
ಬೆಂಗಳೂರು/ಶಿವಮೊಗ್ಗ : ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹ ಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮಾ.20 ರಂದು ನೀರಾನೆ ದಾಳಿಯಿಂದ ಮೃತಪಟ್ಟ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿನ ಕುರಿತು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದರು.
ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಶಾಸಕರು, ಅಸ್ವಸ್ಥ ಪ್ರಾಣಿಗೆ ಚಿಕಿತ್ಸೆ ನೀಡಲು ತೆರಳಿದ್ದ ಒಬ್ಬ ಪ್ರತಿಭಾವಂತ ಯುವ ವೈದ್ಯೆಯನ್ನು ನಾವು ಕಳೆದುಕೊಂಡಿರುವುದು ಅತ್ಯಂತ ಹೃದಯವಿದ್ರಾವಕ ಸಂಗತಿ. ವನ್ಯಜೀವಿಗಳ ಸೇವೆಯಲ್ಲಿ ತೊಡಗಿದ್ದ ಅವರಿಗೆ ಸೂಕ್ತ ಸುರಕ್ಷತಾ ವ್ಯವಸ್ಥೆ ಇತ್ತೇ? ಈ ಘಟನೆಯಲ್ಲಿ ಇಲಾಖೆಯ ನಿರ್ಲಕ್ಷ್ಯವಿದೆಯೇ? ಎನ್ನುವುದರ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮೃಗಾಲಯಗಳು ಹಾಗೂ ಪಶುವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಪಶುವೈದ್ಯರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಮತ್ತು ಗುತ್ತಿಗೆ ಆಧಾರದ ಬದಲಿಗೆ ಖಾಯಂ ಪಶುವೈದ್ಯರನ್ನು (Permanent veterinarian doctors) ನೇಮಕ ಮಾಡಿಕೊಳ್ಳಬೇಕು.
– ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ನಗರ ಶಾಸಕರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿದ್ದೇವೆ. ಈಗಾಗಲೇ ಅರಣ್ಯ ಇಲಾಖೆ ಕೂಡ ತನಿಖೆ ಮಾಡುತ್ತಿದ್ದಾರೆ ಹಾಗೂ ರಕ್ಷಣಾ ಇಲಾಖೆ ಕೂಡ ತನಿಖೆ ಮಾಡುತ್ತಿದ್ದಾರೆ. ಇದರಲ್ಲಿ ಯಾರಾದರೂ ಲೋಪ ದೋಷ, ಕರ್ತವ್ಯ ಲೋಪ ಮಾಡಿದರೂ ಅಂತವರ ಮೇಲೆ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬರುವಂತ ದಿನಗಳಲ್ಲಿ ಡಾ. ಸಮೀಕ್ಷಾ ರೆಡ್ಡಿ ಸ್ಮರಣಾರ್ಥ ಯೋಜನೆಯನ್ನು ರೂಪಿಸುತ್ತೇವೆ.
– ಈಶ್ವರ್ ಭೀಮಣ್ಣ ಖಂಡ್ರೆ, ಅರಣ್ಯ ಮತ್ತು ಪರಿಸರ ಸಚಿವರು

ಸರ್ಕಾರ ಸಂತಾಪ ಸೂಚಿಸುವ ಸಲುವಾಗಿ ಇದೆಯೇ?
ತಾವರೆಕೊಪ್ಪ ವೈಲ್ಡ್ ಲೈಫಲ್ಲಿ ಸುಮಾರು 20 ವರ್ಷಗಳಿಂದ ಖಾಯಂ ವೈದ್ಯರು ಇಲ್ಲ. ನಾವು ಎಷ್ಟು ಸರಿ ಸಂತಾಪ ಸೂಚಿಸುವ ಸಭೆಗೆ ಹೋಗಬೇಕಾಗುತ್ತದೆ. ಹಾಗಾಗಿ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲವೆಂದರೆ ಅಲ್ಲಿನ ವ್ಯಕ್ತಿಗಳನ್ನು ಹೇಗೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರ ಬಗ್ಗೆ ಸರ್ಕಾರ ಯೋಚನೆ ಮಾಡಬೇಕಾಗುತ್ತದೆ. ಇಲ್ಲವಾದರೆ ಸರ್ಕಾರ ಬರೀ ಸಂತಾಪ ಸೂಚನೆಗೆ ಇದೆಯೇ ಎಂದೆನಿಸುತ್ತದೆ ಎಂದು ಸದನದಲ್ಲಿ ಆಗ್ರಹಿಸಿದರು.
ಕೇವಲ ಸಂತಾಪ ಹಾಗೂ ಪರಿಹಾರವಷ್ಟೇ ಅಲ್ಲದೆ, ಮೃಗಾಲಯಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಸದನದಲ್ಲಿ ಒತ್ತಾಯಿಸಿದರು.
ಡಾ. ಸಮೀಕ್ಷಾ ರೆಡ್ಡಿ ಮೇಲೆ ತಪ್ಪು ಆಪಾದನೆ ಸಲ್ಲದು :
ಆ ಹೆಣ್ಣು ಮಗಳು ಬೆಂಗಳೂರಿನಿಂದ ಬಂದು ಕೆಲಸಕ್ಕೆ ಸೇರಿಕೊಂಡು ಕೇವಲ 45 ದಿನಗಳು ಮಾತ್ರ ಆಗಿದ್ದವು. ಈಗ ಅವರನ್ನು ಕಳೆದುಕೊಂಡಿದ್ದೇವೆ. ಆದರೆ ನನಗಿರುವ ಮಾಹಿತಿ ಪ್ರಕಾರ, ರಾತ್ರಿ ತಂಡವಿಲ್ಲದಂತೆ ಹೋಗುವ ಹಾಗಿಲ್ಲ. ಸರಿಯಾದಂತಹ ತಂಡ ಹೋಗದಿರದ ಕಾರಣದಿಂದ ಹೆಣ್ಣು ಮಗಳ ಮೇಲೆ ಆಪಾದನೆ ಮಾಡುವ ಸ್ಥಿತಿಯಲ್ಲಿ ಮಾತನಾಡುತ್ತಿದ್ದಾರೆ. ಆ ಹೆಣ್ಣು ಮಗಳು ಹೋಗಿದ್ದು ತಪ್ಪು ಎಂದು ಬಿಂಬಿತ ವರದಿಯನ್ನು ನೀವು ಸರಿಯಾದಂತಹ ರೀತಿಯಲ್ಲಿ ತನಿಖೆ ಮಾಡಿ ಸರಿಯಾದಂತ ಬೆಳಕನ್ನು ಚಲ್ಲಬೇಕಾಗುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಸರ್ಕಾರದ ಜವಾಬ್ದಾರಿ ಎಂದು ಆಗ್ರಹಿಸಿದರು.
ಶಾಸಕರ ಈ ಪ್ರಸ್ತಾವನೆಗೆ ಸದನದಲ್ಲಿ ಮಾಜಿ ಗೃಹ ಸಚಿವರು ಹಾಗೂ ತೀರ್ಥಹಳ್ಳಿ ಶಾಸಕರಾದ ಅರಗ ಜ್ಞಾನೇಂದ್ರ ಅವರು ಬೆಂಬಲ ವ್ಯಕ್ತವಾಯಿತು.
ಇದನ್ನೂ ಓದಿ » Job News: ಜಿಲ್ಲೆಯಲ್ಲಿ ಉದ್ಯೋಗ ಮೇಳ, ಪ್ರತಿಷ್ಠಿತ ಖಾಸಗಿ ಕಂಪನಿಗಳಿಂದ ನೇರ ಸಂದರ್ಶನ, ಯಾವಾಗ?