
ಶಿವಮೊಗ್ಗ : ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ ಬೆಳವಣಿಗೆಗಾಗಿ ಶ್ರಮಿಸಿದ ಶ್ರೇಷ್ಠವ್ಯಕ್ತಿ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಡಾ. ಬಾಬು ಜಗಜೀವನ್ ರಾಮ್ ರವರ 119 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗಜೀವನ್ ರಾಮ್ ಅವರು ಕೇವಲ ರಾಜಕಾರಣಿಯಾಗಿರದೆ, ದಲಿತರ ಮತ್ತು ಶೋಷಿತರ ಹಕ್ಕುಗಳಿಗಾಗಿ ಶ್ರಮಿಸಿದ ಮಹಾನ್ ನಾಯಕ. ಬಾಬೂಜಿರವರು ದೇಶಕ್ಕೆ ಪೂರಕವಾದ ನಿಲುವುಗಳನ್ನು ತಂದು ಕೊಟ್ಟ ಶ್ರೇಷ್ಠ ವ್ಯಕ್ತಿ. ಮಲಹೊರುವ ಅನಿಷ್ಟ ಪದ್ಧತಿ ನಿಷೇಧಿಸುವಲ್ಲಿ ಅಗ್ರಗಣ್ಯರಾಗಿ ನಿಂತವರು. ದಲಿತ ಸಮುದಾಯದಿಂದ ಬಂದು ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ ಇವರು, ಸಮಾನತೆಗಾಗಿ ನಡೆಸಿದ ಹೋರಾಟ ಅವಿಸ್ಮರಣೀಯವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಹಾಗೂ ಅವರ ಆಶಯಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎಂದರು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ,ಯಾವುದೇ ವ್ಯಕ್ತಿಯನ್ನು ಸಂಕುಚಿತ ಮನೋಭಾವನೆಯಿಂದ ನೋಡಬಾರದು. ಶೋಷಿತರ ಧ್ವನಿಯಾಗಿದ್ದ ಬಾಬೂಜಿಯವರನ್ನು ನಾವು ಸಮಾಜದ ಶ್ರೇಷ್ಟ ವ್ಯಕ್ತಿಯನ್ನಾಗಿ ಸ್ವೀಕರಿಸಿ ಅವರ ತತ್ವಗಳು, ಕೊಡುಗೆಗಳನ್ನು ಮಾರ್ಗಸೂಚಿಗಳಾಗಿ ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ಒಗ್ಗೂಡಿ ದೇಶವನ್ನು ಮುನ್ನಡೆಸಬೇಕು ಎಂದರು.
1936 ರಿಂದ 1986 ರವರೆಗೆ 50 ವರ್ಷ ಶಾಸಕಾಂಗದಲ್ಲಿ ಜನರಿಗೋಸ್ಕರ ನಿರಂತರ ಕಾರ್ಯ ನಿರ್ವಹಿಸಿದಂತಹ ಉನ್ನತ ವ್ಯಕ್ತಿ ಬಾಬೂಜಿ. ಕಾರ್ಮಿಕ, ಕೃಷಿ, ರಕ್ಷಣಾ ಸಚಿವರಾಗಿ, ಉಪ ಪ್ರಧಾನಿಯಾಗಿ, ವಿಭಿನ್ನ ಕ್ಷೇತ್ರದಲ್ಲಿ ಕಾನೂನು ಮಾಡಿ ಸಾಮಾಜಿಕ ಕಳಕಳಿ ಮೆರೆದರು ಎಂದು ಸ್ಮರಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸತೀಶ್ ಜಿ. ಕೆ. ವಿಶೇಷ ಉಪನ್ಯಾಸ ನೀಡಿ, 1935 ರಿಂದ ರಾಜಕೀಯ ರಂಗಕ್ಕೆ ಪ್ರವೇಶ ನೀಡಿ ದೇಶದಲ್ಲಿ ಸಕ್ರಿಯ ರಾಜಕೀಯ ವ್ಯವಸ್ಥೆ ನಿರ್ಮಿಸುವಲ್ಲಿ ಪ್ರಮುಖ ರಾದವರು ಬಾಬುಜಿರವರು. ಅಸ್ಪೃಶ್ಯ ಸಮಾಜದಲ್ಲಿ ಜನಿಸಿದ ಇವರು ತಮ್ಮ ನಿರಂತರ ಶ್ರಮದಿಂದ ಮೇಲ್ಮಟ್ಟಕ್ಕೆ ಬಂದು ಅಸ್ಪೃಶ್ಯತೆಯಿಂದ ಬಳಲುತ್ತಿದ್ದ ಕೋಟ್ಯಂತರ ಜನರ ಬದುಕು ಕಟ್ಟುವಲ್ಲಿ ಯಶಸ್ವಿಯಾದರು. ಕಾರ್ಮಿಕರನ್ನೆಲ್ಲ ಒಗ್ಗೂಡಿಸಿ ಎಲ್ಲರಿಗೂ ಪರಿಚಿತರಾದರು. ತಮ್ಮ ಹಕ್ಕುಗಳ ರಕ್ಷಣೆಗಾಗಿ
ರೈತರನ್ನು ಮತ್ತು ಕಾರ್ಮಿಕರನ್ನು ಜಾಗೃತ ಗೊಳಿಸುವ ಕಾರ್ಯ ಕೈಗೊಂಡರು. ದಲಿತರ, ಕಾರ್ಮಿಕರ ಮಕ್ಕಳಿಗಾಗಿ ಉಚಿತ ಶಿಕ್ಷಣವನ್ನು ಘೋಷಣೆ ಮಾಡಿದರು. ಕಾರ್ಮಿಕ ಮಂತ್ರಿಯಾಗಿ ಕಾರ್ಮಿಕರಿಗೆ ನ್ಯಾಯ ಒದಗಿಸಲು ಹೋರಾಟ ನಡೆಸಿ, ಅವರಿಗೆ ಕನಿಷ್ಠ ವೇತನ ಕಾಯ್ದೆ ಮತ್ತು ಭವಿಷ್ಯ ನಿಧಿ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ.,ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಶಪ್ಪ.ಡಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್.ಹೆಚ್, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ » ಜೆ.ಎನ್.ಎನ್.ಸಿ.ಇ.: ಐದು ದಿನಗಳ ಎಐಸಿಟಿಇ ‘ಬೂಟ್ ಕ್ಯಾಂಪ್’