
ಶಿವಮೊಗ್ಗ : ಪತ್ರಿಕೋದ್ಯಮ ಕೇವಲ ಒಂದು ವೃತ್ತಿಯಲ್ಲ. ಅತ್ಯಂತ ಮಹತ್ವದ ಪ್ರಜಾಪ್ರಭುತ್ವದ ಜವಾಬ್ದಾರಿ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ಲೇಷಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಪತ್ರಕರ್ತರ ಶ್ರಮಕ್ಕೆ ಗೌರವಕೊಟ್ಟು ಮಾತನಾಡಿಸಿಕೊಂಡು ಹೋಗುವುದನ್ನು ಸಹ ನಾನು ನೋಡಿದ್ದೇನೆ ಎಂದು ಹೇಳಿದರು.

ಸಮಾಜದ ವ್ಯವಸ್ಥೆಗೆ ಮತ್ತು ಕಟ್ಟಕಡೆಯ ವ್ಯಕ್ತಿಗೆ ತಲುಪುವ ವ್ಯವಸ್ಥೆಯೇ ಮಾದ್ಯಮ. ಪತ್ರಿಕೆಯ ಲೇಖನಗಳನ್ನು ಓದಿದ ತೃಪ್ತಿ ಆನ್ಲೈನ್ನಲ್ಲಿ ಸಿಗುವುದಿಲ್ಲ. ಹಾಗಾಗಿ ಮಕ್ಕಳು ಪುಸ್ತಕವನ್ನು ಓದಬೇಕು. ತಪ್ಪುಗಳನ್ನು ತಿದ್ದಿಕೊಂಡು ಸರಿಪಡಿಸಿಕೊಂಡು ಹೋಗುವುದು ಪತ್ರಿಕಾರಂಗಕ್ಕೆ ನೀಡುವ ಗೌರವ.
– ಬಿ.ವೈ.ರಾಘವೇಂದ್ರ, ಸಂಸದರು
ಪತ್ರಿಕಾ ದಿನಾಚರಣೆ ಎಂದರೆ ನಮ್ಮದೇ ಹಬ್ಬ. ನಮ್ಮದೇ ದಿನ. ಈ ದಿನ ಇನ್ನಷ್ಟು ಅರ್ಥ ಪೂರ್ಣವಾಗಲು ರಕ್ತದಾನ ಶಿಬಿರ ಪ್ರಮುಖ ಕಾರಣವಾಗಿದೆ. ನಮ್ಮ ವೃತ್ತಿ ಬಾಂಧವರು ಅವರವರ ಪ್ರತಿಭೆಗೆ ತಕ್ಕ ಹಾಗೆ ಸಾಧನೆ ಮಾಡಿದ್ದಾರೆ. ಅವರೆಲ್ಲರಿಗೂ ಗೌರವ ಸಲ್ಲಿಸಬೇಕು.
– ಶಿವಾನಂದ ತಗಡೂರು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು
ಕೆಯುಡಬ್ಲ್ಯೂಜೆ ಇತಿಹಾಸ ಬಹಳ ದೊಡ್ಡದು. ಬಿಸಲೇರಿ ನೀರಿನ ಬಾಟಲಿಯನ್ನು ನಕಲು ಮಾಡಿದಂತೆ ಕೆಲವರು ಪತ್ರಕರ್ತರ ಸಂಘವನ್ನೂ ನಕಲು ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರದ ಮಾನ್ಯತೆ ಇರುವ ಸಂಘ ಇದೊಂದೇ.
– ಮದನ್ ಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರು
ಪತ್ರಕರ್ತರಿಗೆ ಆತ್ಮಾವಲೋಕನ ಬಹಳ ಮುಖ್ಯ. ವೃತ್ತಿ ಧರ್ಮವನ್ನು ಮರೆಯಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಮೇಲಿನವರೆಗೆ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು. ಇದನ್ನು ನಮ್ಮ ಮುಂದಿನ ಪೀಳಿಗೆವರೆಗೂ ಮುಂದುವರೆಸಿಕೊಂಡು ಹೋಗಲು ವೃತ್ತಿ ಬದ್ಧತೆಯನ್ನು ಕಾಪಾಡಬೇಕು.
– ಕೆ.ವಿ.ಶಿವಕುಮಾರ್, ರಾಜ್ಯ ನಿರ್ದೇಶಕರು
ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ. ಆ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿಯೂ ಹೀಗೆ ಸಹಕರಿಸಿ.
– ಹೆಚ್.ಯು.ವೈದ್ಯನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರು
ಶಿವಮೊಗ್ಗ ಜಿಲ್ಲೆಯು ರಾಜ್ಯಕ್ಕೆ ನಾಲ್ಕು ಜನ ಮುಖ್ಯಮಂತ್ರಿಗಳನ್ನು ನೀಡಿದೆ. ಇದಕ್ಕೆ ಕಾರಣ ಹಿಂದಿನ ಪತ್ರಕರ್ತರು. ಪತ್ರಕರ್ತರ ಸಹಕಾರ ಖಂಡಿತ ನಮ್ಮ ಯುವಕರಿಗಿದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳು ಹೆಚ್ಚು ಆಕ್ಟಿವ್ ಆಗಿವೆ. ಎಲ್ಲ ಪತ್ರಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಎಲ್ಲ ಅಭಿವೃದ್ಧಿ ಹಿಂದೆ ಪತ್ರಕರ್ತರ ಸಹಕಾರ ಇದೆ.
– ಚೇತನ್ ಕುಮಾರ್, ಜವಳಿ ಮತ್ತು ಮೂಲಸೌಕರ್ಯ ನಿಗಮದ ಅಧ್ಯಕ್ಷರು

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ನಮ್ಮ ಆಸಕ್ತಿಗೆ ಬೇಕೋ ಬೇಡವೋ ಈ ವೃತ್ತಿಗೆ ಬಂದಿದ್ದೇವೆ. ಹಾಗಾಗಿ ಈ ವೃತ್ತಿಗೆ ಬಂದ ಮೇಲೆ ಆ ಘನತೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಇದನ್ನೂ ಉಳಿಸಿಕೊಂಡು ಹೋಗುವ ಕೆಲಸವನ್ನು ನಾವು ನೀವು ಎಲ್ಲರೂ ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗುವುದು ಮುಖ್ಯ ಎಂದರು.
ಹಿರಿಯರು ಸಂಪಾದಿಸಿದ ಗೌರವವನ್ನು ಪತ್ರಕರ್ತರು ಉಳಿಸಿಕೊಂಡು ಹೋಗುವ ದೊಡ್ಡ ಸವಾಲು ಇದೆ. ಇವತ್ತಿಗೂ ಕೂಡ ಹಿಂದಿನ ಅನೇಕರು ಕಟ್ಟಿಕೊಂಡು ಬಂದಿರುವ ಪರಂಪರೆಯನ್ನು ನಾವು ಮುಂದುವರೆಸಿ ಅದಕ್ಕೆ ಲೋಪ ಆಗದ ರೀತಿಯಲ್ಲಿ ಮುಂದುವರೆಸುವ ಅಗತ್ಯವಿದೆ. ನಮ್ಮ ಹೃದಯಕ್ಕೆ ಸರಿಯಾದ ರೀತಿಯಲ್ಲಿ ಸತ್ಯಕ್ಕೆ ಹತ್ತಿರವಾದ ರೀತಿಯಲ್ಲಿ ಸುದ್ದಿ ಮಾಡಿದರೆ ನಿಜಕ್ಕೂ ಈ ವೃತ್ತಿಯಲ್ಲಿ ಇದ್ದು ಸಾರ್ಥಕವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ನೊಂದವರ ಕಣ್ಣೀರು ಒರೆಸುವಲ್ಲಿ, ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ ಎಂದರೆ ಆ ವೃತ್ತಿಯಲ್ಲಿ ಇದ್ದೂ ಸಹ ವ್ಯರ್ಥವಾಗುತ್ತದೆ. ಸ್ವಾತಂತ್ರ್ಯದ ಪೂರ್ವದಲ್ಲಿ ಇದ್ದ ಪತ್ರಿಕೋದ್ಯಮವೇ ಬೇರೆ. ನಂತರದ ಪತ್ರಿಕೋದ್ಯಮವೇ ಬೇರೆ. 80ರ ದಶಕದಲ್ಲಿ ಬಂದ ಪತ್ರಕರ್ತರ ಸೈದ್ಧಾಂತಿಕತೆ ಬೇರೆ. ಅದನ್ನು ಹಾಗೆಯೇ ಮುಂದುವರೆಸಿಕೊಂಡು ಒಳ್ಳೆಯ ರೀತಿಯಲ್ಲಿ ಸತ್ಯದ ದಾರಿಯಲ್ಲಿ ಮುಂದುವರೆಸಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೈದ್ಯನಾಥ್ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೆ.ಎಸ್.ಹುಚ್ಚರಾಯಪ್ಪ, ಕೆ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ರಾಜ್ಯ ನಿರ್ದೇಶಕ ಟೆಲೆಕ್ಸ್ ರವಿಕುಮಾರ್, ಪ್ರಮುಖರಾದ ರೋಹಿತ್, ನವೀನ್ ಬಿಲ್ಗುಣಿ, ಕೆ.ಆರ್.ಸೋಮನಾಥ್, ದೇಶಾದ್ರಿ ಹೊಸ್ಮನೆ, ಆರುಂಡಿ ಶ್ರೀನಿವಾಸ ಮೂರ್ತಿ, ಭರತ್ ರಾಜ್ ಸಿಂಗ್, ದೀಪಕ್ ಸಾಗರ್, ನಾಗರಾಜ್ ಶೆಣೈ,, ಗಾ.ರ.ಶ್ರೀನಿವಾಸ್ ಸೇರಿದಂತೆ ತಾ ಪದಾಧಿಕಾರಿಗಳು ಗಳು ಹಾಜರಿದ್ದರು.

ರೋಟರಿ ರಕ್ತನಿಧಿ ಕೇಂದ್ರ, ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಕೇಂದ್ರ, ಆಶಾಜ್ಯೋತಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರು, ದತ್ತಿನಿಧಿ ಪ್ರಶಸ್ತಿ ಪುರಸ್ಕೃತರಿಗೆ ಗೌರವಿಸಲಾಯಿತು.
ಹಿರಿಯ ಪತ್ರಕರ್ತರಾದ ರಾಮಚಂದ್ರ ಕೊಪ್ಪಲು, ಕೆ.ಎಸ್.ಹುಚ್ಚರಾಯಪ್ಪ, ರಘುಕುಮಾರ್, ರಂಗನಾಥ್ ಅರಹತೊಳಲು, ನಾಗರಾಜ್ ಕಲ್ಕೊಪ್ಪ, ಆನಂದಕುಮಾರ್, ಶಿವಪ್ಪ ಹಿತ್ಲೇರ್, ರಾಜೇಶ್ ಭಡ್ತಿ, ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ದತ್ತಿ ಪ್ರಶಸ್ತಿ ಪಡೆದ ಕಣ್ಣಪ್ಪ, ಶ್ರೀಕಾಂತ್ ಭಟ್, ವಾದಿರಾಜ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಜಿ. ವಿಜಯ್ ಕುಮಾರ್ ಹಾಗೂ ಅವರ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಚೈತ್ರ ನಿರಂತರ ಕಾರ್ಯಕ್ರಮ ನಿರೂಪಿಸಿದರು.
