
ಶಿವಮೊಗ್ಗ : ಜಿಲ್ಲೆಯಲ್ಲಿ ಬಿಡಾಡಿ ಗೋವುಗಳನ್ನು ಗುರುತಿಸಿ ಗೋಶಾಲೆಗೆ ಕಳುಹಿಸಬೇಕು. ಹಾಗೂ ಕಾನೂನು ಬಾಹಿರವಾಗಿ ಪ್ರಾಣಿಗಳ ಸಾಗಾಣಿಕೆ ಮಾಡುವುದು ಮತ್ತು ವಧೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಸೂಚನೆ ನೀಡಿದರು.
ಮೇ 28 ರಂದು ರಾಜ್ಯಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕಾನೂನುಬಾಹಿರವಾಗಿ ಹಾಗೂ ಅಕ್ರಮ ಪ್ರಾಣಿ ಸಾಗಣೆ ಮತ್ತು ವಧೆಗೆ ಕಾನೂನುಬದ್ಧವಾಗಿ ನಿಯಂತ್ರಣ ಹಾಕಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲು ಬುಧವಾರ ಜಿಲ್ಲಾಡಳಿತ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕ್ರಮವಾಗಿ ಒಂಟೆ ಮತ್ತು ಗೋವುಗಳನ್ನು ಸಾಗಿಸುವುದು ಮತ್ತು ವಧೆ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಧಿಕೃತ ಪ್ರಾಣಿಗಳ ಸಾಗಾಣಿಕೆ ಮತ್ತು ವಧೆ ನಿಯಂತ್ರಣ ಸಮಿತಿಯನ್ನು ರಚಿಸಲಾಗಿದ್ದು, ಈನಿಟ್ಟಿನಲ್ಲಿ ಸಮಿತಿ ಸದಸ್ಯರು ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ವಹಿಸದೇ ಕ್ರಮ ವಹಿಸಬೇಕು.
– ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಈಗಾಗಲೇ 32 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ, ಸಿಬ್ಬಂದಿ ನಿಯೋಜನೆ ಮಾಡಿ ಅಕ್ರಮ ಪ್ರಾಣಿಗಳ ಸಾಗಾಣಿಕೆ ಕುರಿತು ನಿಗಾ ವಹಿಸಲಾಗುತ್ತಿದೆ. ಬಿಡಾಡಿ ಗೋವುಗಳ ಸಮಸ್ಯೆ ಕುರಿತು ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ ಜೊತೆ ಸೇರಿ ಕ್ರಮ ಕೈಗೊಳ್ಳಲಿದೆ.
– ನಿಖಿಲ್ ಬಿ., ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ
ಪ್ರಾಣಿಗಳ ಅಕ್ರಮ ಸಾಗಾಣಿಕೆ ಬಗ್ಗೆ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ನಿಗಾ ವಹಿಸಬೇಕು. ಹಾಗೂ ಬಿಡಾಡಿ ಗೋವುಗಳು ಹಾಗೂ ಮಾಲೀಕರಿಲ್ಲದ ಗೋವುಗಳನ್ನು ಗುರುತಿಸಿ, ಅಂತಹ ಗೋವುಗಳನ್ನು ಸಮೀಪದ ಗೋಶಾಲೆಗಳಿಗೆ ಕಳುಸಹಿಸಿಕೊಡಬೇಕು. ಅಕ್ರಮ ಪ್ರಾಣಿ ವಧೆ ಕಂಡು ಬಂದಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ದೃಢೀಕರಿಸಬೇಕು ಎಂದು ತಿಳಿಸಿದರು.
ಎಡಿಸಿ ಅಭಿಷೇಕ್ ವಿ., ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಮಾಯಣ್ಣಗೌಡ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ » ಜಯನಗರ ಪೊಲೀಸ್ ಠಾಣೆಗೆ ನೂತನ ಜೀಪು ಹಸ್ತಾಂತರ