ಊರುಗಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ: ಮೂರು ದಿನಗಳಿಂದ ಪೂರೈಕೆ ಸ್ಥಗಿತ, ಗ್ರಾಮಸ್ಥರಿಗೆ ತೊಂದರೆ, ಅಧಿಕಾರಿಗಳು ಇತ್ತ ಗಮನಹರಿಸುವರೇ..

ಶಿವಮೊಗ್ಗ : ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಅಗತ್ಯ. ಆದರೆ ಶಿವಮೊಗ್ಗ ನಗರದ ಊರುಗಡೂರು ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನೀರು ಪೂರೈಕೆಯಾಗದೆ ಗ್ರಾಮಸ್ಥರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ನೀರು ಪೂರೈಕೆಯಲ್ಲಿನ ಅನಿಯಮಿತತೆ, ನಿಗದಿತ ಸಮಯದ ಕೊರತೆ ಹಾಗೂ ಮೀಟರ್‌ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಗ್ರಾಮದ ನೀರು ನಿರ್ವಹಣೆಯ ಬಗ್ಗೆ ಗಮನ ಸೆಳೆಯುತ್ತಿವೆ.

ಗ್ರಾಮದಲ್ಲಿ ಮೂರು ದಿನಗಳಿಂದ ನೀರು ಪೂರೈಕೆ ಇಲ್ಲದೆ ಸಮಸ್ಯೆ ಉಂಟಾಗಿರುವುದು ಒಂದೆಡೆಯಾದರೇ, ಈ ಹಿಂದೆಯೂ ಸಹ ಪ್ರತಿ ದಿನದ ನೀರು ಪೂರೈಕೆ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಯಾವ ದಿನ, ಯಾವ ಸಮಯಕ್ಕೆ ನೀರು ಬರುತ್ತದೆ ಎಂಬುದೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನ ಬೆಳಿಗ್ಗೆ, ಇನ್ನೂ ಕೆಲವು ದಿನ ಮಧ್ಯಾಹ್ನ ಅಥವಾ ಸಂಜೆ ನೀರು ಬಿಡಲಾಗುತ್ತಿದೆ. ಹೀಗೆ ಪ್ರತಿದಿನವೂ ಸಮಯ ಬದಲಾಗುತ್ತಿರುವುದರಿಂದ ಸಾರ್ವಜನಿಕರು ನೀರಿಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಊರುಗಡೂರು ಗ್ರಾಮದಲ್ಲಿ ನೀರು ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳು ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆಯ ಮಹತ್ವವನ್ನು ಎತ್ತಿ ತೋರಿಸಿವೆ. ನಿಯಮಿತ ನೀರು ಪೂರೈಕೆ, ಸ್ಪಷ್ಟ ವೇಳಾಪಟ್ಟಿ ಮತ್ತು ಸೂಕ್ತ ನಿರ್ವಹಣೆಯ ಮೂಲಕ ಇಂತಹ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಪುನಃ ಮರುಕಳಿಸದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಕಳೆದ ಮೂರು ದಿನಗಳಿಂದ ನೀರು ಪೂರೈಕೆಯಾಗದಿರುವುದು ಗಮನಕ್ಕೆ ಬಂದಿದೆ. ಪೈಪ್‌ ಹಾನಿಗೊಳಗಾದ ಕಾರಣ ನೀರು ಪೂರೈಸಲು ಸಾಧ್ಯವಾಗಿಲ್ಲ. ಪ್ರಸ್ತುತ ದುರಸ್ತಿ ಕಾರ್ಯ ನಡೆಯುತ್ತಿದೆ. ಗ್ರಾಮದಲ್ಲಿ ಮೀಟರ್‌ ವ್ಯವಸ್ಥೆ ಇಲ್ಲದ ಕಾರಣ ಹಳೆಯ ನಲ್ಲಿಗಳ ಮೂಲಕವೇ ನೀರು ಪೂರೈಸಲಾಗುತ್ತಿದೆ. ಪೈಪ್‌ ದುರಸ್ತಿ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ನೀರು ಪೂರೈಕೆ ಪುನರಾರಂಭಿಸಲಾಗುವುದು.

– ಜೀವನ್, ಇ.ಇ.


ನೀರು ಯಾವಾಗ ಬರುತ್ತದೆ ಎಂಬುದೇ ದೊಡ್ಡ ಪ್ರಶ್ನೆ!

ನೀರು ಪೂರೈಕೆಗೆ ಯಾವುದೇ ನಿಗದಿತ ವೇಳಾಪಟ್ಟಿ ಇಲ್ಲದಿರುವುದರಿಂದ ಉದ್ಯೋಗಕ್ಕೆ ತೆರಳುವವರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಯೋವೃದ್ಧರು ತೊಂದರೆ ಅನುಭವಿಸುವಂತಾಗಿದೆ. ದೈನಂದಿನ ಕೆಲಸಗಳನ್ನು ಬದಿಗಿಟ್ಟು ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ಜನರನ್ನು ಕಂಗೆಡಿಸಿದೆ. ಇನ್ನು ಮೂರು ದಿನಗಳಿಂದ ನೀರು ಪೂರೈಕೆಯಾಗದಿರುವುದು ಸಮಸ್ಯೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಗ್ರಾಮದಲ್ಲಿ ದಿನದ 24 ಗಂಟೆಯೂ ನೀರು ಲಭ್ಯವಾಗುವ ವ್ಯವಸ್ಥೆಯೂ ಇಲ್ಲ. ನೀರಿನ ಮೀಟರ್‌ ವ್ಯವಸ್ಥೆಯ ಅಳವಡಿಕೆ ಆಗಿಲ್ಲ. ಈ ಸಮಸ್ಯೆಗಳ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ. ಕುಡಿಯುವ ನೀರಿನಂತಹ ಅತ್ಯಗತ್ಯ ಸೌಲಭ್ಯದಲ್ಲಿ ಇಷ್ಟೊಂದು ಅನಿಶ್ಚಿತತೆ ಮುಂದುವರಿಯುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಅಧಿಕಾರಿಗಳು ಇತ್ತ ಗಮನಹರಿಸುವುದು ಅಗತ್ಯ :

ಊರುಗಡೂರು ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನೀರು ಪೂರೈಕೆ ಇಲಾಖೆಯ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಬೇಕಿದೆ. ಕಳೆದ ಮೂರು ದಿನಗಳಿಂದ ನೀರು ಪೂರೈಕೆಯಾಗದಿರುವುದಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚಿ, ತಕ್ಷಣ ನೀರು ಪೂರೈಕೆ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು. ಸಮಸ್ಯೆಯನ್ನು ಮುಂದೂಡದೆ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ದುರಸ್ತಿ ಹಾಗೂ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಬೇಕಿದೆ.

ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವುದು ಅಧಿಕಾರಿಗಳ ಜವಾಬ್ದಾರಿ. ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಮುಂದುವರಿಯಬಾರದು. ಊರುಗಡೂರು ಗ್ರಾಮದ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿ, ನೀರು ಪೂರೈಕೆ ವ್ಯವಸ್ಥೆಯನ್ನು ಸುಗಮಗೊಳಿಸುವುದು ಸಂಬಂಧಪಟ್ಟ ಅಧಿಕಾರಿಗಳ ಆದ್ಯತೆಯಾಗಬೇಕು. ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಅದರ ಕಾರಣ ಹಾಗೂ ನೀರು ಪುನರಾರಂಭವಾಗುವ ಸಮಯದ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡುವ ವ್ಯವಸ್ಥೆಯನ್ನೂ ಜಾರಿಗೆ ತರಬೇಕು.

ಸಮರ್ಪಕ ನಿರ್ವಹಣೆ ಅಗತ್ಯ :

ಕುಡಿಯುವ ನೀರು ಜನಜೀವನದ ಅತ್ಯಗತ್ಯ ಸೌಲಭ್ಯವಾಗಿದೆ. ಆದ್ದರಿಂದ ನೀರು ಪೂರೈಕೆಯಲ್ಲಿನ ವ್ಯತ್ಯಯದ ಸಂಸ್ಥೆಯನ್ನು ಬಗೆಹರಿಸಿ, ಪೂರೈಕೆಯನ್ನು ಪುನರಾರಂಭಿಸುವುದು ಹಾಗೂ ಪ್ರತಿದಿನ ನೀರು ಬಿಡುವ ಸಮಯವನ್ನು ನಿಗದಿಪಡಿಸುವುದು ಮುಖ್ಯವಾಗಿದೆ. ಜೊತೆಗೆ, ನೀರಿನ ಮೀಟರ್‌ಗಳ ನಿರ್ವಹಣೆ ಮತ್ತು ಪೂರೈಕೆ ವ್ಯವಸ್ಥೆಯ ಮೇಲ್ವಿಚಾರಣೆಗೆ ಆದ್ಯತೆ ನೀಡಬೇಕಿದೆ.

ಮೂರು ದಿನಗಳಿಂದ ನೀರಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಊರುಗಡೂರು ಗ್ರಾಮಸ್ಥರ ಸಮಸ್ಯೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸುವರೇ? ಎಂಬ ಸಾರ್ವಜನಿಕರ ಈ ಪ್ರಶ್ನೆಗೆ ಸಂಬಂಧಪಟ್ಟ ಇಲಾಖೆ ಕಾರ್ಯರೂಪದ ಕ್ರಮಗಳ ಮೂಲಕ ಉತ್ತರ ನೀಡಬೇಕಿದೆ ಹಾಗೂ ಪ್ರತಿನಿತ್ಯದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಗ್ರಾಮಕ್ಕೆ ನಿಯಮಿತವಾಗಿ ಕುಡಿಯುವ ನೀರು ಪೂರೈಸಿ, ಜನರ ದೈನಂದಿನ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

– ಅಮೃತ ಕೆ., ಶಿವಮೊಗ್ಗ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...