
ಶಿಕಾರಿಪುರ : ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ, ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬೋರ್ಡೋ ದ್ರಾವಣ ತಯಾರಿಸುವ ವಿಧಾನ ಮತ್ತು ಪ್ರಾಮುಖ್ಯತೆಯ ಗುಂಪು ಚರ್ಚೆ ಮತ್ತು ಪ್ರಾತ್ಯಕ್ಷಿತೆಯನ್ನು ತೋರಿಸುವುದರ ಮೂಲಕ ಮಾಹಿತಿ ನೀಡಿದರು.
![]()
ಇದನ್ನೂ ಓದಿ » ನಾಳೆ ಕೋಟೆ ಶ್ರೀಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದಿಂದ ಪಿಳ್ಳಂಗಿರಿಯವರೆಗೆ ಶ್ರೀರಂಗ ಪಾದಯಾತ್ರೆ
ಏನಿದು ಬೋರ್ಡೋ ದ್ರಾವಣ?
ಬೋರ್ಡೋ ದ್ರಾವಣವು ಬೆಳೆ ಸಸ್ಯ ಸಂರಕ್ಷಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಹೆಚ್ಚಿನ ರೋಗಗಳನ್ನು ನಿಯಂತ್ರಿಸಬಹುದಾಗಿದೆ ಇತ್ತೀಚಿನ ದಿನಗಳಲ್ಲಿ ಈ ಭಾಗದ ಅಡಿಕೆಯಲ್ಲಿ ಕೊಳೆರೋಗ ಜಾಸ್ತಿಯಾಗುತ್ತಿದೆ. ಆದಕಾರಣ ರೈತರು ಈ ಬೋರ್ಡೋ ದ್ರಾವಣವನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.
ಬೋರ್ಡೋ ದ್ರಾವಣದ ಉಪಯೋಗವೇನು?
ಮಳೆ ವಾತಾವರಣದಲ್ಲಿ ಅತಿ ಕಡಿಮೆ ಸಮಯದಲ್ಲಿ ಸಸ್ಯಗಳಿಗೆ ಅಂಟಿಕೊಳ್ಳುವ ಬೋರ್ಡೋ ದ್ರಾವಣ ಸಾಮರ್ಥ್ಯವು ಅದನ್ನು ಮಳೆಗಾಲದಲ್ಲಿ ಶಿಲೀಂದ್ರ ನಾಶಕವಾಗಿ ಉಪಯೋಗಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಇದು ಶೀಲೀಂದ್ರ ನಾಶಕ, ದುಂಡಾನು ನಾಶಕ, ಪಾಚಿನಾಶಕ ಗುಣ ಲಕ್ಷಣಗಳನ್ನು ಹೊಂದಿದೆ ಇದನ್ನು ತಯಾರಿಸುವ ವಿಧಾನ ಅತ್ಯಂತ ಸರಳವಾಗಿದೆ ಹಾಗೂ ರೈತರು ಇದನ್ನು ತಮ್ಮ ತೋಟದಲ್ಲಿ ತಯಾರಿಸಿಕೊಳ್ಳಬಹುದೆಂದು ಕೃಷಿ ವಿದ್ಯಾರ್ಥಿಗಳು ತಿಳಿಸಿದರು.
ಯಾವ ಯಾವ ರೋಗಗಳ ನಿಯಂತ್ರಣಕ್ಕೆ ಸಹಕಾರಿ?
ಇದನ್ನು ಅಡಿಕೆ ಕೊಳೆರೋಗ, ಎಲೆಚುಕ್ಕೆ ರೋಗ, ಅಣಬೆ ರೋಗ, ಸುಳಿರೋಗ, ಶುಂಠಿಯಲ್ಲಿ ಎಲೆಚುಕ್ಕೆರೋಗ, ಹಸಿರು ಕೊಳೆ, ಕೆಂಪು ಕೊಳೆ ಹಾಗೂ ಮಾವು, ಪಪ್ಪಾಯ, ಮೆಣಸಿನಕಾಯಿಯಲ್ಲಿ ಬರುವ ವಿವಿಧ ರೋಗಗಳನ್ನು ನಿಯಂತ್ರಿಸಲು ಬಳಸುತ್ತಾರೆ. ಜೊತೆಗೆ ಮೈಲುತುತ್ತ, ಸುಣ್ಣ, ನೀರು ಬಳಸಿ ಹೇಗೆ ಬೋರ್ಡೋ ದ್ರಾವಣವನ್ನು ತಯಾರಿಸಬೇಕೆಂದು ಪ್ರಾತ್ಯಕ್ಷಿತವಾಗಿ ಮಾಡಿ ತೋರಿಸಲಾಯಿತು.
ತಯಾರಿಸಿದ ನಂತರ ಅದರ ರಸಸಾರವನ್ನು ತಟಸ್ಥ ಗೊಳಿಸಿ, ಹೇಗೆ ಉಪಯೋಗಿಸಬೇಕೆಂದು ತಿಳಿಸಲಾಯಿತು. ನೆರೆದಿದ್ದ ರೈತರು ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದುಕೊಂಡರು.
ಕೃಷಿ ವಿದ್ಯಾರ್ಥಿಗಳಾದ ಮಲ್ಲಮ್ಮ ಮತ್ತು ಸ್ವಾತಿರವರು ಬೋರ್ಡೋ ದ್ರಾವಣದ ಪ್ರಾಮುಖ್ಯತೆ, ತಯಾರಿಸುವ ವಿಧಾನ ಮತ್ತು ಯಾವ ಯಾವ ರೋಗಗಳಿಗೆ ಸಿಂಪಡಿಸಬೇಕೆಂದು ತಿಳಿಸಿದರು.

ಇದನ್ನೂ ಓದಿ » ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?