
ಶಿವಮೊಗ್ಗ : ಶ್ರಾವಣ ಮಾಸದ ಹಬ್ಬಗಳ ಸಾಲಿನಲ್ಲಿ ಮಹಿಳೆಯರಿಗೆ ವಿಶೇಷ ಮಹತ್ವ ಹೊಂದಿರುವ ಪವಿತ್ರ “ಮಂಗಳಗೌರಿ ವ್ರತ”ವನ್ನು ಶ್ರದ್ಧೆ, ಭಕ್ತಿ ಹಾಗೂ ನಿಯಮಬದ್ಧವಾಗಿ ಆಚರಿಸಿದರೆ ದೇವಿಯ ಕೃಪೆಯಿಂದ ಸಕಲ ಇಷ್ಟಾರ್ಥಗಳು ನೆರವೇರುವುದರ ಜೊತೆಗೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಸೌರಭ ಉತ್ತಮ್ ಅಭಿಪ್ರಾಯಪಟ್ಟರು.
ನಗರದ ತಮ್ಮ ಸ್ವಗೃಹದಲ್ಲಿ ಆಯೋಜಿಸಿದ್ದ ಮಹಾ ಮಂಗಳಗೌರಿ ವ್ರತ ಪೂಜೆ ಹಾಗೂ ಬಾಗಿನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಂಗಳಗೌರಿ ದೇವಿಯ ಆರಾಧನೆಯು ಮಹಿಳೆಯರ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದ್ದು, ಭಕ್ತಿಯಿಂದ ಪೂಜಿಸಿದವರಿಗೆ ದೇವಿಯ ಅನುಗ್ರಹ ಸದಾ ಲಭಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್ ಮಾತನಾಡಿ, ಶ್ರಾವಣ ಮಾಸದ ಹಬ್ಬಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅದರ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರೆ ಅವರು ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಮಿಳುನಾಡು ಮಿಲ್ಕ್ ಫೆಡರೇಷನ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕಾಮರಾಜ್ ಮಾತನಾಡಿ, ಕಳೆದ ಐದು ವರ್ಷಗಳಿಂದ ನಿರಂತರವಾಗಿ ಮಂಗಳಗೌರಿ ಪೂಜೆ ನಡೆಸುತ್ತಿದ್ದು, ಇದರ ಫಲವಾಗಿ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಹೆಚ್ಚಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಹೇಮಾ ಅನಿಲ್, ರೂಪಾ ಜಯಾನಂದ, ಅನಿತಾ, ಮಂಜುಳ ಶಶಿಕಾಂತ್, ವಿದ್ಯಾ ಕಾಮರಾಜ್, ಶಿಲ್ಪಾ ಜಗದೀಶ್, ಲಕ್ಷ್ಮೀ ವಿವೇಕ್, ಸುಚರಿತ ವಿನಯ್, ಮಹಾದೇವಿ ದುಂಡಪ್ಪ, ನಮ್ರತಾ ನೆಹಾಲ್, ಪೂಜಾ ವಿಶ್ವನಾಥ್, ಗೌರಿ ಧನಂಜಯಪ್ಪ, ಮಾಧುರಿ ವಿಶ್ವನಾಥ್ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಪೂಜೆ ಬಳಿಕ ಮಹಿಳೆಯರಿಗೆ ಬಾಗಿನ ವಿತರಿಸಲಾಯಿತು.