
ಶಿವಮೊಗ್ಗ : ಮಳೆಗಾಲ ಆರಂಭವಾಗಿ ಮಳೆ ಬಾರದೆ ರೈತರು ಕಂಗಾಲಾಗಿದ್ದು, ಇದರ ಬೆನ್ನಲ್ಲೆ ಕೂಡ್ಲಿ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತಾ ರೈತರು ಪಂಪ್ ಸೆಟ್ ಗೆ ಅಳವಡಿಸಿದ್ದ ಬೆಲೆಬಾಳುವ ಮೋಟಾರ್ ವಿದ್ಯುತ್ ಕೇಬಲ್ ನ ತಾಮ್ರದ ತಂತಿಗಳನ್ನೂ ಕಳವು ಮಾಡಿ, ರೈತರಿಗೆ ಆರ್ಥಿಕ ನಷ್ಟ ಹಾಗೂ ಬೆಳೆಗಳಿಗೆ ನೀರುಣಿಸಲು ಸಮಸ್ಯೆಯಾಗಿದ್ದು, ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ » ಫೋಟೋಗ್ರಫಿ, ವೀಡಿಯೋಗ್ರಫಿಯಲ್ಲಿ ಆಸಕ್ತಿ ಇದ್ದರೆ, ಈ ಸುದ್ದಿ ನಿಮಗಾಗಿ!
ರೈತರ ಕೃಷಿ ಪಂಪ್‌ಸೆಟ್, ಮೋಟಾರ್ ಮತ್ತು ವಿದ್ಯುತ್ ಕೇಬಲ್‌ಗಳ ಕಳ್ಳತನವು ಗ್ರಾಮೀಣ ಭಾಗದಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಹೆಚ್ಚುತ್ತಿದ್ದು, ಭದ್ರಾಪುರ, ಜಾವಳ್ಳಿ, ಕೂಡ್ಲಿ ಸುತ್ತಮುತ್ತಾ ಪ್ರದೇಶಗಳಲ್ಲಿ ರೈತರು ತುಂಗಾ ಹೊಳೆ ದಂಡೆ ಸಮೀಪ ಪಂಪ್ ಸೆಟ್ ಗಳನ್ನು ನೀರಿನ ಉಪಯೋಗಕ್ಕಾಗಿ ಅಳವಡಿಸಿದ್ದು, ಸುಮಾರು 40 ಕ್ಕೂ ಹೆಚ್ಚು ಮೋಟಾರ್ ಮನೆಯ ಬೀಗಗಳನ್ನು ಹೊಡೆದು, ಅದರ ಕಾಪರ್ ಕನೆಕ್ಟೆಡ್ ಕೇಬಲ್ ಗಳನ್ನೂ ಯಾರೋ ಕಿಡಿಗೇಡಿಗಳು ಕಳವು ಮಾಡುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸುಮಾರು ರೂ.3.00 ಲಕ್ಷ ಬೆಲೆ ಬಾಳುವ 40 ಕ್ಕೂ ಹೆಚ್ಚು ವಿದ್ಯುತ್ ಕೇಬಲ್ ತಂತಿಗಳನ್ನು ಕಳವು ಮಾಡಲಾಗಿದ್ದು, ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಇಂತಹ ಪ್ರಕರಣಗಳು ಹೆಚ್ಚಾಗದಂತೆ ಕೂಡಲೇ ವಿಶೇಷ ತಂಡ ರಚಿಸಿ, ಕಳ್ಳರನ್ನು ಮಟ್ಟ ಹಾಕಲು ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಭಾಗದ ಅನೇಕ ರೈತರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.