
ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಗೋವುಗಳ ರಕ್ಷಣೆಗೆ ವಿನೂತನ ಚಿಂತನೆಯೊಂದಿಗೆ ಪ್ರಾರಂಭವಾದ “ಗೋವರ್ಧನ ಟ್ರಸ್ಟ್” ಶಿವಮೊಗ್ಗದ ವತಿಯಿಂದ ಜೂ.01 ರಿಂದ ಜೂ.30 ರವರಿಗೆ ಒಂದು ತಿಂಗಳು ಪೂರ್ತಿ ಗೋ ಜಾಗೃತಿ ಮೂಡಿಸುವ ಸಲುವಾಗಿ “ಗೋ ಸೇವಾ ಮಾಸ ಅಭಿಯಾನ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ಇಂದು ನಗರದ ಬೆಕ್ಕಿನಕಲ್ಮಠದಲ್ಲಿ ನೆರವೇರಿತು.
ಗೋವರ್ಧನ ಟ್ರಸ್ಟ್ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಅಭಿಯಾನವನ್ನು ಗೋ ಸೇವೆಯ ಬಗ್ಗೆ ಪ್ರಾರಂಭ ಮಾಡಿದೆ. ಇದೊಂದು ಮಹಾ ಪುಣ್ಯದ ಕೆಲಸ. ಗೋ ಶಾಲೆಯಿಂದಾಗಿ ಗೋ ಸಂಪತ್ತು ಇನ್ನಷ್ಟು ಬೆಳೆಯಲು ಪ್ರೇರಣೆ ನೀಡಲಿ.
– ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ, ಬೆಕ್ಕಿನಕಲ್ಮಠ
ಗೋವುಗಳ ಸೇವೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಗೋ ಸೇವಾ ಟ್ರಸ್ಟ್ ಪ್ರಾರಂಭವಾಗಿದೆ. ಪ್ರತಿಯೊಬ್ಬ ಗೋ ಪ್ರೇಮಿಯೂ ಇದರಲ್ಲಿ ಭಾಗವಹಿಸಬೇಕು. ಗೋ ಸೇವಾ ಮಾಸವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಾರಂಭಿಸಲಾಗಿದೆ.
– ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಇದೊಂದು ಅತ್ಯಂತ ಅಪೂರ್ವವಾದಂತಹ ಸಂದರ್ಭ. ಇವತ್ತು ಗೋ ಸಂಪತ್ತು, ಗೋ ಸಂಪತ್ತು ಉಳಿದಿಲ್ಲ. ಹಿಂದಿನ ಕಾಲದಲ್ಲಿ ಎಷ್ಟು ಸಂಪತ್ತಿದೆ ಎಂದು ಯಾರು ಕೇಳುತ್ತಿರಲ್ಲಿ, ಎಷ್ಟು ಗೋ ಸಂಪತ್ತು ಇದೆ ಎಂದು ಕೇಳುತ್ತಿದ್ದರು. ಗೋವೇ ಒಂದು ಸಂಪತ್ತು. ಈಗ ಆ ಸಂಪತ್ತು ಉಳಿದಿಲ್ಲ. ಆಗಿನ ಕಾಲದಲ್ಲಿ ಯಾರ ಮನೆಗೆ ಯಾವ ಸಮಯಕ್ಕೆ ಹೋದರೂ ಸಹ ಹಾಲು ಮೊಸರು ಸಿಗುತ್ತಿತ್ತು. ಎಲ್ಲವನ್ನೂ ಕೊಡುವಂತಹದ್ದು ಗೋವು. ಆ ಗೋವಿನಲ್ಲಿ ಎಲ್ಲಾ ದೇವರು ಇರುವಂತಹದ್ದು. ಈ ಎಲ್ಲ ಹಿನ್ನೆಲೆ ಇರುವಂತಹ ಗೋವನ್ನು ನಾವು ಇಂದು ಕಡೆಗಣಿಸುತ್ತಿರುವುದು ದೊಡ್ಡ ದುರಂತವೇ. ಗೋ ಸಂರಕ್ಷಣೆಯ ಪ್ರಮಾಣ ಸಾಕಾಗುತ್ತಿಲ್ಲ. ಮಠ ಮಾನ್ಯಗಳೆಲ್ಲ ಗೋವುಗಳನ್ನು ರಕ್ಷಣೆ ಮಾಡಿಕೊಂಡು ಬರುತ್ತಿವೆ. ಈಶ್ವರಪ್ಪ ಅವರು ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಹಣದ ಜೊತೆಗೆ ಗುಣ ಇದ್ದರೆ ಏನೆಲ್ಲ ಸುಧಾರಣೆ ಆಗುತ್ತದೆ ಎಂಬುದಕ್ಕೆ ಈಶ್ವರಪ್ಪ ನವರು ಕಾರಣರಾಗಿದ್ದಾರೆ. ಅವರು ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಗೋವಿಗಾಗಿ ಆಂಬುಲೆನ್ಸ್ ಮಾಡಿದ್ದಾರೆ. ಇದು ತುಂಬ ವಿಶೇಷವಾದದ್ದು, ಅದಕ್ಕೆ ಈಶ್ವರಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಗೋ ಸೇವೆಗೆ ಅತ್ಯುನ್ನತವಾದ ಮಹಾ ಕಾಣಿಕೆ ಇದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಮಾತನಾಡಿ, ಗೋವರ್ಧನ ಟ್ರಸ್ಟ್ ಅತಿ ಕಡಿಮೆ ಅವಧಿಯಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಮುಂದುವರೆಯುತ್ತಿದೆ. ಶಿವಮೊಗ್ಗ ಸಮೀಪವಿರುವ ಸುರಭಿ, ಮಹಾವೀರ್ ಮತ್ತು ಶ್ರೀ ಜ್ಞಾನೇಶ್ವರಿ ಗೋಶಾಲೆಗಳಿಗೆ ಮೇವು ಒದಗಿಸಲು ಭೂದಾನಿಗಳಿಂದ ಪಡೆದ ಭೂಮಿಯಲ್ಲಿ ಮೇವನ್ನು ಬೆಳೆದು ಪೂರೈಸಲಾಗುತ್ತಿದೆ. ಗೋ ಸಂರಕ್ಷಣೆಗಾಗಿ ಸುಮಾರು 22 ಎಕರೆ ಜಮೀನು ದಾನವಾಗಿ ದೊರೆತಿದೆ. ಶಿವಮೊಗ್ಗ ನಗರದಲ್ಲಿ ಗೋವುಗಳ ಅಪಘಾತ ಹೆಚ್ಚಾಗುತ್ತಿದ್ದು, ಆ ಸಮಯದಲ್ಲಿ ಗೋವುಗಳನ್ನು ಸಾಗಿಸಲು ಕಷ್ಟವಾಗುತ್ತಿತ್ತು. ಹಾಗಾಗಿ ಅದರ ಸಲುವಾಗಿ ಒಂದು ಆಂಬುಲೆನ್ಸ್ ನ್ನೂ ಖರೀದಿ ಮಾಡಲಾಗಿದೆ. ಖರೀದಿಸಲಾದ ವಿಶೇಷ ಅತ್ಯಾಧುನಿಕ ಹೈಡ್ರಾಲಿಕ್ ವ್ಯವಸ್ಥೆಯುಳ್ಳ ಪಶುವೈದ್ಯಕೀಯ ಅಂಬುಲೆನ್ಸ್ ಈಗಾಗಲೇ ಕಾರ್ಯನಿರ್ವಹಿಸುತ್ತದೆ. ಇಡೀ ಶಿವಮೊಗ್ಗದ ಎಲ್ಲ ಭಾಗಗಳಲ್ಲೂ ಸಹ 100 ತಂಡ ಮಾಡಿ ಅದರಲ್ಲಿ ಹತ್ತತ್ತು ಜನರ ಒಂದು ಗುಂಪು ಮಾಡಿ, ಅವರಿಂದ ಮಾಹಿತಿ ಪಡೆಯಲು ಮುಂದಾಗಿದ್ದು, ಇವತ್ತಿನಿಂದ ಗೋ ಸೇವಾ ಮಾಸ ಪ್ರಾರಂಭಿಸಲಾಗಿದೆ ಎಂದರು.
ಹಲವು ಮಠಾಧೀಶರು, ಸಾದು ಸಂತರು, ಗೋಪ್ರೇಮಿಗಳು ಉದಾರವಾಗಿ ಟ್ರಸ್ಟಿಗೆ ದೇಣಿಗೆ ನೀಡಿರುವುದು ನಮಗೆ ಗೋಮಾತೆಯ ರಕ್ಷಣೆಯಲ್ಲಿ ಮುಂದುವರೆಯಲು ಮತ್ತಷ್ಟು ಬಲ ಬಂದಂತಾಗಿದೆ. ಹಾಗೂ ಇದರಿಂದ ಪ್ರೇರೇಪಿತರಾಗಿ ನಮ್ಮದೇ ಆದ “ವಿಶ್ವಬಂಧು” ಎಂಬ ಗೋಶಾಲೆಯನ್ನು ನಗರದ ಸಮೀಪವಿರುವ ಅಬ್ಬಲಗೆರೆಯಲ್ಲಿ ಪ್ರಾರಂಭಿಸಿದ್ದೇವೆ, ಈ ಗೋಶಾಲೆಗೆ ರಾಮಾಚಂದ್ರಾಪುರ ಶ್ರೀ ಮಠದಿಂದ 25 ಹಸುಗಳನ್ನು ದಾನವಾಗಿ ನೀಡುವುದರ ಮೂಲಕ ಪರಮಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ. ಅಲ್ಲದೇ ಇನ್ನೂ 250 ಹಸುಗಳನ್ನು ನೀಡುವುದಾಗಿ ಹೇಳಿದ್ದಾರೆ.
ಗೋವರ್ಧನ ಟ್ರಸ್ಟ್’ನ ದೇಣಿಗೆ ಕೂಪನ್ ಪಡೆದು ಐದು ಸಾವಿಕ್ಕೂ ಹೆಚ್ಚು ಗೋಪ್ರೇಮಿಗಳು ಗೋಪಾಲನಾ ಧೀಕ್ಷೆ ತೊಟ್ಟಿದ್ದಾರೆ. ಗೋಶಾಲೆಗಳ ನಿರ್ವಹಣೆಗೆ ಅಪಾರ ಪ್ರಮಾಣದ ಹಣದ ಅವಶ್ಯಕತೆಯಿದ್ದು ಇದಕ್ಕಾಗಿ ದಾನಿಗಳು ಪ್ರತಿ ತಿಂಗಳು, ಆರು ತಿಂಗಳಿಗೊಮ್ಮೆ ಮತ್ತು ವರ್ಷಕ್ಕೊಮ್ಮೆ ನಿಯಮಿತವಾಗಿ ದೇಣಿಗೆ ನೀಡಲು ಅನುಕೂಲವಾಗುವಂತೆ ಕೂಪನ್‌ಗಳನ್ನು ವಿತರಿಸಲಾಗುತ್ತಿದೆ. ಹಾಗೂ ಇದಕ್ಕಾಗಿ ಜೂನ್ ತಿಂಗಳು ಪೂರ್ತಿ ಗೋ ಸೇವಾ ಮಾಸ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಯದಲ್ಲಿ ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸುತ್ತಾರೆ. ಗೋಮಾತೆಯ ಸಂರಕ್ಷಣೆಯ ಈ ಪುಣ್ಯ ಕಾರ್ಯದಲ್ಲಿ ನಗರದ ಜನತೆ ಉದಾರವಾಗಿ ಧನ ಸಹಾಯ ಮಾಡಿ ಗೋ ಸೇವೆಗೆ ನಮ್ಮೊಂದಿಗೆ ಸಹಕರಿಸಬೇಕೆಂದು ಹೇಳಿದರು.

ನಂತರ ಹರಿಗೆಯಲ್ಲಿ ಭೂಪಾಳಂ ಶಿವಸ್ವಾಮಿ ರವರು ನೀಡಿದ ಮೂರು ಎಕರೆ ಜಾಗದಲ್ಲಿ ಗೋವರ್ಧನ ಟ್ರಸ್ಟ್ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮವನ್ನು ಪರಮ ಪೂಜ್ಯ ಬೆಕ್ಕಿನ ಕಲ್ಮಠದ ಗುರುಗಳ ಅಮೃತ ಹಸ್ತದಿಂದ ಬೀಜ ಬಿತ್ತುವ ಮೂಲಕ ಇಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಉಮೇಶ್ ಆರಾಧ್ಯ, ರಮೇಶ್ ಬಾಬು, ಸಂದೇಶ್ ಉಪಾಧ್ಯಾಯ, ಉಮಾಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
