿಸಿದರು.