
ಶಿವಮೊಗ್ಗ : ಜಿಲ್ಲಾ ಪೊಲೀಸ್ ಮತ್ತು ಶಿವಮೊಗ್ಗ ಸಂಚಾರಿ ವೃತ್ತ ಪೊಲೀಸರು ಸಿಪಿಐ ದೇವರಾಜ್ ನೇತೃತ್ವದಲ್ಲಿ ಇಂದು ನಗರದಲ್ಲಿ ಕೇವಲ ಎಂಟು ಗಂಟೆಗಳಲ್ಲಿ ಡಿಫೆಕ್ಟಿವ್ ಮತ್ತು ನಂಬರ್ ಪ್ಲೇಟ್ ಇಲ್ಲದ 74 ವಾಹನಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ » 300 ಕೋಟಿ ರೂ.ಗಳ ವೆಚ್ಚದಲ್ಲಿ 7 ರೈಲ್ವೇ ಮೇಲ್ಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಅಸ್ತು: ಬಿ.ವೈ.ರಾಘವೇಂದ್ರ
ಇನ್ಮುಂದೆ ಈ ರೀತಿಯ ನಡವಳಿಗಳಿಗೆ ಅವಕಾಶವಿಲ್ಲ. ನಂಬರ್ ಪ್ಲೇಟ್ ಇಲ್ಲದ ಮತ್ತು ಡಿಫೆಕ್ಟಿವ್ ವಾಹನಗಳನ್ನು ಕಾನೂನು ಬಾಹಿರ ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸುವ ಸಂಭವವಿದ್ದು, ಯಾವುದೇ ಕಾರಣಕ್ಕೂ ಯಾರಿಗೂ ಕೂಡ ರಿಯಾಯಿತಿ ನೀಡುವುದಿಲ್ಲ. ಮತ್ತು ಇನ್ನು ಮುಂದೆ ನೇರ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
– ನಿಖಿಲ್, ಜಿಲ್ಲಾ ರಕ್ಷಣಾಧಿಕಾರಿಗಳು
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್, ಸದರಿ ವಾಹನಗಳ ವಿರುದ್ಧ ಕೇಂದ್ರ ಮೋಟಾರು ವಾಹನ ನಿಯಮಗಳು 1988 ನಿಯಮ 50ರ (CMV Rule 50) ಹಾಗೂ ಕಲಂ 177 ಐಎಂವಿ ಕಾಯ್ದೆಯ (IMV Act Section 177) ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬರುವ ಮುಂದಿನ ದಿನಗಳಲ್ಲಿಯೂ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವ ಸವಾರರ ವಿರುದ್ಧ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ಕಡ್ಡಾಯವಾಗಿ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಪಾಲಿಸುವಂತೆ ಕೋರಲಾಗಿದೆ.
ಬರುವ ದಿನಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಕೇಂದ್ರ ಮೋಟಾರ್ ವಾಹನ ಕಾಯ್ದೆಯ ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.