
ಶಿವಮೊಗ್ಗ : ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯು ಒಟ್ಟಾರೆ ಶೇ.96.56 ಫಲಿತಾಂಶ ದಾಖಲಿಸುವ ಮೂಲಕ ರಾಜ್ಯ ಮಟ್ಟದಲ್ಲಿ 9ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಜಿಲ್ಲೆಯಿಂದ ಒಟ್ಟು 21,692 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 20,946 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲ್ಲೂಕುವಾರು ಸಾಧನೆ :
ತಾಲ್ಲೂಕುವಾರು ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲ್ಲೂಕು ಶೇ.99.60 ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ, ಸಾಗರ ಶೇ.99.01 ಮತ್ತು ಹೊಸನಗರ ಶೇ.98.90 ಫಲಿತಾಂಶದೊಂದಿಗೆ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿವೆ. ಉಳಿದಂತೆ ಸೊರಬ ಶೇ.96.77, ಶಿವಮೊಗ್ಗ ಶೇ.96.55, ಶಿಕಾರಿಪುರ ಶೇ.94.79 ಹಾಗೂ ಭದ್ರಾವತಿ ಶೇ.94.00 ಫಲಿತಾಂಶ ದಾಖಲಿಸಿವೆ.
ಟಾಪರ್ಸ್ ಪಟ್ಟಿ (620ಕ್ಕೂ ಹೆಚ್ಚು ಅಂಕ ಪಡೆದವರು) :
ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರ ಪಟ್ಟಿಯಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಅನಘ ಕೆ.ಎಸ್. 624 ಅಂಕ ಗಳಿಸಿ ಮುಂಚೂಣಿಯಲ್ಲಿದ್ದಾರೆ. ಶಿವಮೊಗ್ಗದ ಪ್ರಿಯದರ್ಶಿನಿ ಪ್ರೌಢಶಾಲೆಯ ಕೃತಿ ಪಿ.ಎಸ್. 623 ಅಂಕ, ಭದ್ರಾವತಿಯ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಅಕುಲ್ ವಿಷ್ಣು ಭಟ್ 622 ಅಂಕ ಮತ್ತು ಶಿಕಾರಿಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೇಶವ ಜಿ. 622 ಅಂಕ, ವಿಕಾಸ್ ಪ್ರೌಢಶಾಲೆಯ ಚಿತ್ಸುಕಿ ಆರ್ ನಾಡಿಗ್ 621, ನವಜ್ಯೋತಿ ಇಂಗ್ಲಿಷ್ ಪ್ರೌಢಶಾಲೆಯ ದೇವಿ ಪ್ರಸಾದ್ ಹೆಚ್.ಯು 621, ಭದ್ರಾವತಿಯ ಸೇಂಟ್ ಮೇರಿಸ್ ಇಂಗ್ಲಿಷ್ ಪ್ರೌಢಶಾಲೆಯ ಚಾರ್ವಿ ಎಂ 620, ಸಾಗರದ ಕ್ರಿಯೇಟಿವಿಟಿ ಇಂಟರ್ ನ್ಯಾಷನಲ್ ಇಂಗ್ಲಿಷ್ ಪ್ರೌಢಶಾಲೆಯ ಪೂರ್ವ ವಿಬಪಟೇಲ್ 620 ಅಂಕ, ಶಿವಮೊಗ್ಗದ ಡಿವಿಎಸ್ ಪ್ರೌಢಶಾಲೆಯ ಶಾಂಭವಿ ಕೆ.ಪಿ. 620 ಅಂಕಗಳು ಪಡೆದಿದ್ದು ಇವರು ಅತಿ ಹೆಚ್ಚು ಅಂಕ ಪಡೆದ ಪ್ರಮುಖ ವಿದ್ಯಾರ್ಥಿಗಳಾಗಿದ್ದಾರೆ.
ಪರೀಕ್ಷೆ-2 ಮತ್ತು ಶುಲ್ಕದ ಮಾಹಿತಿ :
2025-26ರ ಸಾಲಿನಲ್ಲಿ ಪರೀಕ್ಷೆ-1ರಲ್ಲಿ ಉತ್ತೀರ್ಣರಾಗಿ ಕೇವಲ ತೃತೀಯ ಭಾಷಾ ವಿಷಯದಲ್ಲಿ ಫಲಿತಾಂಶ ಸುಧಾರಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ-2ಕ್ಕೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಆದರೆ, ಉಳಿದ ವಿಷಯಗಳಲ್ಲಿ ಫಲಿತಾಂಶ ಸುಧಾರಿಸಿಕೊಳ್ಳಲು ಬಯಸುವವರು ಮತ್ತು ಪುನರಾವರ್ತಿತ ಅಭ್ಯರ್ಥಿಗಳು ನಿಗದಿಪಡಿಸಿದ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು.
ದೀರ್ಘಕಾಲದ ಗೈರುಹಾಜರಿಯಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಹೊಸ ಖಾಸಗಿ ವಿದ್ಯಾರ್ಥಿಗಳಾಗಿ ತಾವು ಓದಿದ ಶಾಲೆಯ ಮೂಲಕವೇ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಇವರು ನೋಂದಣಿ ಶುಲ್ಕ ಪಾವತಿಸಬೇಕಿರುತ್ತದೆ ಎಂದು ಡಿಡಿಪಿಐ ಮಂಜುನಾಥ್ ತಿಳಿಸಿದ್ದಾರೆ.