
ಶಿವಮೊಗ್ಗ : ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ರಸ್ತೆ ವಿಸ್ತರಣೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಭೀಕರ ರಸ್ತೆ ಕುಸಿತದ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ » ಏ.15 ಮತ್ತು 16 ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ
ಈ ವೇಳೆ ಮಾತನಾಡಿದ ಅವರು, ಈ ದುರಂತದಲ್ಲಿ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾ ಅವರ ಕುಟುಂಬದವರಿಗೆ ನನ್ನ ಸಂತಾಪಗಳನ್ನು ಅರ್ಪಿಸುತ್ತೇನೆ. ಮೃತರ ಕುಟುಂಬಗಳಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ಪರಿಹಾರ ಘೋಷಿಸಿದ್ದು, ಅದನ್ನು ಶೀಘ್ರವಾಗಿ ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಹಾಗೂ ಉಡುಪಿ ಭಾಗಗಳನ್ನು ಸಂಪರ್ಕಿಸುವ ಈ ಪ್ರಮುಖ ಮಾರ್ಗವು ಸಂಪೂರ್ಣ ಕುಸಿದಿರುವುದರಿಂದ ನೂರಾರು ಗ್ರಾಮಗಳ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣವೇ ಪರ್ಯಾಯ ಸಂಚಾರ ವ್ಯವಸ್ಥೆಗಳನ್ನು ಜಾರಿಗೆ ತರಲು ಮತ್ತು ದುರಸ್ತಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಜನರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಎಕ್ಸ್‌ಚೇಂಜ್ ವ್ಯವಸ್ಥೆ ಹಾಗೂ ಅಗತ್ಯ ಸಂಖ್ಯೆಯ ಬಸ್ ಸಂಚಾರಕ್ಕೆ ತಕ್ಷಣದ ವ್ಯವಸ್ಥೆ ಮಾಡಲಾಗುವುದು.
– ಸತೀಶ್ ಜಾರಕಿಹೋಳಿ, ಲೋಕೋಪಯೋಗಿ ಸಚಿವರು
ಈ ಘಾಟ್ ಮಾರ್ಗದ ತಿರುವುಗಳು ಅಪಾಯಕಾರಿಯಾಗಿರುವುದರಿಂದ ವಾಹನ ಸವಾರರು ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೋರುತ್ತೇನೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ತಾಂತ್ರಿಕವಾಗಿ ಪರಿಶೀಲಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ಮಲೆನಾಡಿನ ಜನರ ಸಂಚಾರ ಸುಗಮಗೊಳಿಸಲು ಮತ್ತು ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಘಾಟಿಯ ಕೆಳಭಾಗದ ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಅವರು ಸ್ಥಳೀಯರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಾಸಕ ಆರಗ ಜ್ಞಾನೇಂದ್ರ ಕಾಮಗಾರಿ ಮತ್ತು ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ತೀರ್ಥಹಳ್ಳಿ, ನಗರ ಭಾಗದ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ » ಹುಲಿಕಲ್ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ತಾತ್ಕಾಲಿಕ ಬಂದ್, ಪರ್ಯಾಯ ಮಾರ್ಗ ವ್ಯವಸ್ಥೆ