
ಶಿವಮೊಗ್ಗ : ನಾವೀನ್ಯಯುತ ಚಿಂತನೆ ಮತ್ತು ಅದರ ವಿನ್ಯಾಸ ಸಮಾಜದ ಅಭಿವೃದ್ಧಿಯ ಪ್ರಮುಖ ಬದಲಾವಣೆಯ ಶಕ್ತಿಯಾಗಿದೆ ಎಂದು ಎಐಸಿಟಿಇ ಇನೋವೇಶನ್ ಕೇಂದ್ರದ ಪ್ರಾದೇಶಿಕ ಸಂಯೋಜಕರಾದ ಅಶೀಷ್ ತ್ರಿಪಾಠಿ ಹೇಳಿದರು.
ನಗರದ ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಐಸಿಟಿಇ ನೇತೃತ್ವದಲ್ಲಿ ಭಾರತ ಶಿಕ್ಷಣ ಸಚಿವಾಲಯ, ವಾದ್ವಾನಿ ಫೌಂಡೇಷನ್ ಹಾಗೂ ಎಸ್ಬಿಐ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಐದು ದಿನಗಳ ನಾವೀನ್ಯತೆ ಮತ್ತು ಉದ್ಯಮಶೀಲತೆ ಬೂಟ್ ಕ್ಯಾಂಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ, ಆವಿಷ್ಕಾರ ಎಂಬುದು ಕೇವಲ ಒಂದು ಆಯ್ಕೆಯಲ್ಲ, ಅದು ಒಂದು ಅವಶ್ಯಕತೆ. ಇದು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವುದರ ಜೊತೆಗೆ, ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅದ್ದರಿಂದ ಯುವ ಸಮೂಹದಲ್ಲಿ ಕಾಲೇಜು ಹಂತಗಳಲ್ಲಿಯೆ, ಉದ್ಯಮಶೀಲ ಮನೋಭಾವ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಇದನ್ನೂ ಓದಿ » ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್ ರೈಲಿಗೆ ಏ.08 ರಿಂದ ಅತ್ಯಾಧುನಿಕ LHB ಬೋಗಿಗಳ ಅಳವಡಿಕೆ
ಈ ಬೂಟ್ಕ್ಯಾಂಪ್ ಕಾರ್ಯಕ್ರಮವು ನಾವೀನ್ಯಯುತ ಆಲೋಚನೆ ಮತ್ತು ಅದರ ಅನುಷ್ಠಾನದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದೆ. ಉದ್ಯೋಗ ಹುಡುಕುವ ಮನಸ್ಥಿತಿಯಿಂದ, ಉದ್ಯೋಗ ಸೃಷ್ಟಿಸುವ ಆತ್ಮಬಲ ನಿರ್ಮಿಸಲು ಇಂತಹ ವೇದಿಕೆಗಳು ಪ್ರೇರಣಾದಾಯಕವಾಗಿ ಕಾರ್ಯನಿರ್ವಹಿಸಲಿದೆ.
– ಅಶೀಷ್ ತ್ರಿಪಾಠಿ, ಎಐಸಿಟಿಇ ಇನೋವೇಶನ್ ಕೇಂದ್ರದ ಪ್ರಾದೇಶಿಕ ಸಂಯೋಜಕರು
ಅರೇಕಾ ಟೀ ಕಂಪನಿಯ ಸಂಸ್ಥಾಪಕರಾದ ನಿವೇದನ್ ನೆಂಪೆ ಮಾತನಾಡಿ, ಹೊಸತನದೆಡೆಗೆ ಚಿಂತಿಸುವಾಗ ಮೂದಲಿಕೆಯ ಮಾತುಗಳು ಸಹಜ. ಸಮಸ್ಯೆಗಳಿದ್ದ ಕಡೆ ಅವಕಾಶಗಳು ಹೆಚ್ಚಾಗಿರುತ್ತದೆ. ಅದರ ಜೊತೆಯಲ್ಲಿ ಸವಾಲುಗಳು ನಮ್ಮನ್ನು ಕಾಡುತ್ತದೆ. ಅಂತಹ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ನಾವೀನ್ಯಯುತ ಯೋಚನೆಗಳನ್ನು ಬಲವಾಗಿ ನಂಬಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಮ್ಮ ದೇಶವು ಸೇವಾ ಆಧಾರಿತ ಆರ್ಥಿಕತೆಯಿಂದ, ಜ್ಞಾನ ಆಧಾರಿತ ಆರ್ಥಿಕತೆಯತ್ತ ಸಾಗಬೇಕು. ನಾವೀನ್ಯತೆ ಎಂದಾಗ ನಾವು ಹೊಸದನ್ನು ಸೃಷ್ಟಿಸುವುದು ಮಾತ್ರ ಎಂದು ಅರ್ಥೈಸುತ್ತೇವೆ. ಆದರೆ ಅದು ಸದಾ ಸಂಪೂರ್ಣ ಹೊಸದಾಗಿರಬೇಕೆಂದಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಸಣ್ಣ ಸುಧಾರಣೆಗಳನ್ನು ಮಾಡುವುದು ಕೂಡ ಒಂದು ಮಹತ್ವದ ಆವಿಷ್ಕಾರವಾಗಿದೆ ಎಂದರು.
ಗಾಂಧೀಜಿಯವರ ಸ್ವದೇಶಿ ಚಳುವಳಿಯ ಕಲ್ಪನೆಯು ಕೇವಲ ವಿದೇಶಿ ವಸ್ತುಗಳನ್ನು ತಿರಸ್ಕರಿಸುವುದಾಗಿರಲಿಲ್ಲ. ಜೊತೆಯಲ್ಲಿ ನಮ್ಮ ಜನರಿಗೆ, ನಮ್ಮ ಪರಿಸರಕ್ಕೆ ತಕ್ಕಂತಹ ಉತ್ಪನ್ನಗಳನ್ನು ನಿರ್ಮಿಸುವುದು ಕೂಡ. ಇಂದು ನಾವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂದೆ ಇದ್ದೇವೆ. ಆದರೆ ತಂತ್ರಜ್ಞಾನವನ್ನು ಸ್ವತಃ ಅಭಿವೃದ್ಧಿಪಡಿಸುವಲ್ಲಿ ಹಿಂದುಳಿದಿದ್ದೇವೆ. ಇಂದಿಗೂ ಹಲವಾರು ಕ್ಷೇತ್ರಗಳಲ್ಲಿ, ಇತರೆ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಈ ಅವಲಂಬನೆ ನಮ್ಮನ್ನು ಅಸ್ಥಿರತೆಗೆ ದೂಡಬಹುದು. ಅದನ್ನು ತಪ್ಪಿಸಲು ನಾವು ತಾಂತ್ರಿಕ ಕ್ಷೇತ್ರದ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಇದನ್ನೂ ಓದಿ » ಏ.08 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಕರ್ನಾಟಕದಲ್ಲಿ 2 ಕಡೆ ಬೂಟ್ ಕ್ಯಾಂಪ್ :
ಜಮ್ಮು ಕಾಶ್ಮೀರ, ಲಡಾಕ್ ಸೇರಿದಂತೆ ದೇಶದಾದ್ಯಂತ 30 ಕೇಂದ್ರಗಳಲ್ಲಿ ಬೂಟ್ ಕ್ಯಾಂಪ್ ನಡೆಯುತ್ತಿದ್ದು, ವಿಶೇಷವಾಗಿ ಕರ್ನಾಟಕದಲ್ಲಿ ಕೇವಲ 2 ಕಾಲೇಜುಗಳಲ್ಲಿ ಮಾತ್ರ ಈ ಕಾರ್ಯಕ್ರಮ ನಡೆಯುತ್ತಿದೆ. ಅದರಲ್ಲಿ ಜೆ.ಎನ್.ಎನ್.ಸಿ ಕಾಲೇಜು ಕೂಡ ಒಂದು ಎಂಬುದು ಹೆಮ್ಮೆಯ ವಿಷಯವಾಗಿದೆ. ದೇಶದ ವಿವಿಧ ಕಾಲೇಜಿನ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕೊನೆಯ ದಿನ ವಿದ್ಯಾರ್ಥಿಗಳು ತಮ್ಮ ನಾವೀನ್ಯಯುತ ಚಿಂತನೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕ ಕೆ.ಎಲ್.ಅರುಣ್ ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಐಸಿಟಿಇ ಜೆಎನ್ಎನ್ಸಿಇ ಐಡಿಯಾ ಲ್ಯಾಬ್ ಸಂಯೋಜಕ ಡಾ. ಎಂ.ಹೆಚ್.ಮೋಯಿನುದ್ದಿನ್ ಖಾನ್, ಬೂಟ್ಕ್ಯಾಂಪ್ ಸಂಯೋಜಕ ಕೆ.ಎಲ್.ಅರುಣ್ ಕುಮಾರ್, ವಾದ್ವಾನಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಡಾ.ಸುಪ್ರಭ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ ಇನ್ಮುಂದೆ ಯೂರಿಯಾ ರಸಗೊಬ್ಬರ ಖರೀದಿಗೆ ಫಾರ್ಮರ್ ಐಡಿ ಸಂಖ್ಯೆ ಕಡ್ಡಾಯ, ಹೊಸ ಎಫ್ಐಡಿ ನೋಂದಣಿ ಹೇಗೆ?
