
ಶಿವಮೊಗ್ಗ : ಉತ್ತಮ ಆರೋಗ್ಯದ ಮೂಲವೇ ಪೌಷ್ಟಿಕ ಆಹಾರ. ವಿಶೇಷವಾಗಿ ಗರ್ಭಿಣಿಯರು, ಮಕ್ಕಳು ಹಾಗೂ ಮಹಿಳೆಯರು ಸಮತೋಲಿತ ಆಹಾರ ಸೇವಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಇದನ್ನೂ ಓದಿ » ಉದ್ಯೋಗಾಕಾಂಕ್ಷಿಗಳಿಗೆ Good News, ನೇರ ಸಂದರ್ಶನ ಎಲ್ಲಿ, ಯಾವಾಗ?
ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಕ್ಲಿನಿಕ್ ಶಕ್ತಿಧಾಮದಲ್ಲಿ ಹಾರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗರ್ಭಿಣಿಯರ ಆರೋಗ್ಯ ತಪಾಸಣೆ ಹಾಗೂ ಪೌಷ್ಟಿಕ ಆಹಾರ ಜಾಗೃತಿಗಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌಷ್ಟಿಕ ಆಹಾರದ ಕೊರತೆಯಿಂದ ರಕ್ತಹೀನತೆ, ಅಪೌಷ್ಟಿಕತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಗರ್ಭಿಣಿಯರು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಇಂದಿನ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಪ್ರತಿವರ್ಷ ಸೆಪ್ಟೆಂಬರ್ 01 ರಿಂದ 07 ರವರೆಗೆ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಆಚರಿಸಲಾಗುತ್ತದೆ. ಜನರಲ್ಲಿ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸುವುದು, ಅಪೌಷ್ಟಿಕತೆಯನ್ನು ತಡೆಗಟ್ಟುವುದು ಹಾಗೂ ತಾಯಿ-ಮಕ್ಕಳ ಆರೋಗ್ಯವನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಪೌಷ್ಟಿಕ ಆಹಾರವು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅಗತ್ಯವಾಗಿದ್ದು, ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿದೆ.
ಈ ಸಂದರ್ಭದಲ್ಲಿ ಹಾರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಗರ್ಭಿಣಿಯರಿಗೆ ರಕ್ತ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಯಿತು. ಆರೋಗ್ಯ ತಪಾಸಣೆಯೊಂದಿಗೆ ಪೌಷ್ಟಿಕ ಆಹಾರ ಸೇವನೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಗುಡ್ಡಪ್ಪ ಕಸಬಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ನಾಗರಾಜ್ ನಾಯಕ್, ಆರ್ಸಿಎಚ್ ಅಧಿಕಾರಿ ಡಾ. ಮಲ್ಲಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಡಾ. ಮೋಹನ್, ಡಾ. ನವೀದ್ ಖಾನ್, ಡಾ. ಹರ್ಷವರ್ಧನ್, ಡಾ. ಅರುಣ್ ಕುಮಾರ್, ಹಾರನಹಳ್ಳಿ ವೈದ್ಯಾಧಿಕಾರಿ ಡಾ. ಸೃಜನ್ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷೆ ವಿನುತಾ ಅಶ್ವಿನ್, ಕಾರ್ಯದರ್ಶಿ ಜ್ಯೋತಿ ಶ್ರೀರಾಮ್, ರೋ. ಜಿ.ವಿಜಯ್ ಕುಮಾರ್, ಶಿವಮೊಗ್ಗ ತಂಡದ ಸದಸ್ಯರು, ಹಾರನಹಳ್ಳಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕ್ಲಿನಿಕ್ ಶಕ್ತಿಧಾಮದ ಸಿಬ್ಬಂದಿ ಹಾಗೂ ಗರ್ಭಿಣಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.