
ರಿಪ್ಪನ್ ಪೇಟೆ : ಸಮೀಪದ ಹೆದ್ದಾರಿಪುರದ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನದ ಆವರಣದಲ್ಲಿ ವಿಜಯನಗರಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದ್ದು, ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಮಹತ್ವದ ದಾಖಲೆ ಲಭಿಸಿದೆ.
ಸಂಶೋಧಕರಾದ ಆದಿತ್ಯ ನಂಜವಳ್ಳಿ, ಗಣೇಶ್ ಕೆ.ಎನ್ ಹಾಗೂ ಪತ್ರಕರ್ತ ಎನ್.ಕಾರ್ತಿಕ್ ಕೌಂಡಿನ್ಯ ಅವರು ಈ ಶಾಸನವನ್ನು ಪತ್ತೆಹಚ್ಚಿ ಅಧ್ಯಯನ ನಡೆಸಿದ್ದಾರೆ. ಈ ಶಾಸನವು ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ ಎಂದು ಗುರುತಿಸಲಾಗಿದೆ.
ಈ ದಾನ ಶಾಸನದಲ್ಲಿ ಕಲ್ಲೂರು ಗ್ರಾಮವನ್ನು ಕಲೂರ ನಾಡು ಎಂದು ಉಲ್ಲೇಖಸಲಾಗಿದೆ. ಇದರಿಂದ ಈ ಭಾಗದ ಐತಿಹಾಸಿಕ ಹಿನ್ನೆಲೆಯನ್ನು ಮತ್ತಷ್ಟು ಬಲಪಡಿಸುವಂತಾಗಿದೆ.
ವಿಜಯನಗರ ಸಾಮ್ರಾಜ್ಯದ ಅಧೀನ ರಾಜ್ಯವಾಗಿ ಆರಗನಾಡು ಅಸ್ತಿತ್ವಕ್ಕೆ ಬಂದಿದ್ದರಿಂದ ಈ ನಾಡಿನ ಕೆಲವು ಪ್ರದೇಶಗಳನ್ನು ವಿಜಯನಗರ ಸಾಮ್ರಾಜ್ಯಕ್ಕೆ ಅನೇಕ ಕಾರಣಗಳಿಂದ ದಾನ ದತ್ತಿ ಕೊಟ್ಟ ಬಗ್ಗೆ ಶಾಸನಗಳಲ್ಲಿ ಮಾಹಿತಿ ಲಭಿಸುತ್ತದೆ. ಇಲ್ಲಿ ಸಿಕ್ಕಿರುವ ಶಾಸನದಿಂದ ಅಂದಿನ ರಾಜರ ಮಾಹಿತಿ ಮಾತ್ರವಲ್ಲದೆ ಸ್ಥಳೀಯ ಗ್ರಾಮಗಳ ಗಡಿಗಳು ಲಭ್ಯವಾಗಿದೆ. ಗ್ರಾಮಗಳ ವಿಸ್ತೀರ್ಣದ ಮಾಹಿತಿ ಸ್ಥಳೀಯ ಅಧ್ಯಯನದ ದೃಷ್ಟಿಯಿಂದ ಮಹತ್ವದ್ದಾಗಿದೆ.
– ಆದಿತ್ಯ ನಂಜವಳ್ಳಿ, ಸಂಶೋಧಕರು
ನಮ್ಮ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಇಷ್ಟು ಹಳೆಯ ವಿಜಯನಗರ ಕಾಲದ ಶಾಸನ ಪತ್ತೆಯಾಗಿರುವುದು ನಮಗೆ ಹೆಮ್ಮೆಯ ವಿಷಯ. ಇದರಿಂದ ನಮ್ಮ ಕಲೂರ ನಾಡಿನ ಇತಿಹಾಸ ಎಲ್ಲರಿಗೂ ತಿಳಿಯುವಂತಾಗಿದೆ.
– ವೀರಭದ್ರಪ್ಪ ಗೌಡ, ಸ್ಥಳೀಯರು
ಶಾಸನದಲ್ಲಿರುವ ಮಾಹಿತಿಯ ಪ್ರಕಾರ, ಕ್ರಿ.ಶ. 1424 (ಶಕವರ್ಷ 1346)ರಲ್ಲಿ ಮೂರನೇ ಬುಕ್ಕರಾಯನ ಮಗನಾದ ಎರಡನೇ ದೇವರಾಯನು ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ಈ ದಾನ ನಡೆದಿದೆ. ಆರಗದನಾಡಿನ ವ್ಯಾಪ್ತಿಗೆ ಸೇರಿದ ಕಲೂರುನಾಡನ್ನು ಹಂಪಿಯ ಪ್ರಸಿದ್ಧ ವಿರೂಪಾಕ್ಷ ದೇವರಿಗೆ ಅಮೃತಪಡಿ (ನೈವೇದ್ಯ) ಸೇವೆಗಾಗಿ ಧಾರೆಯೆರೆದು ಕೊಟ್ಟಿರುವುದಾಗಿ ಶಾಸನವು ವಿವರಿಸುತ್ತದೆ. ಇದರಿಂದ ಆ ಕಾಲದಲ್ಲಿ ದೇವಾಲಯಗಳ ನಿರ್ವಹಣೆ ಮತ್ತು ಪೂಜಾ ಕಾರ್ಯಗಳಿಗೆ ಭೂದಾನ ನೀಡುವ ಪರಂಪರೆ ಎಷ್ಟು ಮಹತ್ವದ್ದಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಇದಲ್ಲದೆ, ಶಾಸನದಲ್ಲಿ ವಿಜಯನಗರದ ಅರಸರಾದ ಮೂರನೇ ಬುಕ್ಕರಾಯನನ್ನು “ಮಹಾರಾಜಾದಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ವಿಜಯಬುಕ್ಕರಾಯ” ಎಂದು ಹಾಗೂ ಎರಡನೇ ದೇವರಾಯನನ್ನು “ವೀರಪ್ರತಾಪದೇವರಾಯ ಮಹಾರಾಯ” ಎಂದು ಕೊಂಡಾಡಲಾಗಿದೆ. ಈ ಬಿರುದುಗಳು ಆ ಕಾಲದ ರಾಜಕೀಯ ವೈಭವ ಮತ್ತು ಶೌರ್ಯವನ್ನು ಪ್ರತಿಬಿಂಬಿಸುತ್ತವೆ.
ಶಾಸನದಲ್ಲಿ ಕಲೂರನಾಡಿನ ಗಡಿಭಾಗಗಳಾಗಿ ಒಡರಸುಳಿ (ವಡಾಹೊಸಳ್ಳಿ), ಬಿದರಹಳ್ಳಿ, ತೆಳಲ (ತಳಲೆ), ಕಣಬಂದೂರು, ಕರಡಿಗ ಮತ್ತು ಕಕರಿಯ ಗ್ರಾಮಗಳ ಉಲ್ಲೇಖವಿದೆ. ಇದರಿಂದ ಆ ಕಾಲದ ಭೌಗೋಳಿಕ ವ್ಯಾಪ್ತಿ ಮತ್ತು ಆಡಳಿತ ವ್ಯವಸ್ಥೆಯ ಕುರಿತು ಅಮೂಲ್ಯ ಮಾಹಿತಿಗಳು ದೊರೆಯುತ್ತವೆ.
ಶಾಸನ ಪತ್ತೆಯು ವಿಜಯನಗರ ಕಾಲದ ಧಾರ್ಮಿಕ ದಾನ ಸಂಪ್ರದಾಯ, ಗ್ರಾಮೀಣ ಆಡಳಿತ ಮತ್ತು ಸ್ಥಳೀಯ ಇತಿಹಾಸದ ಕುರಿತು ಹೆಚ್ಚಿನ ಬೆಳಕು ಚೆಲ್ಲುವುದರ ಜೊತೆಗೆ, ಈ ಭಾಗದ ಪುರಾತತ್ವ ಮಹತ್ವವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.
ಈ ಸಂದರ್ಭದಲ್ಲಿ ಶ್ರೀ ಬಸವಣ್ಣ ದೇವಸ್ಥಾನದ ಅಧ್ಯಕ್ಷರಾದ ನಾಗರಾಜ್ ವೈ.ಟಿ, ಗೌರವಾಧ್ಯಕ್ಷ ವೀರಭದ್ರಪ್ಪ ಗೌಡ, ಗಿರಿರಾಜ್ ಗೌಡ, ಮಂಜುನಾಥ್, ಆದರ್ಶ ಕಲ್ಲೂರು, ಶಿವಣ್ಣ , ಚಂದ್ರಹಾಸ, ಮಲ್ಲಿಕಾರ್ಜುನ, ದಾನಪ್ಪ, ಆದರ್ಶ ಮೂಗುಡ್ತಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ » ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ಸೇರಿದಂತೆ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ, ಯಾವಾಗ?