
ಶಿವಮೊಗ್ಗ : ನಗರದ ಪ್ರಮುಖ ಆಕರ್ಷಣೀಯ ಹಾಗೂ ಸಾರ್ವಜನಿಕ ವಿಶ್ರಾಂತಿ ತಾಣವಾದ ಗಾಂಧಿ ಪಾರ್ಕ್‌ನ ಮೂಲಭೂತ ಸೌಕರ್ಯಗಳ ಸುಧಾರಣೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ (ಚೆನ್ನಿ) ಅವರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು, ರೂ.13.5 ಕೋಟಿ ವೆಚ್ಚದ ಕೆಪಿಎಸ್ ನೂತನ ಕಟ್ಟಡಕ್ಕೆ ಇಂದು ಶಂಕುಸ್ಥಾಪನೆ
ಇಂದು ಬೆಳಿಗ್ಗೆ ಗಾಂಧಿ ಪಾರ್ಕ್‌ಗೆ ಭೇಟಿ ನೀಡಿದ ಶಾಸಕರು, ಪಾರ್ಕ್‌ನಲ್ಲಿ ಹಲವು ದಿನಗಳಿಂದ ಅರ್ಧಕ್ಕೆ ನಿಂತಿರುವ ಹಾಗೂ ದುರಸ್ತಿಯಾಗಬೇಕಿರುವ ಕಾಮಗಾರಿಗಳನ್ನು ವೀಕ್ಷಿಸಿ ಸಮಗ್ರ ಪ್ರಗತಿ ಪರಿಶೀಲನೆ ನಡೆಸಿದರು.
ಪರಿಶೀಲನಾ ಸಭೆಯ ಪ್ರಮುಖ ನಿರ್ದೇಶನಗಳು :
ಫೌಂಟೆನ್ ಕಾಮಗಾರಿಗೆ ಚಾಲನೆ : ಅರ್ಧಕ್ಕೆ ಸ್ಥಗಿತಗೊಂಡಿರುವ ಫೌಂಟೆನ್ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಪಾರ್ಕಿನ ಸೌಂದರ್ಯ ಹೆಚ್ಚಿಸಬೇಕು.
ಶುದ್ಧ ಕುಡಿಯುವ ನೀರಿನ ಘಟಕ : ಪಾರ್ಕ್‌ಗೆ ಬರುವ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಯಾವುದೇ ಕುಡಿಯುವ ನೀರಿನ ಅಭಾವವಾಗದಂತೆ ಸುಲಭವಾಗಿ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಸೂಚಿಸಲಾಯಿತು.
ಈಜುಕೊಳದ ಬಳಕೆ : ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಈಜುಕೊಳವನ್ನು ಸಾರ್ವಜನಿಕರ ಸದ್ಬಳಕೆಗೆ ತರಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಮಕ್ಕಳ ರೈಲು ಮತ್ತು ಆಟಿಕೆಗಳ ದುರಸ್ತಿ : ತಾಂತ್ರಿಕ ಕಾರಣಗಳಿಂದ ನಿಂತಿರುವ ಪ್ರಸಿದ್ಧ ಮಕ್ಕಳ ರೈಲನ್ನು ದುರಸ್ತಿಗೊಳಿಸಿ ಹಾಗೂ ಹಾಳಾಗಿರುವ ಆಟಿಕೆಗಳನ್ನು ಬದಲಾಯಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು.
ವಾಣಿಜ್ಯ ಮಳಿಗೆಗಳು : ಈಗಾಗಲೇ ನಿರ್ಮಿಸಲಾಗಿರುವ ಮಳಿಗೆಗಳನ್ನು ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು.
ಜಲಮೂಲ ನವೀಕರಣ : ಪಾರ್ಕ್ ಒಳಗಿರುವ ಕೊಳವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಬೇಕು. ಪಾರ್ಕಿನ ಸರ್ವಾಂಗೀಣ ನವೀಕರಣ ಹಾಗೂ ಸ್ವಚ್ಛತೆಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ ಕಾಲಮಿತಿಯೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಜ್ಞಾನೇಶ್ವರ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಪ್ರಭಾಕರ್, ಪಾಲಿಕೆಯ ಹಿರಿಯ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ » ಆ.25 ರಂದು ಬಿಡದಿ ರೈತರ ಹೋರಾಟವನ್ನು ಬೆಂಬಲಿಸಿ, ‘ವಿಧಾನಸೌಧ ಚಲೋ’, ರೈತರಿಗೆ ಕರೆ