
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಜನಮನದ ಆರಾಧ್ಯ ದೈವ ಶ್ರೀ ಹುಚ್ಚಾರಾಯ ಸ್ವಾಮಿ ರಥೋತ್ಸವವು ಇಂದು ಬೆಳಗ್ಗೆ ಅದ್ದೂರಿಯಾಗಿ ನೆರವೇರಿದ್ದು, ತೇರು ರಥಬೀದಿಯಲ್ಲಿ ವಿಜೃಂಭಣೆಯಿಂದ ಸಂಚರಿಸಿತು.
ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಸಾಗಿದ ರಥೋತ್ಸವವು ನಾಡಿನ ಸಾಂಸ್ಕೃತಿಕ ಸೊಬಗನ್ನು ಎತ್ತಿ ಹಿಡಿದಿದೆ.
ಶಿಕಾರಿಪುರದಲ್ಲಿ ಜರುಗಿದ ಈ ಸಾಂಪ್ರದಾಯಿಕ ರಥೋತ್ಸವದಲ್ಲಿ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ರವರು ಕುಟುಂಬದ ಸದಸ್ಯರೊಂದಿಗೆ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ರಥಕ್ಕೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ, ಸಮಸ್ತ ಜನಕುಲಕ್ಕೆ ಒಳಿತಾಗಲಿ, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ, ಸ್ವಾಮಿಯ ಕೃಪಾಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸಲಾಯಿತು.
ವಿವಿಧ ಸಂಘ ಸಂಸ್ಥೆಗಳಿಂದ ಅನ್ನಸಂತರ್ಪಣೆ ಹಾಗೂ ತಂಪು ಪಾನೀಯ ವಿತರಣೆ ನಡೆಯಲಿದ್ದು, ರಾಜ್ಯಾದ್ಯಂತ ಅಸಂಖ್ಯಾತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪಾಶೀರ್ವದಕ್ಕೆ ಪಾತ್ರರಾಗಲಿದ್ದಾರೆ.