ಸಕ್ರೈಬೈಲು ಆನೆ ಬಿಡಾರದಲ್ಲಿ ‘ವಿಶ್ವ ಆನೆ ದಿನಾಚರಣೆ’ ಸಂಭ್ರಮ: ಆನೆಗಳಿಗೆ ವಿಶೇಷ ಪೂಜೆ, ಸಿಹಿ ಉಪಹಾರ

ಶಿವಮೊಗ್ಗ : ‘ವಿಶ್ವದಾದ್ಯಂತ ಆನೆಗಳನ್ನು ಸಂರಕ್ಷಿಸಲು ಒಗ್ಗೂಡುವುದು’ ಎಂಬ ಆಶಯದೊಂದಿಗೆ ಶಿವಮೊಗ್ಗದ ಪ್ರಸಿದ್ಧ ಸಕ್ರೈಬೈಲು ಆನೆ ಬಿಡಾರದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಸರಳತೆಯಿಂದ ಆಚರಿಸಲಾಯಿತು.

ರಾಜ್ಯದ ಎರಡನೇ ಅತಿ ದೊಡ್ಡ ಆನೆ ಬಿಡಾರ ಎಂಬ ಖ್ಯಾತಿ ಪಡೆದಿರುವ ಶಿವಮೊಗ್ಗದ ಗಾಜನೂರು ಬಳಿಯ ಸಕ್ರೈಬೈಲು ಬಿಡಾರದಲ್ಲಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಿದವು.

ಈವರೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಎಂದಿನಂತೆ ಆನೆ ದಿನಾಚರಣೆ ನಡೆಸುತ್ತಿದ್ದೆವು, ಆದರೆ ಪ್ರಸ್ತುತ ಬಿಡಾರಕ್ಕೆ ನಿರ್ಬಂಧ ಇರುವ ಕಾರಣದಿಂದ ಕ್ರಾಲ್ ನಲ್ಲಿ ಆಚರಿಸುತ್ತಿದ್ದೇವೆ. ನಮ್ಮ ಆನೆ ಬಿಡಾರದಲ್ಲಿ ಒಟ್ಟು 19 ಗಂಡು ಮತ್ತು 5 ಹೆಣ್ಣು ಸೇರಿ ಒಟ್ಟು 24 ಆನೆಗಳು ಇವೆ. ಇಂದಿನ ಪೂಜೆಯಲ್ಲಿ 13 ಆನೆಗಳು ಪಾಲ್ಗೊಂಡಿದ್ದವು. ಜನವಸತಿ ಪ್ರದೇಶಗಳಲ್ಲಿ ಉಪಟಳ ನೀಡುವ ಆನೆಗಳನ್ನು ಹಿಡಿಯಲು ವಿಶೇಷ ತಂಡವನ್ನು ರಚಿಸಿದ್ದೇವೆ.

– ಪ್ರಸನ್ನಕೃಷ್ಣ ಪಟಗಾ‌ರ್, ವನ್ಯಜೀವಿ ವಿಭಾಗದ ಡಿಎಫ್ಓ, ಶಿವಮೊಗ್ಗ


ವಿಶ್ವ ಆನೆ ದಿನಾಚರಣೆ ಅಂಗವಾಗಿ ಬಿಡಾರದಲ್ಲಿದ್ದ 24 ಆನೆಗಳನ್ನೂ ಅಚ್ಚುಕಟ್ಟಾಗಿ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಆನೆಗಳಿಗೆ ಪ್ರಿಯವಾದ ಕಬ್ಬು, ವಿಧವಿಧದ ಹಣ್ಣು-ಹಂಪಲುಗಳು ಹಾಗೂ ಸಿಹಿ ತಿನಿಸುಗಳನ್ನು ನೀಡಿ ಆನೆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಾವುತರು ಹಾಗೂ ಕಾವಾಡಿಗರು ತಮ್ಮ ಪ್ರೀತಿಯ ಆನೆಗಳನ್ನು ಆರೈಕೆ ಮಾಡುವ ಮೂಲಕ ಸಂಭ್ರಮಿಸಿದರು.

ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಗದ್ದಲವಿಲ್ಲದೆ ಬಿಡಾರದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಸರಳವಾಗಿ ಕಾರ್ಯಕ್ರಮ ನಡೆಸಿದರು. ವನ್ಯಜೀವಿ ವಿಭಾಗದ ಡಿಎಫ್ಓ ಪ್ರಸನ್ನಕೃಷ್ಣ ಪಟಗಾರ ಅವರು ಭಾಗವಹಿಸಿ, ಆನೆಗಳ ಸಂರಕ್ಷಣೆ ಮತ್ತು ವನ್ಯಜೀವಿಗಳ ಮಹತ್ವದ ಕುರಿತು ಜಾಗೃತಿ ಸಂದೇಶ ನೀಡಿದರು.

ಈ ವೇಳೆ ಆನೆಗಳ ಆರೋಗ್ಯದ ವಿಚಾರವಾಗಿ ಮಾತನಾಡಿದ ಶಿವಮೊಗ್ಗ ಡಿಎಫ್‌ಒ ಪ್ರಸನ್ನಕೃಷ್ಣ ಪಟಗಾ‌ರ್, ಹಿಂದೆ ಅಡ್ಕಾ ಬಡ್ಕಾ ಆನೆಗೆ ಚಿಕಿತ್ಸೆ ನೀಡಲಾಗಿದ್ದು, ಅದು ಈಗ ಸಂಪೂರ್ಣ ಗುಣಮುಖವಾಗಿದೆ. ವಿಕ್ರಾಂತ್ ಆನೆಗೆ ಸ್ವಲ್ಪ ಕಾಲು ನೋವಿದ್ದು, ಮುಂದಿನ 20 ದಿನಗಳಲ್ಲಿ ಸರಿಯಾಗಲಿದೆ. ಹಾಗೆಯೇ ಸಾಗರ ಆನೆಯೂ ಸಹ ಸಂಪೂರ್ಣವಾಗಿ ಗುಣಮುಖವಾಗಿದೆ. ಬಾಲಣ್ಣಸಹ ಸಂಪೂರ್ಣವಾಗಿ ಗುಣವಾಗಿದ್ದು, ಬಾಲಣ್ಣ ಸೇರಿದಂತೆ ಒಟ್ಟು 2 ಆನೆಗಳು ಸದ್ಯ ಮದದಲ್ಲಿವೆ ಎಂದು ವಿವರಿಸಿದರು.

ಆನೆ ಬಿಡಾರಕ್ಕೆ ಪ್ರವೇಶ ಹಾಗೂ ಭದ್ರತಾ ವಿಚಾರಗಳ ಕುರಿತು ಮಾತನಾಡಿದ ಶಿವಮೊಗ್ಗ ವನ್ಯಜೀವ ವಿಭಾಗದ ಡಿಎಫ್‌ಒ, ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಸ್‌ಒಪಿ ನಿಯಮಗಳನ್ನು ಅಳವಡಿಸುತ್ತಿದ್ದೇವೆ. ಇದರ ಭಾಗವಾಗಿ ಬಿಡಾರದಲ್ಲಿ ಬ್ಯಾರಿಕೇಡ್‌ ಹಾಗೂ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದ್ದು ಈಗಾಗಲೇ ಬಿಡಾರದಲ್ಲಿ 4 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಮತ್ತು ಇನ್ನು 2 ಸಿಸಿಟಿವಿಗಳನ್ನು ಅಳವಡಿಸಬೇಕಿದೆ. ಮುಂದುವರಿದು, ಪ್ರವಾಸಿಗರಿಗೆ ಆನೆಗಳಿಗೆ ಸ್ನಾನ ಮಾಡಿಸಲು ಅವಕಾಶ ಇರುವುದಿಲ್ಲ, ಆದರೆ ಆನೆಗಳನ್ನು ನೋಡಲು ಅವಕಾಶ ಇರುತ್ತದೆ. ಈ ತಿಂಗಳ ಅಂತ್ಯದೊಳಗೆ ಎಲ್ಲ ಪ್ರಕ್ರಿಯೆಯನ್ನು ಮುಗಿಸಿ ಬಿಡಾರವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಸಾಧ್ಯತೆ ಇದೆ ಎಂದು ಹೇಳಿದರು.

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...