
ಶಿವಮೊಗ್ಗ : ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರು ಪ್ರಾರಂಭಿಸಿರುವ ಉಚಿತ ಜಾಬ್ ಪೋರ್ಟಲ್ ‘ಕಾಯಕ ಸೇತು’ ಮೂಲಕ ಇದೀಗ ಬೃಹತ್ ನೇಮಕಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಜೂನ್ 08, 09, 10, 11, ಮತ್ತು 12 ರಂದು ಒಟ್ಟು 05 ದಿನಗಳ ಕಾಲ ಶಿವಮೊಗ್ಗದ ವಿನೋಬನಗರದಲ್ಲಿನ ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ, ವಲಯ-01, 02ನೇ ಮಹಡಿ ಪೊಲೀಸ್ ಚೌಕಿ ಬಳಿ ಇರುವ ಡಾ. ಧನಂಜಯ ಸರ್ಜಿ ಅವರ ಜನಪರ ಜೀವಪರ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ.
ಬೆಂಗಳೂರಿನ ಪ್ರತಿಷ್ಠಿತ ಫೋನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯೊಂದರಲ್ಲಿ ಖಾಲಿ ಇರುವ 2000ಕ್ಕೂ ಹೆಚ್ಚು ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಶಿವಮೊಗ್ಗದಲ್ಲಿ ಬೃಹತ್ ಉದ್ಯೋಗ ಸಂದರ್ಶನ ಆಯೋಜಿಸಲಾಗಿದೆ.
ಜಿಲ್ಲೆಯ ಯುವಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಡಾ. ಧನಂಜಯ ಸರ್ಜಿ ಅವರು ಶಿವಮೊಗ್ಗದ ತಮ್ಮ ಶಾಸಕರ ಕಚೇರಿಯಲ್ಲಿ 7 ತಿಂಗಳ ಹಿಂದೆ ‘ಕಾಯಕ ಸೇತು’ ಜಾಬ್ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿದ್ದರು. ಕೇವಲ 7 ತಿಂಗಳ ಅಲ್ಪಾವಧಿಯಲ್ಲೇ ಈ ಪೋರ್ಟಲ್ ಮೂಲಕ ನೂರಾರು ಯುವಕ-ಯುವತಿಯರು ಯಶಸ್ವಿಯಾಗಿ ಉದ್ಯೋಗ ಪಡೆದುಕೊಂಡಿದ್ದಾರೆ. ಇದರ ಮುಂದುವರಿದ ಭಾಗವಾಗಿ, ಇದೀಗ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಬೆಂಗಳೂರಿನಲ್ಲಿರುವ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯು ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು, ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುವುದು. ಈ ಹುದ್ದೆಗಳು ಮಹಿಳೆಯರಿಗೆ ಸುರಕ್ಷಿತ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿವೆ.

10ನೇ ತರಗತಿ, ಪಿಯುಸಿ (PUC), ಡಿಪ್ಲೊಮಾ, ಐಟಿಐ (ITI) ಅಥವಾ ಯಾವುದೇ ಪದವಿ (ಪಾಸ್ ಅಥವಾ ಫೇಲ್) ಆದ 18 ರಿಂದ 34 ವರ್ಷದೊಳಗಿನ ಮಹಿಳೆಯರು ಸಂದರ್ಶನಕ್ಕೆ ಪಾಲ್ಗೊಳ್ಳಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ, ಉಚಿತ ವಸತಿ, ಉಚಿತ ಕ್ಯಾಬ್ (ಸಾರಿಗೆ) ಸೌಲಭ್ಯ, ಪಿಎಫ್ ಮತ್ತು ಇಎಸ್ಐ (ಪಿ.ಎಫ್ & ಇ.ಎಸ್.ಐ), ಹಾಗೂ 24×7 ವೈದ್ಯಕೀಯ ಸೌಲಭ್ಯಗಳನ್ನು ಕಂಪನಿಯೇ ಸಂಪೂರ್ಣವಾಗಿ ಒದಗಿಸಲಿದೆ.
ಆಸಕ್ತ ಮಹಿಳಾ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಮುನ್ನ ಕಡ್ಡಾಯವಾಗಿ ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ ‘ಕಾಯಕ ಸೇತು’ ಸಹಾಯವಾಣಿ ಮೊಬೈಲ್ ಸಂಖ್ಯೆ : 93797 22233 ಹಾಗೂ 98800 05533 ಅನ್ನು ಸಂಪರ್ಕಿಸಬಹುದು.
ಶಿವಮೊಗ್ಗ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ನಿರುದ್ಯೋಗಿ ಮಹಿಳೆಯರು ಈ ಸುವರ್ಣ ಅವಕಾಶವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.