
ಶಿವಮೊಗ್ಗ : ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹೀರೋಗಳು, ರಕ್ತದಾನಕ್ಕಿಂತ ಬೇರೆ ದಾನ ಇನ್ನೊಂದಿಲ್ಲ. ಯುವಜನರು ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು. ಕೇವಲ ಒಂದು ಯುನಿಟ್ ರಕ್ತ ನಾಲ್ಕು ಜನರ ಜೀವವನ್ನು ಉಳಿಸಬಲ್ಲದು, ರಕ್ತವನ್ನು ಕೃತಕವಾಗಿ ತಯಾರಿಸಲು ಇನ್ನೂ ಸಾಧ್ಯವಾಗಿಲ್ಲದ ಕಾರಣ ರಕ್ತಕ್ಕೆ ಬಹಳ ಬೇಡಿಕೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಲ್.ಅರವಿಂದ ಕರೆ ನೀಡಿದರು.
ಇಂದು ಬೆಳಿಗ್ಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಸ್.ಆರ್.ಎನ್.ಎಂ. ಕಾಲೇಜಿನ ಆವರಣದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ವತಿಯಿಂದ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಕಾಲೇಜಿನ ವತಿಯಿಂದ ರಕ್ತದಾನ ಶಿಬಿರ ಹಾಗೂ ರಕ್ತದ ಗುಂಪು ತಪಾಸಣೆ ಸೇರಿದಂತೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಯುವಜನರು ಈ ಮಹತ್ಕಾರ್ಯಕ್ಕೆ ಹೆಚ್ಚು ಆಸಕ್ತಿಯಿಂದ ಕೈಜೋಡಿಸಬೇಕು.
– ಡಾ. ಕೆ.ಎಲ್.ಅರವಿಂದ, ಪ್ರಾಂಶುಪಾಲರು
ರಕ್ತದಾನದಿಂದ ಹೃದಯಾಘಾತ ಕಡಿಮೆ ಆಗುವುದರ ಜೊತೆಗೆ ದೇಹದಲ್ಲಿ ರಕ್ತದಾನದಿಂದ ಕೊಬ್ಬಿನಾಂಶ ಹೊರಹೋಗುವುದರಿಂದ ಸದಾ ಲವಲವಿಕೆಯಿಂದ ಇರಲು ಅನುಕೂಲವಾಗುತ್ತದೆ. ಜೊತೆಗೆ ದೀರ್ಘಾಯುಷ್ಯವುಳ್ಳವರಾಗಿರುತ್ತಾರೆ. ಜಿಲ್ಲೆಯಲ್ಲಿ ರಕ್ತದ ಕೊರತೆ ತುಂಬಾ ಹೆಚ್ಚಾಗಿದ್ದು, ಇದನ್ನು ನೀಗಿಸಲು ಯುವಕರು ರಕ್ತದಾನ ಮಾಡುವುದರಲ್ಲಿ ಮುಂದಾಗಬೇಕು. ಮೂಢನಂಬಿಕೆಯಿಂದ ಹೊರ ಬಂದು ರಕ್ತದಾನ ಮಾಡಬೇಕು.
– ಜಿ.ವಿಜಯ್ ಕುಮಾರ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ರಕ್ತದ ಗುಂಪು ತಪಾಸಣೆ ಹಾಗೂ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ರಕ್ತದಾನ ಶಿಬಿರದಲ್ಲಿ 118ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್, ಯುವ ರೆಡ್ಕ್ರಾಸ್ ಘಟಕದ ಡಾ. ದಿನಕರ್ ಹಾಗೂ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.