
ಶಿವಮೊಗ್ಗ : ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಮಹಿಳೆಯರು ಸಂಭ್ರಮ, ಸಡಗರದಿಂದ ಆಚರಿಸಿದರು.
ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಹಬ್ಬ ಎಂದೇ ಪ್ರಸಿದ್ದಿ ಪಡೆದಿದ್ದು, ಎಲ್ಲೆಡೆ ವರಮಹಾಲಕ್ಷ್ಮಿಯ ಹಬ್ಬದ ಸಡಗರ ಕಂಡುಬಂದಿತು. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನ ಗಳಲ್ಲಿ ವಿಶೇಷ ಪೂಜೆ ಕೈಂಕರ್ಯ ನಡೆದವು.
ಹೆಣ್ಣುಮಕ್ಕಳು ತಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಹೆಂಗಳೆಯರು, ಮಕ್ಕಳು ಮುಂಜಾನೆಯೇ ಎದ್ದು ಮನೆಯ ಮುಂದೆ ರಂಗೋಲಿ ಹಾಕಿ, ತೋರಣ ಕಟ್ಟಿ, ಲಕ್ಷ್ಮೀ ದೇವಿಯ ಸ್ತೋತ್ರ, ವ್ರತ ಆಚರಣೆ ಮಾಡಿದರು.
ಭಕ್ತರು ದೇವಸ್ಥಾನಕ್ಕೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ವಿವಿಧ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆಯಿಂದಲೇ ಭಕ್ತರು ಸರತಿಯಲ್ಲಿ ನಿಂತು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.