
ಶಿವಮೊಗ್ಗ : ವರ್ಷದಲ್ಲಿ 24 ಏಕಾದಶಿಗಳು ಬರಲಿವೆ. ವೈಕುಂಠ ಏಕಾದಶಿಗೆ ವಿಶೇಷ ಮಹತ್ವವಿದೆ. ನಾಡಿನೆಲ್ಲೆಡೆ ಆಚರಿಸುವ ಪವಿತ್ರಾ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ವೈದಿಕ ಜ್ಯೋತಿಷದ ಪ್ರಕಾರ, ಈ ದಿನದಂದು ವಿಷ್ಣುವಿನ ನಿವಾಸದ ದ್ವಾರಗಳು ತೆರೆದಿರುತ್ತವೆ. ಹಾಗಾಗಿಯೇ, ವೈಕುಂಠ ಏಕಾದಿನ ದಿನ ಭಕ್ತರು ಉಪವಾಸ ಮಾಡಲಿದ್ದಾರೆ. ಇದರಿಂದ ಭಕ್ತರ ಪ್ರಾರ್ಥನೆ ಇಡೇರುತ್ತವೆ ಎಂಬ ನಂಬಿಕೆ ಇದೆ.

ವೈಕುಂಠ ಏಕಾದಶಿ ಹಿನ್ನೆಲೆ ನಗರದ ವಿವಿಧ ದೇವಾಲಯಗಳಲ್ಲಿ ಭಕ್ತರ ದಂಡು ಹರಿದುಬರುತ್ತಿದೆ. ಬೆಳಗಿನ ಜಾವದಿಂದಲೇ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.

ನಗರದ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯ, ಕೋಟೆ ಶ್ರೀ ರಾಮಾಂಜನೇಯ ಸ್ವಾಮಿ ದೇವಾಲಯ, ಪಿಳ್ಳಂಗಿರಿ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ, ನವುಲೆ ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಎಲ್.ಬಿ.ಎಸ್ ನಗರ, ಜಯನಗರ, ಹೊಸಮನೆ ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಗೋಪಾಳ ಆದಿ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದ ಉತ್ತರ ಬಾಗಿಲ ಮೂಲಕ ಭಕ್ತರು ವೈಕುಂಠನ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.





